ಗುಳೇದಗುಡ್ಡ ಬಸವೇಶ್ವರ ಹೆಸರಿನ ಬಡಾವಣೆಗಿಲ್ಲ ಅಭಿವೃದ್ಧಿ ಭಾಗ್ಯ
ಪುರಸಭೆಯ ನಿರ್ಲಕ್ಷ್ಯ, ಕಾರ್ಯವೈಖರಿಗೆ ಆಕ್ರೋಶ: ಮಾಜಿ ಸಿಎಂ ಕ್ಷೇತ್ರವಾದರೂ ಅಭಿವೃದ್ಧಿಯಿಂದ ದೂರ
ಗುಳೇದಗುಡ್ಡ,ಸೆ.14: ಕುಡಿವ ನೀರು, ವಸತಿ, ನಿವೇಶನ ಇತ್ಯಾದಿಗಳ ಕರ ವಸೂಲಿ ಪ್ರತಿವರ್ಷ ಮಾಡುತ್ತಿದ್ದರೂ ರಸ್ತೆ ಹಾಗೂ ಇನ್ನಿತರ ಅಭಿವೃದ್ಧಿಗಳಿಗೆ ಕಿಂಚಿತ್ತೂ ಕಾಳಜಿ ವಹಿಸದ ಪುರಸಭೆಯ ಕಾರ್ಯವೈಖರಿಗೆ ಇಲ್ಲಿನ ಬಡಾವಣೆ ಜನತೆ ಹಿಡಿಶಾಪ ಹಾಕುತ್ತಿದೆ.
12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಹೆಸರನ್ನು ಇಲ್ಲಿನ 6ನೇ ವಾರ್ಡಿನ ಬಡಾವಣೆಗೆ ಇಡಲಾಗಿದೆ. ಆದರೆ ಬಡಾವಣೆಯ ಸರ್ವೇನಂಬರ್ 7 ರಲ್ಲಿ ನಿವೇಶನಗಳ ಹಂಚಿಕೆ, ಮನೆಗಳ ನಿರ್ಮಾಣವಾದರೂ ಬಡಾವಣೆಯ ಲೇಔಟ್ದಲ್ಲಿ ಯಾವ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಕೃಷಿ ಭೂಮಿಯನ್ನು ವಸತಿಗಳಿಗೆ ಭೂಪರಿವರ್ತನೆ ಮಾಡದಿದ್ದರೂ ಇಲ್ಲಿ ಮನೆಗಳು ನಿರ್ಮಾವಾಗಿವೆ. ಹೀಗಾಗಿ ಪುರಸಭೆಯ ರಸ್ತೆ ನಿರ್ಮಾಣವೊಂದು ಆಗಿಲ್ಲವೆಂದರೂ, ಕುಡಿವ ನೀರು, ವಿದ್ಯುತ್ ಸಂಪರ್ಕ ಮಾತ್ರ ದೊರಕಿದೆ.
ಪ್ರಾಧಿಕಾರದ ಕೈಚಳಕ : ಭೂಪರಿವರ್ತನೆ ಮಾಡುವ ಸಂದರ್ಭದಲ್ಲಿ ಆ ಪ್ರದೇಶವನ್ನು ಸಂಪೂರ್ಣ ಅಭಿವೃದ್ಧಿ ಪಡಿಸಬೇಕೆಂಬ ನಿಯಮವಿದ್ದರೂ, ನಿಯಮವನ್ನು ಗಾಳಿಗೆ ತೂರಿ ಸಂಂಭಪಟ್ಟ ಅಧಿಕಾರಿಗಳು ನಿವೇಶನಗಳಿಗೆ ಅಪ್ರೂವಲ್ ನೀಡಿದ ಪರಿಣಾಮವಾಗಿ ಈ ಬಡಾವಣೆಗೆ ರಸ್ತೆ, ರಸ್ತೆ ದೀಪ ಇತ್ಯಾದಿ ಯಾವ ಸೌಲಭ್ಯಗಳೂ ಇಲ್ಲ. ಲಿಂಕ್ ರಸ್ತೆ ನೀಡದೇ ಬಾಗಲಕೋಟೆಯ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದವರು ಒಪ್ಪಿಗೆ ನೀಡಿದ ಕಾರಣಕ್ಕೆ ಬಡಾವಣೆಯ ರಸ್ತೆಗಳು ಸುಮಾರು ವರ್ಷಗಳಿಂದ ನಿರ್ಮಿಸಿಲ್ಲ. ಪ್ರಾಧಿಕಾರದವರು ತೋರಿದ ಕೈಚಳಕದಿಂದ ಪಟ್ಟಣ ಹಾಳಾಗಿ ಹೋಗುತ್ತಿದೆ ಎಂದು ಜನ ಆರೋಪಿಸುತ್ತಾರೆ.
