ಇಂಡಿ

ರಸ್ತೆ ಸುಧಾರಣೆಗೆ ಮುಂದಾಗದ ಅಧಿಕಾರಿಗಳು: ಸಾರ್ವಜನಿಕರ ಆಕ್ರೋಶ

ರಸ್ತೆ ಸುಧಾರಣೆಗೆ ಮುಂದಾಗದ ಅಧಿಕಾರಿಗಳು: ಸಾರ್ವಜನಿಕರ ಆಕ್ರೋಶ
ಇಂಡಿ 3: ರಾಷ್ಟ್ರೀಯ ಹೆದ್ದಾರಿ ನೂತನ 548ಬಿ. ರಸ್ತೆಯಲ್ಲಿ ತಗ್ಗು ಗುಂಡಿಗಳು ಬಿದ್ದಿರುವುದು.

ಇಂಡಿ: ತಾಲೂಕಿನ ಎಲ್ಲ ರಸ್ತೆಗಳು ಹದಗೆಟ್ಟಿದ್ದು ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಆದರೆ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ರಸ್ತೆ ಸುಧಾರಣೆಗೆ ಮುಂದಾಗುತ್ತಿಲ್ಲ. 

ಇಂಡಿ ತಾಲೂಕಿನ ಅಗರಖೇಡ ರಸ್ತೆ, ಸೋಲಾಪೂರ ರಸ್ತೆ, ಸಿಂದಗಿ ರಸ್ತೆ, ವಿಜಯಪುರ ರಸ್ತೆ ಸೇರಿದಂತೆ ಪಟ್ಟಣದಿಂದ ಗ್ರಾಮೀಣ ಭಾಗಕ್ಕೆ ಹೋಗುವ ಎಲ್ಲ ರಸ್ತೆಗಳು ಹದಗೆಟ್ಟಿವೆ. ಬಹುತೇಕ ಅಡಿ ಆಳದಷ್ಟು ತಗ್ಗು ಗೂಂಡಿಗಳೂ ಬಿದ್ದಿವೆ. ಪ್ರತಿ ನಿತ್ಯ ಸಂಚರಿಸುವ ವಾಹನ ಸವಾರರು ಪ್ರಯಾಣಿಕರು ತೊಂದರೆ ಅನುಭವಿಸಬೇಕಾದ ದುಸ್ಥಿತಿ ಎದುರಾಗಿದೆ ಎಂಬುದು ಪ್ರಯಾಣಿಕರ ಅಳಲಾಗಿದೆ. 

ಸಂಬಂದಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಣಿದ್ದು ಕುರುಡರಾದಂತೆ ಕಾಣುತ್ತಿದೆ. ಅದೇ ರಸ್ತೆಗಳ ಮೇಲೆಯೇ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಅಡ್ಡಾಡುತ್ತಿದ್ದರೂ ಅದರ ದುರಸ್ಥಿ ಮಾಡದೇ ಇರುವುದು ಅವರ ಆಡಳಿತ ವೈಖರಿ ಎದ್ದು ತೋರುತ್ತದೆ. 

ಇಂಡಿ ತಾಲೂಕಿನ ಅಗರಖೇಡ ರಸ್ತೆಯು ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಿದೆ. ಈಗಾಗಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪಿಡಬ್ಲುಡಿ ಇಲಾಖೆಯವರು ಕಳೆದ ಒಂದು ವರ್ಷದ ಹಿಂದೆ ಹಸ್ತಾಂತರ ಮಾಡಿದ್ದಾರೆ.  ರಾಷ್ಟ್ರೀಯ ಹೆದ್ದಾರಿಯಾಗಿ ವಿಜಯಪುರ ದಿಂದ ನಾಗಠಾಣ, ಇಂಡಿ ತಾಲೂಕಿನ ಅಥರ್ಗಾ, ರೂಗಿ ಇಂಡಿ ಮಾರ್ಗವಾಗಿ ಇಂಗಳಗಿ, ಹೀರೆಬೆವನೂರ ಚಿಕ್ಕಮಣ್ಣುರ ಗ್ರಾಮಗಳ ಮೂಲಕ ಹಾದು ಅಫಜಲಪೂರ ತಾಲೂಕಿನ ಮಣ್ಣೂರ, ಕರ್ಜಗಿ, ಮಾಶಾಳ ಗ್ರಾಮದ ಮಹಾರಾಷ್ಟ್ರ ರಾಜ್ಯದ ಗಡಿ ಸರಹದ್ದಿನವರೆಗೆ ಹೊಗಿ ಕೂಡುತ್ತದೆ. ಆ ರಸ್ತೆಯೂ ಸಂಪೂರ್ಣ ಹದಗೆಟ್ಟಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೇ ರಸ್ತೆ ನಿರ್ಮಾಣ ಮಾಡಬೇಕು. ನಮ್ಮ ಇಲಾಖೆಯಿಂದ ಆ ರಸ್ತೆ ನಿರ್ಮಾಣ ಮಾಡಲು ಆಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. 

