ಮುದ್ದೆಬಿಹಾಲ್

ಹುಲ್ಲೂರ: ಉಚಿತ ಆರೋಗ್ಯ ತಪಾಸಣಾ ಶಿಬಿರ; ಉದ್ಯೋಗ ಬೇಡಿಕೆ ಸಲ್ಲಿಸಿದರೆ ನಿರಂತರ ಕೆಲಸ: ಇಒ ಸಂಗನಗೌಡ ಬಿರಾದಾರ

ಹುಲ್ಲೂರ: ಉಚಿತ  ಆರೋಗ್ಯ ತಪಾಸಣಾ ಶಿಬಿರ; ಉದ್ಯೋಗ ಬೇಡಿಕೆ ಸಲ್ಲಿಸಿದರೆ ನಿರಂತರ ಕೆಲಸ: ಇಒ ಸಂಗನಗೌಡ ಬಿರಾದಾರ
Hullur: Free health check-up camp; continuous employment assured upon submission of job request – EO

            ಮುದ್ದೇಬಿಹಾಳ 13 : ತಾಲೂಕಿನ ಹುಲ್ಲೂರ ಗ್ರಾಮ ಪಂಚಾಯತ ವತಿಯಿಂದ ಜಟ್ಟಗಿ ಗ್ರಾಮದ ಕೆಇಬಿ ಸ್ಟೇಷನ್ ಪಕ್ಕದಲ್ಲಿ ಕಂದಕ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ವಿಬಿ-ಜಿ ರಾಮ್‌-ಜಿ ಕೂಲಿಕಾರರಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ ಶುಕ್ರವಾರ ನಡೆಯಿತು. ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸಂಗನಗೌಡ ಬಿರಾದಾರ ಅವರು, ಆರೋಗ್ಯ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು.

           ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ವಿಬಿ-ಜಿ ರಾಮ್‌-ಜಿ ಯೋಜನೆಯಡಿ ಕಳೆದ ಜುಲೈ ತಿಂಗಳಿಂದ ನಿರಂತರವಾಗಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ. ಎಲ್ಲ ಕೂಲಿಕಾರರು ಸದರಿ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಬಿಸಿಲಿನಲ್ಲಿ ಕೆಲಸ ಮಾಡುವುದರಿಂದ ಆಯಾಸ, ಕೆಮ್ಮು ಇನ್ನಿತರ ಅಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುವ ಲಕ್ಷಣಗಳಿದ್ದು, ಸೂಕ್ತ ಸಮಾಲೋಚನೆ ಪಡೆದುಕೊಂಡು ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.

                ಬರಗಾಲ ಪರಿಸ್ಥಿತಿ ಇರುವುದರಿಂದ ಕೂಲಿಕಾರರಿಗೆ ನಿರಂತರವಾಗಿ ಕೆಲಸ ನೀಡಲಾಗುವುದು. ಆಯಾ ಗ್ರಾಮ ಪಂಚಾಯತಿಗಳಲ್ಲಿ ಸಮುದಾಯ ಕಾಮಗಾರಿಗಳನ್ನು ಗುರುತಿಸಿ ಬೇಡಿಕೆ ಆಧಾರಿತ ಕೂಲಿಕಾರರಿಗೆ ಉದ್ಯೋಗ ನೀಡಲಾಗುವುದು. ಗುಳೆ ಹೋಗದೆ ನಿಮ್ಮೂರಲ್ಲೆ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡಿ. ದಿನ ಒಂದಕ್ಕೆ ರೂ. 382 ಕೂಲಿ ದರವಿದ್ದು, ಎಲ್ಲರು ಕೆಲಸಕ್ಕೆ ಹಾಜರಾಗಿ ಕೂಲಿ ಹಣ ಪಡೆಯಬಹುದು ಎಂದು ತಿಳಿಸಿದರು.  

ಪಂಚಾಯತ ಅಭಿವೃದ್ಧಿ ಅಧಿಕಾರಿ ರಾಜು ವಂದಾಲ ಮಾತನಾಡಿ, ವಿಬಿ-ಜಿ ರಾಮ್‌-ಜಿ ಯೋಜನೆಯಡಿ ಕೆಲಸ ನಿರ್ವಹಿಸಿದ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಹಮ್ಮಿಕೊಂಡಿದ್ದು, ಎಲ್ಲರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹುಲ್ಲೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೂಲಿಕಾರರ ಬೇಡಿಕೆಗಳು ಹೆಚ್ಚು ಸಲ್ಲಿಕೆಯಾಗುತ್ತಿದ್ದು, ಆಯಾ ಗ್ರಾಮಗಳಲ್ಲಿ ಸಮುದಾಯ ಕಾಮಗಾರಿಗಳನ್ನು ಗುರುತಿಸಿ ಕೆಲಸ ನೀಡಲಾಗುವುದು ಎಂದು ಭರವಸೆ ನೀಡಿದರು. ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಕಫ, ಟಿಬಿ ಹಾಗೂ ಇನ್ನಿತರ ಅಸಾಂಕ್ರಮಿಕ ರೋಗಗಳ ಕುರಿತು ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣಾ ಮಾಡಿ ಸೂಕ್ತ ಸಮಾಲೋಚನೆ ನೀಡಿದರು.ಈ ಸಂದರ್ಭದಲ್ಲಿ ಹುಲ್ಲೂರ ಗ್ರಾಮ ಪಂಚಾಯತ ಆಡಳಿತಾಧಿಕಾರಿ ಜ್ಞಾನೇಶ್ವರ ಮುರಾಳ, ಕಾರ್ಯದರ್ಶಿ ಕನೀಜಾ ಫಾತಿಮಾ ರಾಜಮಹ್ಮದ್, ತಾಲೂಕು ಪಂಚಾಯತ ವಿಬಿಜಿ ರಾಮಜಿ ಐಇಸಿ ಸಂಯೋಜಕ ಪರಮೇಶ ಹೊಸಮನಿ, ತಾಂತ್ರಿಕ ಸಹಾಯಕ ರವಿಶಂಕರ ಮಾಳೆ, ಸಮುದಾಯ ಆರೋಗ್ಯ ಅಧಿಕಾರಿ ಎಂ.ಎಸ್‌.ಕಬಾಡೆ, ವೀರೇಶ ದಿಂಡುವಾರ, ಎಂ.ಎಸ್‌.ಗೌಡರ ಇದ್ದರು. 


ಸುದ್ದಿ ಓದಿ