ಮಕ್ಕಳ ಆರೋಗ್ಯಕ್ಕೆ ಪೋಷಕಾಂಶ ಅವಶ್ಯಕ: ಆದಾಪೂರ
ಗುಳೇದಗುಡ್ಡ 29: ಇಂದಿನ ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಪೋಷಕಾಂಶಯುಕ್ತ ಆಹಾರವನ್ನು ದಿನನಿತ್ಯ ಬಳಕೆ ಮಾಡುವುದರಿಂದ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಲು ಸಾಧ್ಯವಾಗುತ್ತದೆ ಎಂದು ತಾಲೂಕಾ ಅಕ್ಷರ ದಾಸೋಹ ಅಧಿಕಾರಿ ಆರ್.ಎಸ್.ಆದಾಪೂರ ಹೇಳಿದರು.
ತಾಲೂಕಿನ ತೆಗ್ಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರ ಒಂದು ಮತ್ತು ಎರಡು ಇವರ ಸಹಯೋಗದಲ್ಲಿ ರಾಷ್ಟ್ರೀಯ ಪೋಷಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳ ಆರೋಗ್ಯಕ್ಕೆ ಪೋಷಕಾಂಶಯುಕ್ತ ಆಹಾರ ಅಗತ್ಯವಾಗಿದೆ. ಅದನ್ನೇ ಹೆಚ್ಚು ಬಳಸುವ ರೂಢಿ ಮಾಡಿಕೊಳ್ಳಬೇಕು.
ಸಿ.ಆರ್.ಪಿ ಸೋಮಶೇಖರ ಅತಿಥಿಗಳಾಗಿ ಮಾತನಾಡಿ, ತಂತ್ರಜ್ಞಾನ ಕಾಲದಲ್ಲಿರುವ ಮಕ್ಕಳು ಉತ್ತಮ ಆಹಾರ ಸೇವನೆಗೆ ಆದ್ಯತೆ ನೀಡಿ, ಪೋಷಕಾಂಶಯುಕ್ತ ಆಹಾರ ಬಳಕೆ ಮಾಡಬೇಕೆಂದು ತಿಳಿಸಿದರು.
ಸಾಧಕರ ಸನ್ಮಾನ ಸ್ವೀಕರಿಸಿದ ಡಾ.ಚಂದ್ರಶೇಖರ ಕಾಳನ್ನವರ ಮಾತನಾಡಿ, ತಾವು ಇದೇ ಪ್ರಾಥಮಿಕ ಶಾಲೆಯಲ್ಲಿ ಕಲಿತ ದಿನಗಳ ನೆನಪುಗಳನ್ನು ಹಂಚಿಕೊಳ್ಳುತ್ತಾ, ನಮ್ಮ ಸರ್ಕಾರಿ ಪ್ರಾಥಮಿಕ ಶಾಲೆಗಳು ಇಂದು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ಕ್ರಿಯಾಶೀಲ ಬೋಧಕ ಸಿಬ್ಬಂದಿ ವರ್ಗದವರಿದ್ದು, ಎಲ್ಲಾ ಮೂಲಭೂತ ಸೌಲಭ್ಯಗಳಿವೆ. ಇವುಗಳ ಸದುಪಯೋಗವನ್ನು ನಮ್ಮ ಗ್ರಾಮದ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ತಂದೆ-ತಾಯಿಗಳ, ಕಲಿತ ಶಾಲೆಯ, ಕಲಿಸಿದ ಗುರುಗಳ, ತೆಗ್ಗಿ ಗ್ರಾಮದ ಕೀರ್ತಿ ತರುವಂತಹ ವಿದ್ಯಾರ್ಥಿಗಳಾಗಬೇಕೆಂದು ಹೇಳಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪುಂಡಪ್ಪ ಮುತ್ತಲಗೇರಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಉತ್ತಮ ಶಿಕಕ್ಷಕರಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ. ನಮ್ಮ ಗ್ರಾಮದ ಶಾಲೆಯ ಅಭಿವೃದ್ಧಿಗೆ ಗ್ರಾಮದ ಸಮಸ್ತ ಗುರು-ಹಿರಿಯರ, ಯುವಕರ ಸಹಕಾರ ಇದೆ ಎಂದು ಹೇಳಿದರು.
ರಾಷ್ಟ್ರೀಯ ಪೋಷಣಾ ಅಭಿಯಾನದ ನಿಮಿತ್ಯ ತೆಗ್ಗಿ ಗ್ರಾಮದ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರಾದ ಬಸವರಾಜೇಶ್ವರಿ ಕುಬಕಡ್ಡಿ, ವಿಜಯಲಕ್ಷ್ಮೀ ಭಗವತಿ, ಅಂಗನವಾಡಿ ಕೇಂದ್ರಗಳ ಸಹಾಯಕಿಯರಾದ ಶಾಂತವ್ವ ಗಾಜಿ, ಮಂಜವ್ವ ಕೆಂಗಾರ ಅವರು ವಿವಿಧ ವಿಟಮಿನ್ ಇರುವ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ, ಅವುಗಳ ಪ್ರದರ್ಶನ ಮಾಡಿದರು.
ಸಮಾರಂಭದಲ್ಲಿ ಮುಖ್ಯೋಪಾಧ್ಯಯ ಎಸ್.ಎಂ.ಪಲ್ಲೆದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಚಂದ್ರಶೇಖರ ಕಾಳನ್ನವರ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆಂದು ಹೇಳಿದರು. ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿಗಳಾದ ಕುಮಾರಿ ಮಾದಾಪುರ, ನಾಯನೇಗಲಿ ಮತ್ತು ಶಾಲೆಯ ದಾನಿಗಳಿಗೆ ಸನ್ಮಾನ ಮಾಡಲಾಯಿತು. ಶಿಕ್ಷಕ ಎಸ್.ಟಿ.ಆಲೂರ ಸ್ವಾಗತಿಸಿದರು. ಕೆ.ಎಂ.ಮಾಗುಂಡಪ್ಪನವರ ನಿರೂಪಿಸಿ ವಂದಿಸಿದರು. ಮಂಜುನಾಥ ಮಾದಾಪೂರ, ಯಲ್ಲಪ್ಪ ಶೇಡ್ಲಗೇರಿ, ಶಾಲೆಯ ಗುರುಮಾತೆಯವರಾದ ಬಿ,ವಿ.ಹುಡೇದ, ವಿ.ಹೆಚ್.ದಡಿ, ಗ್ರಾಮದ ಆಶಾ ಕಾರ್ಯಕರ್ತೆ ಮಂಜುಳಾ ಗಾಜಿ ಪಾಲ್ಗೊಂಡಿದ್ದರು.