ಮಗುವಿನೊಂದಿಗೆ ತಾಯಿ ಬಾವಿಗೆ ಬಿದ್ದು ಸಾವು
ಗುಳೇದಗುಡ್ಡ13: ಮಗಳೊಂದಿಗೆ ತಾಯಿ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ಗುಳೇದಗುಡ್ಡ ತಾಲೂಕಿನ ರಾಘಾಪೂರ ಗ್ರಾಮದಲ್ಲಿ ಸೋಮವಾರ ಮದ್ಯಾಹ್ನ 12 ಗಂಟೆ ಸುಮಾರಿಗೆ ಜರುಗಿದೆ.
ಅಜ್ಜಿ ಊರಾದ ರಾಘಾಪೂರದಲ್ಲಿದ್ದ 21 ವರ್ಷದ ತಾಯಿ ಫಕೀರವ್ವ ಗಂಡ ಮಂಜುನಾಥ ಪಿಡ್ಡನ್ನವರ, 18 ತಿಂಗಳ ಹೆಣ್ಣು ಮಗು ಶಿವಾನಿ ತಂದೆ ಮಂಜುನಾಥ ಪಿಡ್ಡನ್ನವರ್ ಪ್ರಾಣ ಕಳೆದುಕೊಂಡ ದುರ್ದೈವಿಗಳು.
ಸಾವಿನ ವಿವರ : ಪ್ರಾಣ ಕಳೆದುಕೊಂಡ ಫಕೀರವ್ವಳ ತವರು ಮನೆ ಮತ್ತು ಗಂಡನ ಮನೆÉ ಎರಡೂ ಇರುವುದು ಸಮೀಪದ ಹಂಸನೂರ ಗ್ರಾಮದಲ್ಲಿಯೇ. ಪಕ್ಕದ ರಾಘಾಪೂರ ಗ್ರಾಮ ಫಕೀರವ್ವಳ ಅಜ್ಜಿ ಊರು. ಅಜ್ಜಿ ಮನೆಯಲ್ಲಿಯೇ ಫಕೀರವ್ವ ಚಿಕ್ಕವಳಿದ್ದಾಗಿನಿಂದ ಬೆಳೆದವಳು. ಗಂಡನ ಮನೆಯಲ್ಲಿ ಸಣ್ಣಪುಟ್ಟ ಕೌಟುಂಬಿಕ ಕಲಹಗಳಿಂದ ಮನನೊಂದು ಕಳೆದ ನಾಲ್ಕೈದು ತಿಂಗಳುಗಳಿಂದ ರಾಘಾಪೂರದ ಅಜ್ಜಿ ಮನೆಯಲ್ಲಿಯೇ ತನ್ನ ಚಿಕ್ಕ ಮಗುವಿನೊಂದಿಗೆ ಫಕೀರವ್ವ ಇದ್ದಳು. ಸೋಮವಾರ ಹಂಸನೂರಿನಿಂದ ಗಂಡನ ಮನೆಯವರು ಫಕೀರವ್ವಳನ್ನು ಕರೆದುಕೊಂಡು ಬರಲು ಹೋಗಿದ್ದರಿಂದ ಅದಕ್ಕೆ ಒಪ್ಪದ ಇವಳು ತನ್ನ ಮಗಳೊಂದಿಗೆ ಅಜ್ಜಿಯ ಹೊಲದಲ್ಲಿಯ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿರುವುದಾಗಿ ಸ್ಥಳೀಯ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಾಯಂಕಾಲ 6 ಗಂಟೆವರೆಗೆ ಮೃತರ ಗಂಡನ ಇಲ್ಲವೇ ತಾಯಿಯ ಕುಟುಂಬ ವರ್ಗದ ಯಾರೂ ಬಂದು ಗುಳೇದಗುಡ್ಡ ಪೊಲೀಸ್ ಠಾಣೆಗೆ ದೂರು ದಾಖಲಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.