ಸಂಗೀತ ಸಿದ್ದಿಗೆ ಪರಿಶ್ರಮ ಅಗತ್ಯ : ಮಾವಿನಮರದ
ಗುಳೇದಗುಡ್ಡ 16: ಸಂಗೀತಕ್ಕೆ ಒಲಿಯದ ಜೀವವೇ ಇಲ್ಲ. ಅದನ್ನು ಆರಾಧಿಸಬೇಕು. ಸಂಗೀತ ಸಿದ್ಧಿಗೆ ಗುರುವಿನ ಆರ್ಶೀವಾದ ಹಾಗೂ ಸತತ ಪರಿಶ್ರಮ ಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.
ಭಾನುವಾರ ಸಂಜೆ ನಗರದ ಸಾಲೇಶ್ವರ ದೇವಸ್ಥಾನದ ಹತ್ತಿರದ ಓದುಮನೆಯ ಸಭಾಂಗಣದಲ್ಲಿ ವಿಶ್ವಾಸ ಜನಸೇವಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಗೀತ ರಸಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಂಡಿತ ಪಂಚಾಕ್ಷರಿ ಗವಾಯಿಗಳ ಕರ್ಮಭೂಮಿಯಾದ ಈ ನೆಲದಲ್ಲಿ ಸಂಗೀತದ ಬೇರುಗಳಿವೆ. ಕಳೆದು ಹೋಗುತ್ತಿರುವ ಸಂಗೀತ ಪರಂಪರೆಯನ್ನು ಪಂ. ಪಂಚಾಕ್ಷರಿ ಗವಾಯಿಗಳು, ಪಂ. ಪುಟ್ಟರಾಜ ಗವಾಯಿಗಳು ಉಳಿಸಿಬೆಳಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರ ಆ ಸಾಧನೆಯಿಂದ ಇಂದು ಈ ನೆಲದಲ್ಲಿ ಸಂಗೀತ ಪ್ರತಿಭೆಗಳು ಅರಳುತ್ತಿವೆ ಎಂದು ಹೇಳಿದರು.
ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ಸಂಗೀತದಲ್ಲಿ ಸಾಧನೆ ಮಾಡಬೇಕಾದರೆ ಸತತ ಅಭ್ಯಾಸ, ಕಠಿಣ ಸಾಧನೆ ಹಾಗೂ ಗುರುವಿನ ಮಾರ್ಗದರ್ಶನ ಬೇಕು. ಅಂದಾಗ ಮಾತ್ರ ಸಂಗೀತ ವಿದ್ಯೆ ಒಲಿಯುತ್ತದೆ. ಸಂಗೀತದಿಂದ ವ್ಯಕ್ತಿಯಲ್ಲಿ ಚೈತನ್ಯ ತುಂಬುತ್ತದೆ. ಸಂಗೀತ ಆಲಿಸುವುದರಿಂದ ಸಂತೋಷ, ಸಮಾಧಾನ, ಮಾನಸಿಕ ನೆಮ್ಮದಿ ಸಿಗುತ್ತದೆ ಎಂದರು.
ಆದರ್ಶವಿದ್ಯಾಲಯದ ಪ್ರಾಚಾರ್ಯ ರಾಮಚಂದ್ರ ಭಜಂತ್ರಿ ಮಾತನಾಡಿ, ಇಂದು ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ದೊರೆಯುತ್ತಿವೆ. ವಿದ್ಯಾರ್ಥಿಗಳು ಪರಿಶ್ರಮ ಪಟ್ಟು, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದರು.
ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀಗಳು ಸಾನಿಧ್ಯವಹಿಸಿ ಮಾತನಾಡಿದರು, ಡಾ. ಸಂಗಮೇಶ ಕಲ್ಯಾಣಿ, ಪ್ರೊ. ವಿ.ಎ.ಬೆನಕನಾಳ ಮಾತನಾಡಿದರು. ಸಂಘದ ಅಧ್ಯಕ್ಷ, ಬಸವರಾಜ ಸಿಂದಗಿಮಠ, ಚಿದಾನಂದಸಾ ಕಾಟವಾ, ಭೀಮಪ್ಪ ಹಳ್ಳೆಗೋಳ, ಡಾ.ರಾಜಶೇಖರ ಬಸುಪಟ್ಟದ, ಚಂದ್ರಶೇಖರ ಹೆಗಡೆ, ಮಹಾದೇವ ಜಗತಾಪ, ಸಂಗಮೇಶ ಚಿಕ್ಕಾಡಿ, ಡಾ. ಚಂದ್ರಶೇಖರ ಕಾಳಣ್ಣವರ, ಶಂಕರ ಮುಂದಿನಮನಿ, ವಿಜಯ ನಿಡಗುಂದಿ, ಮೌನೇಶ ಬಡಿಗೇರ, ಹುಚ್ಚೇಶ ಯಂಡಿಗೇರಿ, ಕಿರಣಕುಮಾರ ಭಾಪ್ರಿ, ಚಂದ್ರಶೇಖರ ಆಲೂರ, ಸುರೇಶ ವಗ್ಗಾ ಮತ್ತಿತರರು ಇದ್ದರು.