ಕುವೆಂಪು, ಕಾವ್ಯದ ಮುಕುಟಮಣಿ: ಷಣ್ಮುಖಪ್ಪ ಪೂಜಾರ್
ಹೂವಿನಹಡಗಲಿ : ರಾಷ್ಟ್ರಕವಿ,ರಸಋಷಿ ಕುವೆಂಪು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ತಮ್ಮ ಆಲೋಚನೆಗಳನ್ನ ಅಭಿವ್ಯಕ್ತಿಸಿದ್ದು ಅದರಲ್ಲಿಯೂ ಕಾವ್ಯ ಪ್ರಕಾರದಲ್ಲಿ ವಿಶಿಷ್ಟತೆಯನ್ನು ತೋರಿಸಿ ಕನ್ನಡದಲ್ಲಿ ಮಹಾಕಾವ್ಯಗಳ ಕಾಲಘಟ್ಟ ಮುಗಿದು ಹೋಯಿತು ಎನ್ನುವ ಸಂದರ್ಭದಲ್ಲಿ ’ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯ ರಚಿಸಿ ಕನ್ನಡದ ಅಸ್ಮಿತೆಯನ್ನು ಶ್ರೀಮಂತಗೊಳಿಸಿ ಕಾವ್ಯದ ಮುಕುಟಮಣಿಯಾಗಿದ್ದಾರೆ ಎಂದು ಚಿಂತಕ,ವಾಗ್ಮಿ ಷಣ್ಮುಖಪ್ಪ ಪೂಜಾರ್ ಅಭಿಪ್ರಾಯಪಟ್ಟರು.
ಅವರು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಸ್ಥಳೀಯ ವರ್ತಕರಾದ ಮುಂಡವಾಡ ಉಮೇಶ್ ಇವರ ಮನೆಯಲ್ಲಿ ಆಯೋಜಿಸಿದ್ದ ಶ್ರಾವಣ ಮಾಸ ವಿಶೇಷದ ಕಾವ್ಯ ಪೂರ್ಣಿಮಾ, ಕವಿ- ಕಾವ್ಯ ದರ್ಶನ, ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕುವೆಂಪು ಪರಿಸರ,ಆಧ್ಯಾತ್ಮ,ವಿಜ್ಞಾನ, ವೈಚಾರಿಕತೆ, ನಾಡು-ನುಡಿ, ಸಂತ- ಮಹಾಂತರ ಕುರಿತು ಕಾವ್ಯ ರಚಿಸಿದ್ದಾರೆ. ಪ್ರಚಲಿತ ವಿದ್ಯಮಾನಗಳಿಗೆ ವಿಶಿಷ್ಟ ರೀತಿಯಲ್ಲಿ ಪ್ರತಿಕ್ರಿಯಿಸಿ ಸಮಾಜವನ್ನು, ಪ್ರಭುತ್ವವನ್ನು ತಮ್ಮ ಕಾವ್ಯ- ಖಡ್ಗದಿಂದಲೇ ಎಚ್ಚರಿಸಿದ್ದಾರೆ ಎಂದರು. ಕುವೆಂಪುರವರ ಅನೇಕ ಕವಿತೆಗಳನ್ನು ವಾಚಿಸಿ ವಿಶ್ಲೇಷಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಶ್ರಾಂತ ಪ್ರಾಚಾರ್ಯ ಟಿ.ಪರಮೇಶ್ವರ್ಪ ಮಾತನಾಡಿ ಕನ್ನಡ ಭಾಷೆ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಹೊಂದಿದೆ. ಸಾಹಿತ್ಯ ರಚನೆಗೆ ಭಾಷಾಜ್ಞಾನ ಅಗತ್ಯ. ಯುವಕವಿಗಳು ಆಳವಾಗಿ ಅಭ್ಯಸಿಸಿ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಲು ಸಲಹೆ ನೀಡಿದರು.