ಆರೋಗ್ಯಕ್ಕೆ ಪೌಷ್ಟಿಕ ಆಹಾರ ಅಗತ್ಯ: ಬಿ. ಬಿ. ಗೋರೋಶಿ
ಲೋಕದರ್ಶನ ವರದಿ
ಯರಗಟ್ಟಿ 17: ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸಬೇಕು. ಇಲ್ಲದಿದ್ದರೆ ರಕ್ತಹೀನತೆಯಾಗಿ ಅವಳು ಮತ್ತು ಮಗು ತೊಂದರೆ ಪಡಬೇಕಾಗುತ್ತದೆ. ಪ್ರತಿ ಅಂಗನವಾಡಿಯಲ್ಲಿ ಬಾಣಂತಿಯರು, ಗರ್ಭಿಣಿಯರಿಗೆ ಸಿಗುವ ಪೌಷ್ಟಿಕ ಆಹಾರ ಪಡೆದುಕೊಳ್ಳಬೇಕು ಎಂದು ಮೇಲ್ವಿಚಾರಕಿ ಸುಜಾತಾ ಪಾಟೀಲ ಹೇಳಿದರು.
ಸ್ಥಳಿಯ ಕೃಷ್ಣ ದೇವಸ್ಥಾನದಲ್ಲಿ ಜಿ.ಪಂ, ಸವದತ್ತಿ ಮಹಿಳಾ ಮತ್ತು ಮಕ್ಕಳ ಇಲಾಖೆ ವತಿಯಿಂದ ಜರುಗಿದ ಅಭಿವೃದ್ಧಿ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಪಂ ಮುಖ್ಯಾಧಿಕಾರಿ ಮಾತನಾಡಿ ಬಿ. ಬಿ. ಗೋರೋಶಿ ತಾಯಂದಿರು ಈ ನಾಡಿಗೆ, ಸಮಾಜಕ್ಕೆ ಆರೋಗ್ಯವಂತ ಮಕ್ಕಳನ್ನು ಕೊಡಬೇಕಿದೆ. ಮಕ್ಕಳ ಸಂಪೂರ್ಣ ಪೋಷಣೆಯನ್ನು ಖಾತರಿಪಡಿಸಿ ಸದೃಢ ಭಾರತ ನಿರ್ಮಿಸಬೇಕಿದೆ ಎಂದರು.
ಆರೋಗ್ಯಾಧಿಕಾರಿ ಆಯ್. ಆರ್. ಗಂಜಿ ಮಾತನಾಡಿ, ಗರ್ಭಿಣಿಯರು ವೈದ್ಯರಿಂದ ನಿಯಮಿತ ತಪಾಸಣೆ ಮಾಡಿಸಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವಿಸಬೇಕು ಮತ್ತು ಮಗುವಿಗೆ 6 ತಿಂಗಳವರೆಗೆ ಎದೆ ಹಾಲನ್ನೇ ಕೊಡಬೇಕು. ನಂತರ ಹೊರಗಿನ ಆಹಾರಕೊಡುವುದನ್ನು ರೂಢಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯ ವಿಶಾಲಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪೌಷ್ಟಿಕ ಆಹಾರದ ಪ್ರದರ್ಶನ ನಡೆಯಿತು.
ಗರ್ಭಿಣಿಯರಿಗೆ ಸೀಮಂತ, 6 ತಿಂಗಳ ಮಕ್ಕಳಿಗೆ ಪೌಷ್ಟಿಕ ಆಹಾರ ಉಣ್ಣಿಸುವ ಕಾರ್ಯಕ್ರಮ ಜರುಗಿತು.
ಸ್ಥಳೀಯ ವೈದ್ಯಾಧಿಕಾರಿ ಡಾ. ಭುವನೇಶ್ವರಿ ಬಳ್ಳೂರ, ಮಾಜಿ ಗ್ರಾ. ಪಂ. ಸದಸ್ಯೆ ಮಂಜುಳಾ ಪೂಜೇರ, ಶಿವಾನಂದ ಬಳಿಗಾರ, ಹಿರಿಯ ಮೇಲ್ವಿಚಾರಕಿ ಖಾತುನಬಿ ನದಾಫ, ಅಕ್ಕಮ್ಮ ಪಾಟೀಲ, ಆರೋಗ್ಯ ಇಲಾಖೆ ಸಿಬ್ಬಂದಿ, ಆಂಗನವಾಡಿ, ಆಶಾ ಕಾರ್ಯಕರ್ತೆಯರು, ತಾಯಂದಿರು ಇದ್ದರು.