ಕಳ್ಳತನವಾಗಿದ್ದ ಪವಾಡ ಬಸವೇಶ್ವರರ ಬೆಳ್ಳಿ ಮೂರ್ತಿ ಪತ್ತೆ; ಬಸರ್ಕೋಡಿನಲ್ಲಿ ಅದ್ಧೂರಿ ಮೆರವಣಿಗೆಯೊಂದಿಗೆ ಸ್ವಾಗತ
ಮುದ್ದೇಬಿಹಾಳ 22: ತಾಲ್ಲೂಕಿನ ಬಸರಕೋಡದಲ್ಲಿ ಶನಿವಾರ ಪವಾಡ ಬಸವೇಶ್ವರ ನೂತನ ಮೂರ್ತಿಯನ್ನು ಅದ್ದೂರಿಯಾಗಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆದೊಯ್ಯಲಾಯಿತು. ಸಾವಿರಾರು ಕುಂಭಮೇಳದೊಂದಿಗೆ ಊರ ದೈವಕ್ಕೆ ಸಂಭ್ರಮದ ಜಯಘೋಷ:
ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿಗೆ ಅದ್ದೂರಿ ಸ್ವಾಗತ ಕಳ್ಳತನವಾಗಿದ್ದ ಬಸರಕೋಡ ಗ್ರಾಮದ ಆರಾಧ್ಯ ದೈವ ಶ್ರೀ ಪವಾಡ ಬಸವೇಶ್ವರರ ಬೆಳ್ಳಿ ಮೂರ್ತಿ ಪ್ರಕರ್ಣವನ್ನು ಪೋಲೀಸರು ಬೇಧಿಸಿ ಗಟ್ಟಿಬೆಳ್ಳಿಯ ರೂಪದಲ್ಲಿ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿ ನಾಲ್ಕು ತಿಂಗಳ ಬಳಿಕ ನೂತನವಾಗಿ ರೂಪಗೊಂಡ ಮೂರ್ತಿ ತಮ್ಮೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಪವಾಡ ಬಸವೇಶ್ವರ ದೇವರ ನೂತನ ಮೂರ್ತಿಯನ್ನು ಕಂಡ ಗ್ರಾಮಸ್ಥರು, ಭಕ್ತರು ಸಂಭ್ರಮದಿಂದ ಆನಂದಪರವಶರಾಗಿ ಜಯಘೋಷ ಹಾಕಿದರು.
ತಾಲ್ಲೂಕಿನ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ನೂತನ ಬೆಳ್ಳಿ ಮೂರ್ತಿಯನ್ನು ಶನಿವಾರ ವಿಜಯಪುರದಿಂದ ನಿಡಗುಂದಿ-ಮುದ್ದೇಬಿಹಾಳ ಮಾರ್ಗವಾಗಿ ಬಸರಕೋಡದ ಸರಕಾರಿ ಪಿಯು ಕಾಲೇಜಿಗೆ ಪೊಲೀಸರ ಭದ್ರತೆಯಲ್ಲಿ ಕರೆತಂದಾಗ ನೆರೆದಿದ್ದ ಭಕ್ತಾದಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು. ಊರಿನ ಹೊರವಲಯದಲ್ಲಿರುವ ಕಾಲೇಜಿನ ಆವರಣದಿಂದ ದೇವಸ್ಥಾನದವರೆಗೆ ಸಾವಿರಾರು ಸುಮಂಗಲೆಯರು ಕುಂಭ-ಕಲಶಳನ್ನು ಹೊತ್ತು ಸಾಗಿದರು.
ವಿವಿಧ ಕಲಾತಂಡಗಳು, ಕುದುರೆ ಕುಣಿತ, ಬೊಂಬೆ ಕುಣಿತ, ಜೋಗತಿ ತಂಡದವರ ಆಕರ್ಷಕ ನೃತ್ಯದೊಂದಿಗೆ ನೂತನ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು. ದೇವಸ್ಥಾನ ಕಮಿಟಿ ಸದಸ್ಯ ಶ್ರೀಶೈಲ ಮೇಟಿ ಪವಾಡ ಬಸವೇಶ್ವರರ ನೂತನ ಬೆಳ್ಳಿ ಮೂರ್ತಿಯನ್ನು ವಿಜಯಪುರದಿಂದ ಕಾರಿನಲ್ಲಿ ಸಾಧು, ಸಂತರ ನೇತೃತ್ವದಲ್ಲಿ ಬಸರಕೋಡಕ್ಕೆ ತಂದರು.