ಈ ಕುರಿತು ತಾಲೂಕಾ ಕೇಂದ್ರ ಸ್ಥಾನದಲ್ಲಿದ್ದ ಪಿಡಬ್ಲುಡಿ ಇಲಾಖೆಯವರನ್ನು ಕೇಳಿದರೆ ಇನ್ನೇನಿದ್ದರು ರಾಷ್ಟ್ರೀಯ ಹೆದ್ದಾರಿಯವರನ್ನು ಕೇಳಬೇಕು ಎನ್ನುತ್ತಾರೆ. ಹತ್ತಿರದಲ್ಲೆ ಇದ್ದ ಇಲಾಖೆಯವರನ್ನು ನೇರವಾಗಿ ಸಂಪರ್ಕಿಸುತ್ತಿದ್ದ ನಮ್ಮ ಜನತೆಗೆ ಇಬ್ಬರ ನಡುವೆ ಕೂಸು ಬಡವಾಯಿತು ಎಂಬಂತಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.  

ಅಗರಖೇಡ ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಬರುತ್ತದೆ. ಕಳೆದ ಸುಮಾರು ಒಂದು ವರ್ಷದ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಿದ್ದೇವೆ. ರಸ್ತೆ ದುರಸ್ಥಿ ಮಾಡುವುದು ಅವರ ಜಬಾಬ್ದಾರಿ. ತಾಲೂಕಿನ ಇನ್ನುಳಿದ ರಸ್ತೆ ದುರಸ್ಥಿ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದ ನಂತರ ಟೆಂಡರ್ ಕರೆದು ರಸ್ತೆ ದುರಸ್ಥಿ ಮಾಡಲಾಗುವುದು. 

ದಯಾನಂದ ಮಠ. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಲೋಕೋಪಯೋಗಿ ಇಲಾಖೆ ಇಂಡಿ. 

ರಸ್ತೆ ವಸ್ತು ಸ್ಥಿತಿ ಕುರಿತು ನಮ್ಮ ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ. ಅಗರಖೇಡ ಕ್ರಾಸ್‌ದಿಂದ ಮಣ್ಣೂರವರೆಗೆ ಮತ್ತು ಮಾಶಾಳ ಗ್ರಾಮದಲ್ಲಿ ಹಾದು ಹೊಗುವ ಒಳ ರಸ್ತೆ ತ್ವರಿತವಾಗಿ ದುರಸ್ಥಿ ಮಾಡುತ್ತೇವೆ. ಮಹಾರಾಷ್ಟ್ರ ರಾಜ್ಯದ ಗಡಿವರಗೆ ನಮ್ಮ ವ್ಯಾಪ್ತಿಯಲ್ಲಿ ಬರುತ್ತದೆ. ರಾಷ್ಟ್ರೀಯ ಹೆದ್ದಾರಿಯ ಗುಣ ಮಟ್ಟದ ರಸ್ತೆ ನೀಡಬೇಕು ಎಂಬ ಸದಾಶಯ ನಮ್ಮದಾಗಿದೆ. 

ಆರ್‌.ಎಮ್‌.ಮನಗೂಳಿ. ಅಸಿಷ್ಟಂಟ ಇಂಜೀನೀಯರ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ವಿಜಯಪುರ  


ಸುದ್ದಿ ಓದಿ