ಕೆರೆಗಳಿಗೆ ತಕ್ಷಣ ನೀರು ಹರಿಸಲು ನಾಡಗೌಡ ಒತ್ತಾಯ
ಮುದ್ದೇಬಿಹಾಳ 07: ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕ ಹೆಚ್ಚಾಗಿದ್ದು, ಚಿಮ್ಮಲಗಿ ಏತ ನೀರಾವರಿ ಯೋಜನೆಯ ವ್ಯಾಪ್ತಿಗೆ ಒಳಪಡುವ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲೂಕಿನ ಕೆರೆಗಳಿಗೆ ತಕ್ಷಣ ನೀರು ಹರಿಸುವಂತೆ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಅವರಿಗೆ ಪತ್ರ ಬರೆದಿರುವ ಶಾಸಕ ನಾಡಗೌಡ ಅವರು, ಮತಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ ಎಂದು ಗಮನ ಸೆಳೆದಿದ್ದಾರೆ. ಮುದ್ದೇಬಿಹಾಳ ಮತ್ತು ತಾಳಿಕೋಟಿ ತಾಲೂಕಿನ ಬಹುತೇಕ ಕೆರೆಗಳಲ್ಲಿನ ನೀರಿನ ಸಂಗ್ರಹ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಕೆಲವು ಕೆರೆಗಳು ಸಂಪೂರ್ಣ ಬರಿದಾಗುವ ಹಂತ ತಲುಪಿವೆ.
ಇದರಿಂದ ಗ್ರಾಮೀಣ ಪ್ರದೇಶಗಳ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದ್ದು, ಜಾನುವಾರುಗಳಿಗೂ ನೀರಿನ ಕೊರತೆ ಎದುರಾಗುವ ಆತಂಕವಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಕೆರೆಗಳಿಗೆ ತಕ್ಷಣ ನೀರು ತುಂಬಿಸುವ ಕಾರ್ಯ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಆಲಮಟ್ಟಿ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡಲು ಸೂಚನೆ ಅಗತ್ಯ: ಈಗಾಗಲೇ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯಿಂದಾಗಿ ಅಂತರ್ಜಲ ಮಟ್ಟವೂ ಕುಸಿಯುತ್ತಿದ್ದು, ಕೆರೆ-ಕಟ್ಟೆಗಳಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.