ಕೆಲಸ ಮಾಡದ ಪಿಡಿಓ, ಗ್ರಾಪಂ ಸದಸ್ಯರಿಂದ ಪ್ರತಿಭಟನೆ, ಪಿಡಿಓ ಮೇಲೆ ಕ್ರಮಕ್ಕೆ ಮುಂದಾದ ಇಓ
ಗುಳೇದಗುಡ್ಡ 30: ತಾಲೂಕಿನ ಕೊಟೇಕಲ್ ಗ್ರಾಪಂ ಪಿಡಿಓ ಜವಾಬ್ದಾರಿಯಿಂದ ಕರ್ತವ್ಯ ನಿಭಾಯಿಸುವುದಿಲ್ಲ. ಕಚೇರಿ ಕಾರ್ಯಗಳ ಬಗ್ಗೆ ಅರಿವು ಇವರಿಗಿಲ್ಲ. ವೇಳೆಗೆ ಸರಿಯಾಗಿ ಕಚೇರಿಗೆ ಬರುವುದಿಲ್ಲ. ಸಾರ್ವಜನಿಕರ ಕೆಲಸ ಮಾಡದೇ, ಅಧ್ಯಕ್ಷರು ಮತ್ತು ಸದಸ್ಯರ ಮಾತೂ ಸಹ ಕೇಳದೆ ಮನಸ್ಸಿಗೆ ಬಂದಂತೆ ವರ್ತಿಸುತ್ತಾರೆ. ಕೂಡಲೇ ಇವರನ್ನು ವರ್ಗಾಯಿಸಬೇಕೆಂದು ಅಧ್ಯಕ್ಷೆ ಮಾಲಿಂಗವ್ವ ಎಮ್ಮಿ ಹಾಗೂ ಸರ್ವ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಶನಿವಾರ ಗ್ರಾಮ ಪಂಚಾಯತಿಯ ಎದುರಿಗೆ ಪ್ರತಿಭಟನೆ ನಡೆಸಿದ ಸದಸ್ಯರು ವರ್ಗಾವಣೆಗೆ ಪಟ್ಟು ಹಿಡಿದು ಕುಳಿತರು. ಸದಸ್ಯ ಮಹಲಿಂಗ ಆಲೂರ ಮಾತನಾಡಿ, ನಮ್ಮನ್ನು ಅಯ್ಕೆ ಮಾಡಿದ ಜನರಿಗೆ ಉತ್ತರಿಸುವುದು ಕಷ್ಟವಾಗಿದೆ. ಪ್ರತಿತಿಂಗಳು ಸಭೆ ಕರೆಯಲು ಹೇಳಿದರೂ, 2 ತಿಂಗಳಿಂದ ಸಭೆ ಕರೆದಿಲ್ಲ, ಸಾರ್ವಜನಿಕರು ಮನೆ ಉತಾರಕ್ಕಾಗಿ ಅರ್ಜಿ ಸಲ್ಲಿಸಿದರೂ ಉತಾರ ಸಿಗುತ್ತಿಲ್ಲ. ಅರ್ಜಿ ಸಲ್ಲಿಸಿದ 45 ದಿನಗಳ ಒಳಗೆ ಉತಾರ ಕೊಡಬೇಕು. ಆದರೆ ಅರ್ಜಿ ನೀಡಿದ ಒಂದೂವರೆ ವರ್ಷದಿಂದ ಉತಾರ ಕೊಡಲು ಸಾಧ್ಯವಾಗಿಲ್ಲ ಉತಾರಕ್ಕಾಗಿ 124 ಅರ್ಜಿಗಳು ಬಾಕಿ ಇವೆ. ಗ್ರಾಮದಲ್ಲಿ ವಿದ್ಯುತ್ ಕಂಬಗಳು ಹಾಳಾಗಿವೆ. ಚರಂಡಿ ಸ್ವಚ್ಚತೆ, ರಸ್ತೆ ಪಕ್ಕ ಜಾಲಿಗಿಡ ಬೆಳೆದು ನಿಂತಿವೆ. ಸಭೆಯಲ್ಲಿ ಠರಾವು ಮಾಡಿ ದುರಸ್ತಿ ಮಾಡಿಸಲು ಹೇಳಿದರೂ ಪಿಡಿಓ ಸ್ಪಂದಿಸುತ್ತಿಲ್ಲ. ಕೆಲವು ಜನರಿಗೆ ನರೇಗಾ ಯೋಜನೆಯ ಕೂಲಿ ಹಣ ನೀಡಿಲ್ಲ. ಅರ್ಧಕ್ಕೆ ನಿಂತ ಕೆಲಸಗಳನ್ನು ಪೂರ್ಣಗೊಳಿಸಲು ಹೇಳಿದರೂ ಮಾಡುತ್ತಿಲ.್ಲ ಪಂಚಾಯತಿಯಲ್ಲಿ ಎಸ್.ಎಲ್.ಹುಣಶ್ಯಾಳ ಎಸ್.ಡಿ.ಎ.ಇದ್ದು ವರ್ಷದಿಂದ ಅವರಿಗೆ ಜವಾಬ್ದಾರಿ ನೀಡಿಲ್ಲ. ಅಭಿವೃದ್ಧಿ ಅಧಿಕಾರಿಯಾಗಿ ಅಭಿವೃದ್ಧಿಗೆ ತೊಡಕಾಗಿರುವ ಪಿಡಿಓ ಎಲ್.ಡಿ.ಶಾಂತಗೇರಿಯವರನ್ನು ವರ್ಗಾಯಿಸಬೇಕೆಂದು ಅವರೆಲ್ಲ ಒತ್ತಾಯಿಸಿದರು.
