ಕೂಲಿಕಾರ್ಮಿಕರೊಂದಿಗೆ ನರೇಗಾ ದಿವಸ ಆಚರಣೆ
ಬ್ಯಾಡಗಿ: ಕೂಲಿ ಕಾರ್ಮಿಕರು ಆರೋಗ್ಯವಾಗಿದ್ದರೆ ನರೇಗಾ ಯೋಜನೆಯಲ್ಲಿ ಅತಿ ಹೆಚ್ಚಿನ ಮಾನವ ದಿನಗಳ ಸೃಜನೆಯ ಗುರಿ ತಲುಪುವ ಜೊತೆಗೆ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗುತ್ತದೆ ಎಂದು ಘಾಳಪೂಜಿ ಗ್ರಾಪಂ ಅಧ್ಯಕ್ಷೆ ಕವಿತಾ ತಳವಾರ ಹೇಳಿದರು. ತಾಲೂಕಿನ ಘಾಳಪೂಜಿ ಗ್ರಾಮದ ಕರನಕಟ್ಟೆಯಿಂದ ಸಂಗಬಸಪ್ಪನ ಹಳ್ಳದ ಕಾಲುವೆ ಹೂಳೆತ್ತುವ ಕಾಮಗಾರಿಯಲ್ಲಿ ನಿರತರಾಗಿದ್ದ ಕೂಲಿಕಾರ್ಮಿಕರೊಂದಿಗೆ ನರೇಗಾ ದಿವಸ ಆಚರಣೆ ಅಂಗವಾಗಿ ನಡೆದ ಶ್ರಮದಾನ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಗ್ರ ಗ್ರಾಮೀಣಾಭಿವೃದ್ಧಿಗೆ ನರೇಗಾ ಯೋಜನೆಯು ವರದಾನವಾಗಿದೆ. ಈ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರು ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು. ಗ್ರಾಮಗಳಲ್ಲಿ ನೈರ್ಮಲ್ಯವನ್ನು ಸಾಧಿಸುವ ನಿಟ್ಟಿನಲ್ಲಿ ನರೇಗಾ ಯೋಜನೆಯಡಿ ಪ್ರತಿ ಮನೆಗೂ ವ್ಯವಸ್ಥಿತ ಬಚ್ಚಲು ಗುಂಡಿ ನಿರ್ಮಿಸಲಾಗುತ್ತಿದೆ. ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಂಡು ಗ್ರಾಮಗಳ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರುಗ್ರಾಪಂ ಅಭಿವೃದ್ಧಿ ಅಧಿಕಾರಿ ಜಿ.ಎಚ್.ತಹಶೀಲ್ದಾರ ಮಾತನಾಡಿ, ನರೇಗಾ ಯೋಜನೆಯು ಕೇವಲ ಕೂಲಿಗಾಗಿ ಕೆಲಸ ಮಾಡುವ ಯೋಜನೆ ಅಲ್ಲ, ಈ ಯೋಜನೆಯಡಿ ಪ್ರತಿ ಗ್ರಾಮವನ್ನು ಅಭಿವೃದ್ಧಿ ಗೊಳಿಸುವ ಮೂಲಕ ಗ್ರಾಮ ಪಂಚಾಯಿತಿಯನ್ನು ಮಾದರಿಯಾಗಿ ರೂಪಿಸಬಹುದು. ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಸೃಜಿಸುವುದರೊಂದಿಗೆ ವೈಯುಕ್ತಿಕ ಸೌಲಭ್ಯಗಳನ್ನು ಪಡೆಯುವುದಾಗಿದೆ ಎಂದರಲ್ಲದೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಲಿ ಕಾರ್ಮಿಕರಿಗಾಗಿ ವಿಮೆಯ ಜೊತೆಗೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿದ್ದು, ಇದರ ಉಪಯೋಗವನ್ನು ಹೊಂದಲು ಮನವಿ ಮಾಡಿದರು.ನರೇಗಾ ಯೋಜನೆಯ ತಾಲೂಕಾ ಸಂಯೋಜಕ ಶಾನವಾಜ್ ಚಿಣಗಿ ಮಾತನಾಡಿ, ನರೇಗಾ ಯೋಜನೆಯಡಿ ರೈತರು ತಮ್ಮ ಕೃಷಿ ಚಟುವಟಿಕೆ ಸಾಮರ್ಥ್ಯವನ್ನು ಹೆಚ್ಚಿಸಿ ಅಧಿಕ ಆದಾಯವನ್ನು ಗಳಿಸಬಹುದಾಗಿದೆ. ಕೆರೆ, ಬದು, ಇಂಗುಗುಂಡಿಗಳ ನಿರ್ಮಾಣ, ತಡೆಗೋಡೆ, ಹೊಲಕ್ಕೆ ತೆರಳುವ ರಸ್ತೆ ನಿರ್ಮಾಣ, ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸಸಿಗಳನ್ನು ನೆಡುವ ಕಾರ್ಯಕ್ರಮ, ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ, ದನದ ಕೊಟ್ಟಿಗೆ ಹಾಗೂ ಕುರಿ ಶೆಡ್ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶವಿದೆ ಎಂದರು.ಈ ಸಂದರ್ಭದಲ್ಲಿ ಕಾಮಗಾರಿಯಲ್ಲಿ ಪಾಲ್ಗೊಂಡಿದ್ದ ಸುಮಾರು 80ಕ್ಕೂ ಕೂಲಿ ಕಾರ್ಮಿಕರ ಆರೋಗ್ಯವನ್ನು ತಪಾಸಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಕುಸುಮಾ ಕೆಪ್ಪೇರ, ಚಂದ್ರಶೇಖರ ಗೂಳೇರ, ಫಕ್ಕೀರೇಶಿ ಕಳ್ಳಿಮನಿ, ಮಹಾಂತೇಶ ಶಿಡ್ರಳ್ಳಿ, ಮಂಗಳವ್ವ ಜಾಡರ, ಇಂಜನೀಯರ್ ಪ್ರಕಾಶ ಹಿರೇಮಠ, ಬಿಎಫ್’ಟಿ ಹೊನ್ನಪ್ಪ ಕಪ್ಲೇರ, ಗ್ರಾಮ ಕಾಯಕ ಮಿತ್ರ ರೇಣುಕವ್ವ ಲಂಕೇರ, ಕೂಲಿಕಾರ್ಮಿಕ ಸಂಘಟಕರಾದ ರಾಜಪ್ಪ ಆಲದಳ್ಳಿ, ಆಂಜನೇಯ ಹಾದಿಮನಿ, ಆರೋಗ್ಯ ಸಹಾಯಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.