20 ವರ್ಷಗಳಿಂದ ರಸ್ತೆ ನಿರ್ಮಿಸಿಲ್ಲ : ಬಸವೇಶ್ವರ ನಗರದ ಸರ್ವೇ ನಂ. 7 ರಲ್ಲಿ ಮನೆಗಳಾಗಿವೆ. ಸಮಾರು ಇಪ್ಪತ್ತು ವರ್ಷಗಳೇ ಕಳೆದರೂ ಭೂಪರಿವರ್ತಿಸಿದವರೂ ರಸ್ತೆ ನಿರ್ಮಿಸಿಲ್ಲ. ಕರ ವಸೂಲಿ ಮಾಡುತ್ತಿರುವ ಪುರಸಭೆಯೂ ಮಾಡಿಲ್ಲ. ಹೀಗೆ ಅನಾಥವಾಗಿ ಅಭಿವೃದ್ಧಿ ಕಾಣದ ಬಡಾವಣೆಗಳು ಪಟ್ಟಣದಲ್ಲಿ ಇನ್ನೂ ಇವೆ. ಇವುಗಳ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಕೇಳಿದರೆ ಅವರಿಗೆ ಮಾಹಿತಿ ಇಲ್ಲವೆನ್ನುತ್ತಾರೆ.
ಲೇಔಟ್ ಆದರೂ ಅಭಿವೃದ್ಧಿ ಶೂನ್ಯ : ಲೇಔಟ್ ಮಾಡುವಾಗ ಎಲ್ಲ ಅಭಿವೃದ್ಧಿ ಪಡಿಸಿದ್ದನ್ನು ನೋಡಿಯೇ ಆದೇಶ ನೀಡಬೇಕು. ಆದರೆ ಯಾವುದೇ ಅಭಿವೃದ್ಧಿ ಆಗದಿದ್ದರೂ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಕಣ್ಣು ಮುಚ್ಚಿಯೇ ಅನುಮತಿಸುತ್ತಿರುವುದು ಸಾರ್ವಜನಿಕರಲ್ಲಿ ಸಂಶಯಕ್ಕೆ ಗ್ರಾಸವಾಗುತ್ತಿದೆ. ಒಪ್ಪಕೊಂಡ ಲಂಚದ ವ್ಯವಸ್ಥೆಯಿಂದ ಬಡಾವಣೆಗಳು ಅಭಿವೃದ್ಧಿ ಕಾಣುತ್ತಿಲ್ಲವೆಂದು ಜನ ಮಾತನಾಡುತ್ತಿದ್ದಾರೆ.
ಪುರಸಭೆ ನಿರ್ಲಕ್ಷ್ಯ : ಪಟ್ಟಣದ ಹಲವಾರು ಕಡೆಗಳಲ್ಲಿ ಇದೇ ರೀತಿ ವಸತಿ ನಿವೇಶನಗಳಿಗೆ ಭೂಪರಿವರ್ತನೆ ಮಾಡಿಕೊಡಲಾಗುತ್ತಿದೆ. ಆದರೆ ಇಲ್ಲಿ ಅಭಿವೃದ್ಧಿ ಶೂನ್ಯತೆ ಎದ್ದು ಕಾಣುತ್ತಿದೆ. ನಗರ ಪ್ರದೇಶವಾದರೂ ಬಡಾವಣೆಗಳ ಅಭಿವೃದ್ಧಿ ಮಾಡದೇ ನಿವೇಶನ ಮಾರಾಟ ಮಾಡುವ, ಅವುಗಳ ಖರೀದಿ ಆಗುವ ಪ್ರಕ್ರಿಯೆಗಳು ನಿರಂತರವಾಗಿ ನಡೆದಿವೆ. ಇದಕ್ಕೆ ಕಡಿವಾಣ ಹಾಕಲು ಜಿಲ್ಲಾ ಮಟ್ಟದ ಅಧಿಕಾರಿಗಳಿಂದಲೂ ಸಾಧ್ಯವಾಗದಿರುವುದು ಭ್ರಷ್ಟತೆಗೆ ಹಿಡಿದ ಕನ್ನಡಿಯಾಗಿದೆ ಎಂದು ಕೆಲ ಪುರಸಭೆ ಸದಸ್ಯರು ಹೇಳುತ್ತಾರೆ.