ಇದೇ ಸಂದರ್ಭಕ್ಕೆ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರೆಲ್ಲರೂ ಸೇರಿ ಗ್ರಾಮ ಪಂಚಾಯತಿಗೆ ಬೀಗ ಹಾಕಬೇಕೆನ್ನುವಷ್ಟರಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಸದಸ್ಯರೊಂದಿಗೆ ಮಾತನಾಡಿ ಸಮಸ್ಸೆ ತಿಳಿಗೊಳಿಸಿದರು. ನಂತರ ಪ್ರತಿಭಟನಾ ಸ್ಥಳಕ್ಕೆ ಗುಳೇದಗುಡ್ಡ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕಲಾದಗಿ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಚರ್ಚೆ ಮಾಡಿದರು. ಪಿಡಿಓ ವಿರುದ್ಧ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ತಾತ್ಕಾಲಿಕವಾಗಿ ಹಂಗರಗಿ ಗ್ರಾಮ ಪಂಚಯತಿ ಪಿ.ಡಿ.ಓ. ಮೈತ್ರಿಯವರನ್ನು ವಾರದಲ್ಲಿ ಮೂರು ದಿನ ಬರಲು ಸೂಚಿಸಿದ್ದೇನೆ. ಈಗಿರುವ ಪಿಡಿಓ ಅವರ ಕಾರ್ಯಕ್ಕೆ ಸಂಬಂಧಿಸಿದಂತೆ ತನಿಖೆಗೆ ಒಳಪಡಿಸಲಾಗುವುದೆಂದು ಹೇಳಿದ ಮೇಲೆ ಸದಸ್ಯರು ಸುಮ್ಮನಾದರು, ಬೇಡಿಕೆ ಈಡೇರದಿದ್ದರೆ ಮತ್ತೆ ಪ್ರತಿಭಟಿಸುವ ಮಾತು ಪ್ರತಿಭಟನಾಕಾರರಿಂದ ಕೇಳಿ ಬಂದಿತು.
ಸದಸ್ಯರಾದ ಸಂಗವ್ವ ಕುಂದರಗಿ, ಹುಚ್ಚೇಶ ಪೂಜಾರ, ಪಾರ್ವತಿ ಮೇಟಿ, ಶೃತಿ ಪತ್ತರ, ಯಲ್ಲವ್ವ ಹಾದಿಮನಿ, ಹನಮಂತ ಕಡ್ಲಿಮಟ್ಟಿ, ಕಾಶೀನಾಥ ಪುರಾಣಿಕಮಠ, ಧಾರಾಸಿಂಗ್ ರಾಠೋಡ, ಭುವನೇಶ್ವರಿ ಶೆಡ್ಲಗೇರಿ, ಮಲ್ಲಿಕಾರ್ಜುನ ಜಾಲಿಹಾಳ ಸೇರಿದಂತೆ ಒಟ್ಟು 12 ಜನ ಸದಸ್ಯರಿದ್ದರು. ಒಟ್ಟು 14 ಸದಸ್ಯರಲ್ಲಿ ಇಬ್ಬರು ಗೈರಾಗಿದ್ದರು.