ಶ್ರೀಮಂತ ಪಾಟೀಲರ ಚುನಾವಣಾ ಪ್ರಚಾರ ವಾಹನಕ್ಕೆ ನೇರ್ಲಿ ಚಾಲನೆ
ಅಥಣಿ 18: ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಶಾಸಕ ಶ್ರೀಮಂತ ಪಾಟೀಲರು ಇಲ್ಲಿಯವರೆಗೆ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳೇ ಅವರ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ರಾಜೇಶ ನೇರ್ಲಿ ಹೇಳಿದರು.
ಅವರು ಕೆಂಪವಾಡ ಅಥಣಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಶ್ರೀಮಂತ ಪಾಟೀಲರ ಚುನಾವಣಾ ಪ್ರಚಾರ ವಾಹನಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡುತ್ತಿದ್ದರು. ಕಳೆದ 4 ವರ್ಷಗಳ ಅಧಿಕಾರ ಅವಧಿಯಲ್ಲಿ ಶಾಸಕ ಶ್ರೀಮಂತ ಪಾಟೀಲರು ಸುಮಾರು 3 ಸಾವಿರ ಕೋಟಿ ರೂ. ಅನುದಾನವನ್ನು ತಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೊಳಿಸಿದ್ದಾರೆ. ಶಿಕ್ಷಣ, ಆರೋಗ್ಯ, ರಸ್ತೆ, ನೀರಾವರಿಗೆ ಹೆಚ್ಚಿನ ಮಹತ್ವವನ್ನು ನೀಡಿದ್ದು ಹಲವಾರು ಯೋಜನೆಗಳ ಮೂಲಕ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಶ್ರೀಮಂತ ಪಾಟೀಲರನ್ನು ಅತ್ಯಧಿಕ ಮತಗಳ ಅಂತರದಿಂದ ವಿಜಯಶಾಲಿಗಳನ್ನಾಗಿ ಮಾಡೋಣ ಎಂದು ಹೇಳಿದರು.
ಶಾಸಕ ಶ್ರೀಮಂತ ಪಾಟೀಲ ಮಾತನಾಡಿ ನಾನು ಚುನಾವಣೆ ಘೋಷಣೆಯಾದ ನಂತರ ಇಲ್ಲಿಯವರೆಗೆ 52 ಹಳ್ಳಿಗಳಿಗೆ ಭೇಟಿ ನೀಡಿದ್ದು, ಆ ಹಳ್ಳಿಗಳ ಜನರು ನನಗೆ ನೀಡುತ್ತಿರುವ ಭವ್ಯ ಸ್ವಾಗತವೇ ನಾನು ಇಲ್ಲಿಯವರೆಗೆ ಮಾಡಿದ ಅಭಿವೃದ್ಧಿ ಕಾರ್ಯಗಳೇ ಸಾಕ್ಷಿಯಾಗಿವೆ. ಅವರ ಪ್ರೀತಿ, ವಿಶ್ವಾಸ ಕಂಡು ಮುಂಬರುವ ಚುನಾವಣೆಯಲ್ಲಿ ನನ್ನ ಗೆಲುವು ಶತಸಿದ್ಧವೆಂದು ಶ್ರೀಮಂತ ಪಾಟೀಲರು ವಿಶ್ವಾಸ ವ್ಯಕ್ತಪಡಿಸಿದರು.
ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ರಾಜೇಶ ನೇರ್ಲೆ, ಚುನಾವಣಾ ಪ್ರಭಾರಿ ಮನೋಜ ಪಾಂಗರಕರ, ತಮ್ಮಣ್ಣ ಪಾರಶೆಟ್ಟಿ, ನಿಂಗಪ್ಪಾ ಮಾನಗಾಂವೆ, ರಾಜು ಪಾಟೀಲ, ಶಿವಾನಂದ ನವನ್ಯಾಳೆ, ದೋಂಡಿರಾಮ ಅವಳೇಕರ, ಮಹಾದೇವ ಕೋರೆ ಸೇರಿದಂತೆ ಕ್ಷೇತ್ರದ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.