ತಾರನಾಳ ಕೆರೆ ತುಂಬಿಸಿ ತೋರಿಸಿ: ನಾಡಗೌಡರಿಗೆ ನಡಹಳ್ಳಿ ಸವಾಲು
ಮುದ್ದೇಬಿಹಾಳ 07: ಸ್ಥಳೀಯ ಶಾಸಕ ಸಿ.ಎಸ್. ನಾಡಗೌಡ ಅವರು ರೈತರ ಪರವಾಗಿದ್ದರೆ ತಾಲೂಕಿನ ಎಲ್ಲ ಕೆರೆಗಳಿಗೆ ಸಮರ್ಕವಾಗಿ ನೀರು ಹರಿಸಲಿ. ತಾಕತ್ತಿದ್ದರೆ ತಾರನಾಳ ಕೆರೆಯನ್ನು ತುಂಬಿಸಿ ತೋರಿಸಿ ಎಂದು ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಸವಾಲ್ ಹಾಕಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಗೌಡ ಅವರು ನನ್ನನ್ನು ‘ಕುತಂತ್ರಿ’ ಎಂದು ಆರೋಪಿಸಿದ್ದಾರೆ.
ಆದರೆ ಕಳೆದ 30 ವರ್ಷಗಳಲ್ಲಿ ರೈತರ ವಿಚಾರದಲ್ಲಿ ಅವರು ನಡೆದುಕೊಂಡ ರೀತಿಗೆ ಸಂಬಂಧಿಸಿದ ಸಾಕಷ್ಟು ದಾಖಲೆಗಳು ನನ್ನಲ್ಲಿವೆ. ಬಹಿರಂಗ ಚರ್ಚೆಗೆ ಬಂದರೆ ಎಲ್ಲ ಸಾಕ್ಷ್ಯಗಳನ್ನು ಒಂದೇ ವೇದಿಕೆಯಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು. ತಾವು ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರದ ಬಹುತೇಕ ಕೆರೆಗಳನ್ನು ತುಂಬಿಸಿ, ನಿರಂತರ ನೀರು ಹರಿಸುವ ವ್ಯವಸ್ಥೆ ಮಾಡಿದ್ದೆ. ಆದರೆ ಕಳೆದ ಒಂದು ವರ್ಷದಲ್ಲಿ ಒಂದೇ ಒಂದು ಕೆರೆಯನ್ನೂ ಸಮರ್ಕವಾಗಿ ತುಂಬಿಸಲು ಸಾಧ್ಯವಾಗಿಲ್ಲ.
ರೈತರ ವಿಚಾರದಲ್ಲಿ ನಾಟಕವಾಡುವುದನ್ನು ಬಿಟ್ಟು ನೈಜವಾಗಿ ಕೆಲಸ ಮಾಡಬೇಕು ಎಂದು ಟೀಕಿಸಿದರು. ನಾಗರಾಳ ಗ್ರಾಮದ ಸುಮಾರು 23 ರೈತರಿಗೆ ಆರ್.ಆರ್. ಸಂಖ್ಯೆ ಇದ್ದರೂ ನಿರಂತರ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳನ್ನು ವಿಚಾರಿಸಿದಾಗ ‘ಮೇಲಿನಿಂದ ಒತ್ತಡವಿದೆ’ ಎಂಬ ಉತ್ತರ ಬರುತ್ತಿದೆ.