ನೇಕಾರಿಕೆ ಮಾನವರ ಮಾನ ಕಾಯುವ ಕಾಯಕ ಧರ್ಮ: ಕೇಲಗಾರ
ರಾಣಿಬೆನ್ನೂರು 11: ನೇಕಾರಿಕೆ ಕೇವಲ ಹೊಟ್ಟೆ ಪಾಡಿನ ಕಸಬಲ್ಲ ಮಾನವರ ಮಾನ ಕಾಯುವ ಕಾಯಕ ಧರ್ಮವಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ ಹೇಳಿದರು.
ನಗರದಲ್ಲಿ ರಾಜ್ಯ ಬಿಜೆಪಿ ಘಟಕ, ರಾಜ್ಯ ನೇಕಾರ ಪ್ರಕೋಷ್ಟ ಹಾಗೂ ಜಿಲ್ಲಾ ನೇಕಾರ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಹಿರಿಯ ನೇಕಾರರಿಗೆ ಸನ್ಮಾನಿಸಿ ಅವರು ಮಾತನಾಡಿದರು, ಮನುಷ್ಯನ ಆಕಾರಕ್ಕೆ ಬಟ್ಟೆಗಳನ್ನು ತಯಾರಿಸಿ ಕೊಡುವ ನೇಕಾರರ ವೃತ್ತಿ ದೇವರಿಗೆ ಸಮನಾದದ್ದು. ಕೈಮಗ್ಗ ಉದ್ಯಮವಾಗಿ ಮಾರ್ಪಟಟಿದೆ. ಗ್ರಾಮೀಣರ ಆರ್ಥಿಕತೆ ಹೆಚ್ಚಿಸುವಲ್ಲಿ ಕೈಮಗ್ಗದ ಪಾತ್ರ ಬಹು ಮುಖ್ಯವಾಗಿದೆ. ಭಾರತದ ಸಾಂಪ್ರದಾಯಿಕ ಕೈಮಗ್ಗದ ಉತ್ಪನ್ನಗಳನ್ನು ಖರೀದಿಸಿ ನೇಕಾರರಿಗೆ ಆರ್ಥಿಕ ಬಲ ತುಂಬಬೇಕು ಎಂದರು.
ನೇಕಾರರ ಬವಣೆಯನ್ನು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಗತಿಸಿದರೂ ಯಾವ ಸರ್ಕಾರವೂ ಕಲ್ಯಾಣಾತ್ಮಕ ಅವಕಾಶವನ್ನು ನೀಡಲಿಲ್ಲ, ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ನೇಕಾರರ ಕಲ್ಯಾಣಕ್ಕಾಗಿ 2015 ರಿಂದ ಪ್ರತಿ ವರ್ಷ ಅಗಷ್ಟ 7ನೇ ದಿನಾಂಕದಂದು ನೇಕಾರ ದಿನಾಚರಣೆ ಅಂತ ಘೋಷಣೆ ಮಾಡುವ ಮೂಲಕ ಐತಿಹಾಸಿಕ ರಾಷ್ಟ್ರೀಯ ಹಬ್ಬವನ್ನು ಜಾರಿ ಮಾಡಿದರು. ದೇಶಕ್ಕೆ ಅನ್ನ ನೀಡಲು ರೈತ ಒಂದು ಕಣ್ಣಾದರೆ, ಮಾನ ಮುಚ್ಚುವ ಕಾಯಕ ಯೋಗಿ ದೇಶದ ಎರಡನೇ ಕಣ್ಣು ಎಂದು ಹೇಳಿದರು.
ಕೈಮಗ್ಗ ಕ್ಷೇತ್ರವು ನಮ್ಮ ದೇಶದ ಶ್ರೀಮಂತ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ. ಕೈಮಗ್ಗ ದಿನಾಚರಣೆಗೂ ಸ್ವದೇಶಿ ಆಂದೋಲನಕ್ಕೂ ಅವಿನಾಭಾವ ಸಂಬಂಧವಿದೆ. ಇಡೀ ವಿಶ್ವದಲ್ಲೇ ಅತಿ ದೊಡ್ಡ ಕೈಮಗ್ಗ ಉದ್ಯಮವನ್ನು ಹೊಂದಿರುವ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಈ ಕೈಮಗ್ಗಕ್ಕೆ ವಿಶೇಷ ಮಹತ್ವವಿದೆ. ಆದರೇ ಇಂದಿನ ದಿನಗಳಲ್ಲಿ ಈ ವೃತ್ತಿಯನ್ನು ಉಳಿಸಿ ಬೆಳಸಲು ಸರ್ಕಾರ ವಿಶೇಷ ರೀತಿ ಸವಲತ್ತು ಸೌಲಭ್ಯಗಳನ್ನು ನೀಡಬೇಕು ಎಂದರು.
ಕೈಮಗ್ಗ ನೇಕಾರರಾದ ತಿಪ್ಪೇಶಪ್ಪ ಚುಂಚಾಲ್, ಗೋವಿಂದಪ್ಪ ಬೈರವ, ದೇವೆಂದ್ರ್ಪ ಅಂಗಡಿ, ಸುಭಾಶ ಪಾಲ್ಮೀರಿ, ಶಿವಣ್ಣ ಅಂಗಡಿ, ಚೌಪದ್ ರಾಮಣ್ಣ, ಬಸಪ್ಪ ಕಾಂಬಳೆ, ಮೀನಾಕ್ಷಮ್ಮ ಜೋಗಾರ, ರತ್ನಮ್ಮ ಜೋಗಾರ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ನೇಕಾರ ಒಕ್ಕೂಟದ ಅಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ, ಬಿಜೆಪಿ ರಾಜ್ಯ ನೇಕಾರ ಪ್ರಕೋಷ್ಠದ ಸದಸ್ಯ ಬಸವರಾಜ ಲಕ್ಷ್ಮೇಶ್ವರ, ಡಾ.ಲತಾ ಕೇಲಗಾರ, ದ್ಯಾಮಪ್ಪ ಸುಂಕಾಪುರ, ಪ್ರಕಾಶ ಅಂಗಡಿ, ಆರ್.ಟಿ.ತಾಂಬೆ, ಮಂಜುನಾಥ ಎಚ್ ಸೇರಿದಂತೆ ಮತ್ತಿತರು ಇದ್ದರು.