ಧಾರವಾಡ - ಹುಬ್ಬಳ್ಳಿ

ಅಮ್ಮಿನಬಾವಿಯಲ್ಲಿ ಜುಲೈ 17ರಂದು ಭಾವೈಕ್ಯದ ಮೊಹರಂ

ಅಮ್ಮಿನಬಾವಿಯಲ್ಲಿ ಜುಲೈ 17ರಂದು  ಭಾವೈಕ್ಯದ ಮೊಹರಂ

ಧಾರವಾಡ 16: ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಭಾವೈಕ್ಯದ ಮೊಹರಂ ಆಚರಣೆಯು ಪರಂಪರೆಯಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಜುಲೈ 17ರಂದು ಜರುಗಲಿದೆ.  

ಸುಮಾರು ಎರಡು ಶತಮಾನಗಳಿಂದಲೂ ಹಿಂದೂ-ಮುಸ್ಲೀಂ ಭಾವೈಕ್ಯದ ಹಬ್ಬವಾಗಿ ನಡೆಯುತ್ತಿರುವ ಮೊಹರಂ ಆಚರಣೆಗೆ ಚಾರಿತ್ರಿಕ ಹಿನ್ನೆಲೆ ಇದೆ. ಸರ್ವ ಸಮಾಜಗಳ ಜನತೆಯ ನೇತೃತ್ವದಲ್ಲಿ ಅಮ್ಮಿನಬಾವಿ ಗ್ರಾಮದ ಮೊಹರಂ ಹಬ್ಬದಾಚರಣೆ ಎಲ್ಲರ ಶ್ರದ್ಧಾ-ಭಕ್ತಿಗಳ ನೆಲೆಯಲ್ಲಿ ನಡೆಯಲಿದೆ. 

ಅಮ್ಮಿನಬಾವಿ ಗ್ರಾಮದ ಮಸೀದಿಯಲ್ಲಿ ಎರಡು ಪಂಜಾಗಳನ್ನು ಸ್ಥಾಪನೆ ಮಾಡಿದ್ದು, ಒಂದನ್ನು ಗುತ್ತೇಸಾಬ್ ಎಂದೂ, ಮತ್ತೊಂದನ್ನು ಕಾಸೀಂದುಲೈಃ ಎಂದು ಸಂಬೋಧಿಸಲಾಗುತ್ತಿದೆ. ಈ ಎರಡೂ ದೇವರುಗಳಿಗೂ ಭಕ್ತರು ಬೆಳ್ಳಿಯಿಂದಲೇ ಬಹುದೊಡ್ಡ ಪಂಜಾಗಳನ್ನು ಮಾಡಿಸಿಕೊಟ್ಟಿದ್ದಾರೆ. ವಿಶೇಷವೆಂದರೆ ಅಮ್ಮಿನಬಾವಿ ಗ್ರಾಮದ ಜೈನ್ ಸಮಾಜದ ಮುಖಂಡರಾಗಿದ್ದ ದಿವಂಗತ ರಾವಬಹದ್ದೂರ ಪಂಪಾಪತಿ ದೇಸಾಯಿ ಗುತ್ತೇಸಾಬ್ ಪಂಜಾವನ್ನು ಬೆಳ್ಳಿಯಿಂದ ಮಾಡಿಸಿಕೊಟ್ಟಿದ್ದು, ಇದು ಅಮ್ಮಿನಬಾವಿ ಗ್ರಾಮದ ಭಾವೈಕ್ಯತೆಗೆ ಸಾಕ್ಷಿ ನುಡಿಯುತ್ತದೆ.  

ಮೊಹರಂ ಕೊನೆಯ ದಿನ ಜುಲೈ-17 ರಂದು ಉಭಯ ಪಂಜಾಗಳನ್ನು ಹೊತ್ತುಕೊಂಡು ಪ್ರಾತಃಕಾಲದಲ್ಲಿ ಅಗ್ನಿಹಾಯುವ ಪ್ರಕ್ರಿಯೆ ಬಹಳ ಹಿಂದಿನಿಂದಲೂ ನಡೆಯುತ್ತ ಬಂದಿದೆ. ನಂತರ ಡೋಲಿ ಸಮೇತ ಉಭಯ ಪಂಜಾಗಳು ವಿವಿಧ ಜಾನಪದ ವಾದ್ಯ-ಮೇಳಗಳೊಂದಿಗೆ ಗ್ರಾಮದ ಬಡಾವಣೆಗಳಲ್ಲಿ ಸಂಚರಿಸುತ್ತವೆ. ಸಂಜೆ ಮತ್ತೆ ಈ ಪಂಜಾಗಳ ಮೆರವಣಿಗೆ ನಡೆದು ಹೊಳೆಗೆ ಹೋಗುವ ಕಾರ‌್ಯಕ್ರಮ ನಡೆಯುತ್ತದೆ. ಈ ಸಂದರ್ಭದಲ್ಲಿ ಹತ್ತಿರದ ಮರೇವಾಡ ಹಾಗೂ ತಿಮ್ಮಾಪೂರ ಗ್ರಾಮಗಳ ಪಂಜಾಗಳೂ ಸಹ ಸಮಾವೇಶಗೊಳ್ಳುತ್ತವೆ.  

ಪ್ರತೀ ವರ್ಷವೂ ಗ್ರಾಮದ ಹಿಂದೂ-ಮುಸ್ಲೀಂ ಸೇರಿದಂತೆ ಸರ್ವ ಸಮಾಜಗಳ ಸಹೋದರರೆಲ್ಲರೂ ಸೇರಿಕೊಂಡು ಈ ಮೊಹರಂ ಆಚರಣೆಯನ್ನು ಅತ್ಯಂತ ಶಾಂತಿಪೂರ್ಣವಾಗಿ ಭಾವೈಕ್ಯತೆಯೊಂದಿಗೆ ಆಚರಣೆ ಮಾಡುತ್ತ ಬರಲಾಗಿದ್ದು, ಇದು ಇಂದಿಗೂ ಮುಂದುವರೆದುಕೊಂಡು ಬಂದಿದೆ. 


ಸುದ್ದಿ ಓದಿ