ಸಂಗೀತದಿಂದ ಸದಾ ನವಚೈತನ್ಯ ಸಾಧ್ಯ: ಶಾಂತಾ ಕರಡಿಗುಡ್ಡ
ಗುಳೇದಗುಡ್ಡ 2: ಸಂಗೀತಕ್ಕೆ ಮನಸೋಲದ ಜೀವವೇ ಇಲ್ಲ. ಸುಮಧುರ ಸಂಗೀತಕ್ಕೆ ಸಕಲಜೀವರಾಶಿಗೆ ಸದಾ ನವಚೈತನ್ಯ ತುಂಬುವ ಅಗಾಧವಾದ ಶಕ್ತಿಯಿದೆ ಎಂದು ವಿಶ್ರಾಂತ ಶಿಕ್ಷಕಿ ಶಾಂತ ಕರಡಿಗುಡ್ಡ ಹೇಳಿದರು.
ಪಟ್ಟಣದ ಮರಡಿಮಠದಲ್ಲಿ ವಿಜಯಾನಂದ ಸಂಗೀತ ಪಾಠಶಾಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಸುಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಗೀತದಿಂದ ವ್ಯಕ್ತಿಯಲ್ಲಿ ಜ್ಞಾನ, ಚೈತನ್ಯ, ಸ್ಮರಣೆ, ಶಾಂತಿ, ನೆಮ್ಮದಿಗಳಂತಹ ಅಘಾಧವಾದ ಶಕ್ತಿಯನ್ನು ಕಾಣಲು ಸಾಧ್ಯವಿದೆ. ಸುಮಧುರವಾದ ಸಂಗೀತ ಆಲಿಸುವುದರಿಂದ ಜನ್ಮ ಸಾರ್ಥಕವಾಗುತ್ತದೆ ಎಂದರು.
ಪಟ್ಟಣದ ಎಸ್.ಎಸ್.ಕೆ. ಸಮಾಜದ ಅಧ್ಯಕ್ಷ ಪಿ.ಎನ್. ಪವಾರ ಅಧ್ಯಕ್ಷತೆವಹಿಸಿ ಮಾತನಾಡಿ, ಇಂದು ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ದೊರೆಯುತ್ತಿವೆ. ವಿದ್ಯಾರ್ಥಿಗಳು ಪರಿಶ್ರಮದಿಂದ ಸಂಗೀತ ಸಾಧನೆ ಮಾಡಬೇಕು. ಸತತ ಅಧ್ಯಯನ, ಕಲಿಕೆ ಎಂಥಹ ಕಾಠಿಣ್ಯತೆಗಳು ಪರಿಶ್ರಮದಿಂದ ಮೃಧುವತ್ವದ ಕಡೆಗೆ ಕೊಂಡೊಯ್ಯುತ್ತವೆ ಎಂದರು.
ಹಿರಿಯ ಪತ್ರಕರ್ತ ಹುಚ್ಚೇಶ ಯಂಡಿಗೇರಿ, ಗಾಯಕ ಚಿದಾನಂದಸಾ ಕಾಟವಾ, ಹನಮಂತಸಾ ಕಾಟವಾ, ಪ್ರಕಾಶ ರೋಜಿ, ಸಂಗೀತ ಶಿಕ್ಷಕರಾದ ಶಂಕರ ಮುಂದಿನಮನಿ, ಭೀಮಪ್ಪ ಹಳ್ಳೆಗೋಳ, ಪವಿತ್ರಾ ಜಕ್ಕಪ್ಪನವರ, ವಿಜಯ ನಿಡಗುಂದಿ, ಸದಾಶಿವಯ್ಯ ಸಿಂದಗಿಮಠ, ಕಿರಣ ಭಾಪ್ರಿ, ರಾಜಶ್ರೀ ಹುಳಿಪಲ್ಲೇದ ಸೇರಿದಂತೆ ಇತರರು ಇದ್ದರು.
ಸಂಗೀತಗಾರ ಬಸವರಾಜ ಸಿಂದಗಿಮಠ ಹಾಗೂ ಮೌನೇಶ ಬಡಿಗೇರ ಅವರಿಂದ ಸುಗಮ ಸಂಗೀತ ಹಾಗೂ ಜನಪದ ಸಂಗೀತ ಕಾರ್ಯಕ್ರಮ ಜರುಗಿತು.