ಬೈಲಹೊಂಗಲ

ಬಸವತತ್ವದಡಿ ನೂತನ ಗೃಹ ಪ್ರವೇಶ ಮಾಡಿದ ಮುನೀರ ಶೇಖ

ಬಸವತತ್ವದಡಿ ನೂತನ ಗೃಹ ಪ್ರವೇಶ ಮಾಡಿದ ಮುನೀರ ಶೇಖ

ಮನೆಯ ಮೇಲೆ ಷಟ್ಟಸ್ಥಳ ಧ್ವಜಾರೋಹಣ ನೆರವೇರಿಸಿ ಮನೆಯಲ್ಲಿ ವಚನಗಾಯನ ಬಸವ ಪೂಜೆ ಮಾಡಿ ಲಿಂಗಾಯತರಿಗೆ ಮಾದರಿ 

ಬೈಲಹೊಂಗಲ 23:  ಹಿಂದೂ ಮುಸ್ಲಿಂರ ನಡುವೆ ಕ್ಷುಲ್ಲಕ ವಿಚಾರಗಳಿಗೆ ಮರಣಾಂತಿಕ ಗಲಭೆಗಳು ನಡೆಯುವ ನಡುವೆಯು ಇವನಾರವ ಇವನಾರವ ಎಂದೆನಿಸದೆ ಇವ ನಮ್ಮವ ನಮ್ಮ ಮನೆಯ ಮಗನೆಂದೆನಿಸಯ್ಯ ಎಂದು ವಿಶ್ವವನ್ನೆ ಒಂದೆ ಕುಟುಂಬದಡಿ ನೋಡಿದ ವಿಶ್ವಗುರು ಬಸವಣ್ಣನವರ ನೈಜ ಆಚರಣೆಯಂತೆ ಸಮೀಪದ ಹೊಸೂರ ಗ್ರಾಮದ ಮುಸ್ಲಿಂ ಸಮಾಜದ ವ್ಯಕ್ತಿ ಲಿಂಗಾಯತ ನಿಜಾಚರಣೆಯಲ್ಲಿ ತನ್ನ ದುಡಿಮೆಯ ಫಲದಿಂದ ನೂತನವಾಗಿ ನಿರ್ಮಿಸಿದ ಬಸೋಬಿ ಮಂಜಿಲ್ ಗೃಹ ಪ್ರವೇಶ ಮಾಡಿರುವದು ನಾಗರಿಕ ಸಮಾಜದಲ್ಲಿ ವಿಶ್ವ ಗುರು ಬಸವಣ್ಣನವರ ಲಿಂಗಾಯತ ಆಚರಣೆಯಿಂದ ಸಾಮರಸ್ಯದ ಜೀವನಕ್ಕೆ ಹಿಡಿದ ಕನ್ನಡಿಯಾಗಿದೆ. 

ಸಮೀಪದ ಹೊಸೂರ ಗ್ರಾಮದಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿರುವ ಮುನೀರ ಶೇಖ ಅನೇಕ ಹಿಂದೂಗಳ ಮನೆ ನಿರ್ಮಾಣ ಮಾಡುವದರೊಂದಿಗೆ ಆ ಸಮಾಜದ ಜೊತೆ ಒಡನಾಟ ಹೊಂದಿದ್ದಾರೆ. ಗ್ರಾಮದ ಬಸವ ಸಮೀತಿಯವರ ಜೊತೆ ಸೇರಿ ಪ್ರತಿಯೊಂದು ಲಿಂಗಾಯತ ಕಾರ್ಯಕ್ರಮದಲ್ಲಿ ಭಾಗವಹಿಸುವದರೊಂದಿಗೆ ಅತನು ಮುಸ್ಲಿಂನಾಗಿದ್ದರು ಬಸವ ತತ್ವಕ್ಕೆ ಮಾರು ಹೋಗಿ ತನ್ನ ಜೀವನದ ಕನಸಿನ ಹೊಸ ಮನೆಯ ಗೃಹ ಪ್ರವೇಶವನ್ನು ಬಸವತತ್ವದಡಿ ತನ್ನ ನೂತನ ಮನೆಯ ಮೇಲೆ ಷಟ್ಟಸ್ಥಳ ಧ್ವಜಾರೋಹಣ ನೆರವೇರಿಸಿ ಮನೆಯಲ್ಲಿ ವಚನಗಾಯನ ಮತ್ತು ಬಸವ ಪೂಜೆಯೊಂದಿಗೆ ಗೃಹ ಪ್ರವೇಶ ಮಾಡುವದರೊಂದಿಗೆ ಲಿಂಗಾಯತರಿಗೆ ಮಾದರಿಯಾಗಿ ಹೆಗ್ಗಳಿಕೆಗೆ ಪಾತ್ರರಾದರು. 

ಗ್ರಾಮದ ಬಸವತತ್ವ ಆರಾಧಕರಾದ ದೇಮಪ್ಪ ಯರಡಾಲ, ರಾಜು ಮೂಗಬಸವ, ದೇಮಪ್ಪ ಸಂಗೋಳ್ಳಿ, ಮಹಾಂತೇಶ ಮಬ್ಬನೂರ,  ಗೋಪಾಲ,ಚಿಕ್ಕೊಪ್ಪ,  ಮಡಿವಾಳಪ್ಪ ಕೋರಿಕೊಪ್ಪ ಮುಂತಾದವರು ನೂತನ ಗೃಹ ಪ್ರವೇಶದ ಲಿಂಗಾಯತ ನೈಜ ಅಚರಣೆಗಳನ್ನು ನಡೆಸಿಕೊಟ್ಟರು. ನಂತರ ಗುರು ಮಡಿವಾಳೇಶ್ವರ ಮಠದಲ್ಲಿ ಅಗಮಿಸಿದ್ದ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಒಟ್ಟಾರೆ ಗ್ರಾಮದಲ್ಲಿ ನಡೆದ ಈ ಭಾವೈಕ್ಯದ ಗೃಹ ಪ್ರವೇಶದ ಕಾರ್ಯಕ್ರಮಕ್ಕೆ ಲಿಂಗಾಯತ ಹಾಗೂ ಮುಸ್ಲಿಂ ಸಮಾಜದ ಸಾವಿರಾರು ಜನ ಭಾಗವಹಿಸಿ ಹರ್ಷವ್ಯಕ್ತಪಡಿಸಿದರು. 


ಸುದ್ದಿ ಓದಿ