ಪುರಸಭೆ ಚುನಾವಣೆ: ಗುಂಡಾಗಿರಿ ಪ್ರದರ್ಶನ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ಇಂಡಿ: ಪುರಸಭೆ ಚುನಾವಣೆಯಲ್ಲಿ ಗೂಂಡಾಗಿರಿ ಪ್ರದರ್ಶನ ಮಾಡಲಾಗಿದೆ. ಚುನಾಯಿತ ಸದಸ್ಯರಿಗೆ ಮತದಾನ ಮಾಡದಂತೆ ಮಾಡಲಾಗಿದೆ ಎಂದು ಆರೋಪಿಸಿ ಶಾಸಕ ಯಶವಂತ್ರಾಯಗೌಡ ಪಾಟೀಲರ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಹಾಗೂ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮತನಾಡಿದ ಶಾಸಕ ಯಶವಂತ್ರಾಯಗೌಡ ಪಾಟೀಲ್, ಸಂವಿಧಾನಿಕ ಆಯ್ಕೆಯಾದ ಪುರಸಭೆ ಸದಸ್ಯ ಭೀಮನಗೌಡ ಪಾಟೀಲ ಇವರಿಗೆ ಚುನಾವಣೆಯಲ್ಲಿ ಭಾಗಿಯಾಗದಂತೆ ಮಾಡಿರುವದನ್ನು ಖಂಡಿಸುವುದಾಗಿ ತಿಳಿಸಿದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಗಾಂಧಿಜಿಯವರ ಶಾಂತಿಮಾರ್ಗದಲ್ಲಿ ಚುನಾವಣೆ ನಡೆಯಬೇಕು. ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಾದ ಸದಸ್ಯರಿಗೆ ಗುಂಡಾಗಿರಿ ಮಾಡಿ ಅಪಹರಿಸಿದ್ದು ಕುರಿತು ನ್ಯಾಯ ಸಿಗುವ ವರೆಗೂ ಪ್ರತಿಭಟನೆ ನಡೆಸುತ್ತೇವೆ. ಪ್ರೀತಿಯಿಂದ ಸದಸ್ಯರನ್ನು ಕರೆದುಕೊಂಡು ಹೋಗಬೇಕಿತ್ತು. ಆದರೆ ಪುರಸಭೆ ಸದಸ್ಯ ಭೀಮನಗೌಡ ಪಾಟೀಲರು ಎರಡು ಬಾರಿ ಪುರಸಭೆ ಅಧ್ಯಕ್ಷರಾದವರು ಮತ್ತು ಮೂರನೇಯ ಅವಧಿಗೆ ಸದಸ್ಯರಿದ್ದಾರೆ. ಆಯ್ಕೆಯಾದವರಿಗೆ ಚುನಾವಣೆಯಲ್ಲಿ ಭಾಗಿಯಾಗುವ ಅವಕಾಶ ಕೊಡದೇ ಗುಂಡಾಗಿರಿ ಪ್ರಯೋಗಿಸಿ ಹಕ್ಕು ಕಸಿದುಕೊಂಡಿದ್ದು ಅದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ. ತಪ್ಪಿತಸ್ಥರಿಗೆ ಕೂಡಲೇ ಹಿಡಿಯಬೇಕು. ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಪಟ್ಟು ಹಿಡಿದು ಕ್ರಮ ಜರುಗಿಸುವ ವರೆಗೂ ಪ್ರತಿಭಟನೆ ಹಿಂಪಡೆಯುವದಿಲ್ಲ ಎಂದರು.
ಜಟ್ಟೆಪ್ಪ ರವಳಿ, ಶ್ರೀಕಾಂತ ಕುಡಿಗನೂರ, ರಮೇಶ ನಾಯಕ, ಧರ್ಮಣ್ಣ ವಾಲಿಕಾರ, ಹಣಮಂತ ಖಂಡೆಕರ, ಸುಭಾಸ ಬಾಬರ, ಮಹೇಶ ಹೊನ್ನಬಿಂದಗಿ ಮಾತನಾಡಿ ಪಾರದರ್ಶಕ ಚುನಾವಣೆ ನಡೆಯಬೇಕು. ಗುಂಡಾಗಿರಿ ಮಾಡಿ ಸದಸ್ಯರಿಗೆ ಬರದಂತೆ ಮಾಡಿದವರ ಕ್ರಮ ಜರುಗಿಸಬೇಕು. ಮತ್ತೊಮ್ಮೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಯಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶಂಕರಗೌಡ ಪಾಟೀಲ, ಪ್ರಭುಗೌಡ ಪಾಟೀಲ, ಪ್ರಶಾಂತ ಕಾಳೆ, ಇಲಿಯಾಸ ಬೋರಾಮಣಿ, ಚಂದು ದೇವರ, ಸತೀಶ ಕುಂಬಾರ, ಭೀಮಣ್ಣ ಕವಲಗಿ, ಪುರಸಭೆ ಸದಸ್ಯರಾದ ಅಯೂಬ ಬಾಗವಾನ, ಲಿಂಬಾಜಿ ರಾಠೋಡ, ಶೈಲಜಾ ಪೂಜಾರಿ, ಸಂಗೀತಾ ಕರಿಕಟ್ಟಿ, ಸುದೀರ ಕರಿಕಟ್ಟಿ, ನಿರ್ಮಲಾ ತಳಕೇರಿ, ಹುಚ್ಚಪ್ಪ ತಳವಾರ, ಉಮೇಶ ದೇಗಿನಾಳ, ಸದಾಶಿವ ಪ್ಯಾಟಿ, ಜಾವೀದ್ ಮೋಮಿನ್, ಮುಕ್ತಾರ ಇಂಡೀಕರ್, ಸೇರಿದಂತೆ ನೂರಾರು ಜನ ಭಾಗಿಯಾಗಿದ್ದರು.
ಸ್ಥಳಕ್ಕೆ ಆಗಮಿಸಿದ ಕಂದಾಯ ಉಪವಿಬಾಗಾಧಿಕಾರಿ ರಾಹುಲ್ ಶಿಂಧೆ ಪೋಲಿಸ ಇಲಾಖೆಯಿಂದ ಸದರಿ ವರದಿ ತರಿಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವದಾಗಿ ತಿಳಿಸಿದರು.