ಗಾರ್ಡ್ನ್ ಅಭಿವೃದ್ಧಿ ಶೂನ್ಯ : ಸರ್ವೇ ನಂ. 7 ಹಾಗೂ ಇನ್ನಿತರ ಹೊಸ ಬಡಾವಣೆಗಳಲ್ಲಿ ಮನೆಗಳ ನಿರ್ಮಾಣವಾಗಿ ಹತ್ತಾರು ವರ್ಷಗಳೇ ಕಳೆದರೂ ಆ ಬಡಾವಣೆಗಳಿಗೆ ಕಾಯ್ದಿರಿಸಿದ ಗಾರ್ಡ್ನ್ ಜಾಗೆಗಳು ಖಾಸಗಿಯವರ ಸೊತ್ತಾಗಿವೆ. ಕೆಲವು ಕಸ ಸಂಗ್ರಹದ ತೊಟ್ಟಿಗಳಾಗಿವೆ. ಇನ್ನೂ ಕೆಲ ಗಾರ್ಡ್ನ್ ಸ್ಥಳಗಳಲ್ಲಂತೂ ಮುಳ್ಳು ಕಂಠಿ ಬೆಳೆದಿವೆ.
ಮಾಜಿ ಸಿಎಂ ಕ್ಷೇತ್ರವೇ ಅಭಿವೃದ್ಧಿಯಿಂದ ವಂಚಿತ: ಮಾಜಿ ಸಿಎಂ ಸಿದ್ದರಾಮಯ್ಯನವರ ಕ್ಷೇತ್ರವಾಗಿರುವ ಬಾದಾಮಿಯ ದೊಡ್ಡ ಪಟ್ಟಣ ಗುಳೇದಗುಡ್ಡ. ಆದರೆ ಇಲ್ಲಿ ಪ್ರಮುಖ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಪುರಸಭೆ ಅಭಿವೃದ್ಧಿ ಶೂನ್ಯವಾಗಿದೆ. ಗಾರ್ಡ್ನ್ಗಳು, ರಸ್ತೆಗಳು ತಗ್ಗು ಬಿದ್ದಿವೆ. ಸರಿಯಾಗಿರುವ ರಸ್ತೆಗಳನ್ನೇ ಚರಂಡಿ, ನೀರಿನ ಪೈಪ್ ಅಳವಡಿಸಲು ಹಡ್ಡಿ ಕಂದಕ ತೆಗೆದು ಹಾಗೆಯೇ ಬಿಡುತ್ತಿದ್ದಾರೆ. ರಸ್ತೆ ನಿರ್ಮಣ ಮಾಡಿದ ವರ್ಷದೊಳಗೆ ಇಂತಹ ಪ್ರಕರಣಗಳು ನಡೆದುತ್ತಿವೆ. ಸಾರ್ವಜನಿಕರ ಲಕ್ಷಾಂತರ ರೂ. ರಸ್ತೆಗೆ ಖರ್ಚು ಮಾಡಿ ಪುನ: ಅದೇ ರಸ್ತೆ ಮೇಲೆ ತಗ್ಗು ತೋಡುವ ಪದ್ದತಿ ಎಷ್ಟರ ಮಟ್ಟಿಗೆ ವೈಜ್ಞಾನಿಕವಾಗಿದೆ ಎಂಬುದನ್ನು ಜಿಲ್ಲಾಧಿಕಾರಿಗಳೇ ಗಮನಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.