ವರ್ತಕ ಮುಂಡವಾಡ ಉಮೇಶ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಈ ರೀತಿಯ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಹಿತ್ಯಿಕ, ಸಾಂಸ್ಕೃತಿಕ ವಾತಾವರಣವನ್ನ ಜಾಗೃತ ಗೊಳಿಸುತ್ತಿರುವುದು ಅಭಿನಂದನೀಯ. ಇಂತಹ ಎಲ್ಲಾ ಕಾರ್ಯಕ್ರಮಗಳಿಗೂ ತಾವು ಸದಾ ಬೆಂಬಲಿಸುವುದಾಗಿ ತಿಳಿಸಿದರು.ಶ್ರಾವಣ ವಿಶೇಷ ಕವಿಗೋಷ್ಠಿ: *ಬಂತು* *ಶ್ರಾವಣ* ಕವನ ವಾಚಿಸಿ ಸಾಹಿತಿ ಪ್ರಕಾಶ್ ಮಲ್ಕಿ ಒಡೆಯರ್ ಕವಿಗೋಷ್ಠಿಗೆ ಚಾಲನೆ ನೀಡಿದರು. ಗೋಷ್ಠಿಯಲ್ಲಿ ಶಂಕರ್ ಬೆಟಗೇರಿ-ಪ್ರಜ್ಞಾನ್, ನಾಗಮಂಜುಳ ಜೈನ್-ಸುರಕ್ಷಾ, ರಾಮಪ್ಪ ಕೋಟಿಹಾಳ್- ನಕ್ಷತ್ರ ,ಗಂಗಾಧರ ಕೆ.ಎಚ್- ಶ್ರಾವಣ, ಯು.ರೇಣುಕಾ-ಸೇಡು, ಸಹನೆ, ಹೆಚ್.ಗಿರಿರಾಜ್- ಶುಭವಾಗಲಿ ಶ್ರಾವಣ, ಟಿ.ಎಂ.ನಾಗರತ್ನ- ಮಾದರಿಯಾದವರು, ನರಸಿಂಹಮೂರ್ತಿ- ಅವಳಿಗೂ ಗೊತ್ತು ಶ್ರಾವಣ, ಪಿ.ಎಂ.ಕೊಟ್ರಸ್ವಾಮಿ- ನಿಜ ಶ್ರಾವಣ ನಮ್ಮ ಮುಂದಿದೆ, ವೆಂಕಟೇಶ ಕ್ಷತ್ರಿಯ- ಅಧಿಕ ಶ್ರಾವಣ, ಶೋಭಾ ಮಲ್ಕಿ ಒಡೆಯರ್-ಅದಮ್ಯ ಪ್ರೀತಿ ಕುರಿತು ಕವನ ವಾಚಿಸಿದರು.
ಇದೇ ಸಂದರ್ಭದಲ್ಲಿ ಉಪನ್ಯಾಸ ನೀಡಿದ ಷಣ್ಮುಖಪ್ಪ ಪೂಜಾರ್ ಇವರನ್ನು ಕಸಾಪ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ತೋ.ಮ.ಶಂಕ್ರಯ್ಯ, ಹಿರಿಯರಾದ ಅಟವಾಳಗಿ ಕೊಟ್ರೇಶ್, ಡಾ.ವೈ.ಜಂಬಣ್ಣ, ಎ.ಎಂ.ಚನ್ನವೀರಸ್ವಾಮಿ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ತಾಲೂಕು ಘಟಕದ ಅಧ್ಯಕ್ಷ ಟಿ.ವೀರೇಂದ್ರ ಪಾಟೀಲ್ ವಹಿಸಿದ್ದರು. ಬಿ.ಯುವರಾಜಗೌಡ ಎಲ್.ಎಂ. ಶ್ರೀಲತಾ, ಸಾಗರ್ ಸಂಗೀತ ಕಾರ್ಯಕ್ರಮ ನೆರವೇರಿಸಿದರು. ಪ್ರಾರಂಭದಲ್ಲಿ ಯುವರಾಜಗೌಡ ಪ್ರಾರ್ಥಿಸಿದರು. ಉಪನ್ಯಾಸಕ ಶಂಕರ್ ಬೆಟಗೇರಿ ಸ್ವಾಗತಿಸಿದರು. ನಾಗರಾಜ ಮಲ್ಕಿಒಡೆಯರ್ ವಂದಿಸಿದರು. ವಿ.ಭೀಮಾ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು.