ಅಥಣಿ

ಹೆಚ್ಚು ತೆರಿಗೆ ವಿಧಿಸಿದ್ದರಿಂದ ತೈಲ ಬೆಲೆ ಏರಿಕೆ: ಮಂಗಸೂಳಿ

ಹೆಚ್ಚು ತೆರಿಗೆ ವಿಧಿಸಿದ್ದರಿಂದ ತೈಲ ಬೆಲೆ ಏರಿಕೆ: ಮಂಗಸೂಳಿ
ಪೆಟ್ರೋಲ್ ಮತ್ತು ಡಿಸೈಲ್ ಬೇಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು.

ಅಥಣಿ 14: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನೇತೃತ್ವದಲ್ಲಿ ಅಥಣಿ ಪಟ್ಟಣದ 11 ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಸತ್ತಿ ಪೆಟ್ರೋಲ್ ಬಂಕ್ ಎದುರು ಗಜಾನನ ಮಂಗಸೂಳಿ, ಜತ್ತ-ಜಾಬೋಟಿ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ ಎದುರು ಪುರಸಭೆಯ ಮಾಜಿ ಅಧ್ಯಕ್ಷ ರಾವಸಾಹೇಬ ಐಹೊಳೆ, ಜೇವರ್ಗಿ-ಸಂಕೇಶ್ವರ ರಾಜ್ಯ ಹೆದ್ದಾರಿಯಲ್ಲಿರುವ ಪೆಟ್ರೋಲ್ ಬಂಕ ಎದುರು ಅಲ್ಪ ಸಂಖ್ಯಾತ ಘಟಕದ ಅಸ್ಲಂ ನಾಲಬಂದರೊಂದಿಗೆ ನೂರಾರು ಕಾರ್ಯಕರ್ತರು ಪ್ರತಿಭಟಿಸಿದರು.  

ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ ದೇಶದ ಇತಿಹಾಸದಲ್ಲಿಯೇ ಪೆಟ್ರೋಲ್ ಮತ್ತು ಡಿಸೈಲ್ ಬೆಲೆ ಶತಕ ಬಾರಿಸಿದ್ದು ಇದೇ ಮೊದಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ ಕೂಡ ಭಾರತದಲ್ಲಿ ಮಾತ್ರ ಹೆಚ್ಚು ತೆರಿಗೆ ವಿಧಿಸಿ ಪೆಟ್ರೋಲ್ ಮತ್ತು ಡಿಸೈಲ್ ಬೆಲೆ ಹೆಚ್ಚಾಗುವಂತೆ ಮಾಡಿದ್ದಾರೆ ಎಂದ ಅವರು ಪೆಟ್ರೋಲ್ ಮತ್ತು ಡಿಸೈಲ್ ಬೆಲೆ ಹೆಚ್ಚಾದ ಪರಿಣಾಮ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ಆರೋಪಿಸಿದರು.  

ಎಸ್‌.ಸಿ ಘಟಕದ ಅಧ್ಯಕ್ಷ ರಾವಸಾಹೇಬ ಐಹೊಳೆ ಮಾತನಾಡಿ, ಪೆಟ್ರೋಲ್ ಹಾಗೂ ಡಿಸೈಲ್ ಬೆಲೆ ಏರಿಕೆ ಕಂಡಿದ್ದರಿಂದ ದೇಶದಲ್ಲಿ ಜನ ಎರಡು ಹೊತ್ತು ಊಟ ಮಾಡಲೂ ಕೂಡ ಸಾಧ್ಯವಾಗದಷ್ಟು ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡಿದೆ. ಸರಕಾರ ನಡೆಸುವುದು ಕೇವಲ ತೆರಿಗೆ ಸಂಗ್ರಹಕ್ಕಲ್ಲ ದೇಶದ ಜನತೆಗೆ ಒಳಿತು ಮಾಡಲು ಎಂದ ಅವರು ತಕ್ಷಣ ಪೆಟ್ರೋಲ್ ಮತ್ತು ಡಿಸೈಲ್ ಬೆಲೆ ನಿಯಂತ್ರಿಸಿ ಬೆಲೆ ಏರಿಕೆಯನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು.  

ಅಲ್ಪ ಸಂಖ್ಯಾತ ಘಟಕದ ಅಸ್ಲಂ ನಾಲಬಂದ ಮಾತನಾಡಿ, ಮೋದಿ 7 ವರ್ಷಗಳಿಂದ ಅಧಿಕಾರ ನಡೆಸುತ್ತಿದ್ದಾರೆ ಈ ಅವಧಿಯಲ್ಲಿ ಅವರು ಬಡ ಮತ್ತು ಮಧ್ಯಮ ವರ್ಗದವರಿಗೆ ಅನಕೂಲವಾಗುವ ನಿಟ್ಟಿನಲ್ಲಿ ಯಾವುದೇ ಯೋಜನೆ ಜಾರಿಗೊಳಿಸಿಲ್ಲ ಎಂದ ಅವರು ಮೋದಿ ಸರಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.  

ಜತ್ತ ರಸ್ತೆಯ ಪೆಟ್ರೋಲ್ ಬಂಕ ಎದುರು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ರವಿ ಬಡಕಂಬಿ ಜೊತೆಗೆ ನೂರಾರು ಯುವ ಕಾರ್ಯರ್ತರು ಪ್ರತಿಭಟಿಸಿದರು.  

ರವಿ ಬಡಕಂಬಿ ಮಾತನಾಡಿ ಕಳೆದ 6 ತಿಂಗಳಿನಿಂದಲೂ ಪೆಟ್ರೋಲ್ ಮತ್ತು ಡಿಸೈಲ್ ಬೇಲೆ ಏರಿಕೆಯಾಗುತ್ತಲೇ ಇದೆ ಆದರೆ ಇದನ್ನು ಕೇಂದ್ರ ಸರಕಾರ ಮಾತ್ರ ನಿಯಂತ್ರಿಸುತ್ತಲೇ ಇಲ್ಲ ಎಂದು ಆರೋಪಿಸಿದರು.  

ಅಥಣಿ ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಸಿಂಗೆ, ತೆಲಸಂಗ ಬ್ಲಾಕ್ ಅಧ್ಯಕ್ಷ ಶ್ರೀಕಾಂತ ಪೂಜಾರಿ, ಜಿಲ್ಲಾ ಪಂಚಾಯತ ಸದಸ್ಯ ಬಸವರಾಜ ಬುಟಾಳಿ, ಧುರೀಣರಾದ ಎಸ್‌.ಕೆ.ಬುಟಾಳಿ, ಸುನೀಲ ಸಂಕ, ಅನೀಲ ಸುಣಧೋಳಿ, ರಾಜು ಜಮಖಂಡಿಕರ, ಶಿವು ಗುಡ್ಡಾಪೂರ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.  

ಸುದ್ದಿ ಓದಿ