ಕೆಎಲ್ಇಯ ರಾಜರಾಜೇಶ್ವ ಕಾಲೇಜಿನಲ್ಲಿ ಎನ್.ಎಸ್.ಎಸ್ ಸಂಸ್ಥಾಪನಾ ದಿನಾಚರಣೆ
ರಾಣೇಬೆನ್ನೂರು 07 ಇಲ್ಲಿನ ಕೆಎಲ್ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಕಾಲೇಜಿನ ಸಭಾಭವನದಲ್ಲಿ ಇತ್ತೀಚೆಗೆ ಎನ್ಎಸ್ಎಸ್ ಸಂಸ್ಥಾಪನಾ ದಿನಾಚರಣೆ ಸಮಾರಂಭವು ನಡೆಯಿತು. ಎನ್ಎಸ್ಎಸ್ ಘಟಕ 1 ಮತ್ತು 2 ಅಡಿಯಲ್ಲಿ ನಡೆದ ಸಮಾರಂಭದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಅಧಿಕಾರಿ ಸಂಜೀವ ಬುಕ್ಕಾ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಶಾಂತಿ, ಶಿಸ್ತು ಮತ್ತು ಸಂಯಮ ಅಳವಡಿಸಿಕೊಂಡು, ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಾದರೆ ಎನ್ಎಸ್ಎಸ್ ಅತ್ಯಂತ ಸಹಕಾರಿಯಾಗಿದೆ ಎಂದರು. ದೇಶದ ಭವಿಷ್ಯ ಯುವಕರ ಮೇಲಿದೆ ಯುವ ಜನತೆ ಸಮಾಜದ ಸಮಸ್ತ ನಾಗರಿಕತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಅದರಿಂದ ತಮ್ಮ ಬದುಕಿನ ಜೊತೆಗೆ ಇತರರ ಬದುಕು ಸಹ ಸುಂದರವಾಗಲಿದೆ ಎಂದು ಯೋಜನೆಯ ಉದ್ದೇಶ ಕುರಿತು ವಿವರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಪ್ರೊ. ನಾರಾಯಣ ನಾಯಕ ಎ ಸಮಾಜದಲ್ಲಿರುವ ಯುವಕ ಯುವತಿಯರು ಭಾರತ ದೇಶದ ಸಂಪತ್ತು, ಸಂಪತ್ತು ಸ್ವಾಸ್ಥವಾಗಿದ್ದರೆ, ಎಲ್ಲವೂ ಸುಂದರವಾಗಿರುತ್ತದೆ. ರಾಷ್ಟ್ರೀಯ ಸೇವಾ ಯೋಜನಾ ಘಟಕವು ಅಂತಹ ಮಹತ್ವಪೂರ್ಣ ಶಿಕ್ಷಣವನ್ನು ನೀಡುತ್ತಲಿದೆ ಎಂದರು.
ವೇದಿಕೆಯಲ್ಲಿ ಕಾಲೇಜಿನ ಉಪನ್ಯಾಸಕ, ಶೋಭಾ ದೊಡ್ಡ ನಾಗಳ್ಳಿ, ನೆಹರು ಯುವ ಕೇಂದ್ರದ ಗಜೇಂದ್ರ ಲಮಾಣಿ, ಯುವ ಕಾರ್ಯಕರ್ತ ಹೇಮಗಿರಿ ಅಂಗಡಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಸಿಬ್ಬಂದಿ ಉಪಸ್ಥಿತರಿದ್ದರು. ಸಂಗೀತಾ ಕಾಯಕದ ಪ್ರಾರ್ಥಿಸಿದರು. ಘಟಕ 1ರ ಯೋಜನಾಧಿಕಾರಿ ಡಾ. ಕವಿತಾ ಗಡ್ಡದಗೂಳಿ ಸ್ವಾಗತಿಸಿದರು. ಕಾರ್ಯಕ್ರಮಾಧಿಕಾರಿ ವೀರೇಶ್ ಕುರಹಟ್ಟಿ ಪ್ರಾಸ್ತಾನಿಕವಾಗಿ ಮಾತನಾಡಿದರು. ಭಾಗ್ಯವತಿ ದೇಶಪಾಂಡೆ ನಿರೂಪಿಸಿದರು. ಪ್ರೊ. ಕೃಷ್ಣ ಎಲ್.ಎಚ್. ವಂದಿಸಿದರು. ಇದೇ ಸಂದರ್ಭದಲ್ಲಿ ನೆಹರು ಕೇಂದ್ರದ ವತಿಯಿಂದ ವಿವಿಧ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.