ಕಾಗವಾಡ

ಕಾಗವಾಡ ಮತಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗಾಗಿ 2000 ಕೋಟಿಗೂ ಹೆಚ್ಚು ಅನುದಾನ

ಕಾಗವಾಡ ಮತಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗಾಗಿ 2000 ಕೋಟಿಗೂ ಹೆಚ್ಚು ಅನುದಾನ

ಬಿಜೆಪಿ ರಾಜ್ಯ ಅಧ್ಯಕ್ಷ ನಳಿನಕುಮಾರ ಕಟೀಲ ಹೇಳಿಕೆ: ಮದಭಾವಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ 

ಅಥಣಿ 28: ಕಾಗವಾಡ ಮತಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗಾಗಿ ಬಿ.ಎಸ್‌.ಯಡಿಯುರ​ಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸರಕಾರದಲ್ಲಿ 2000 ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನಕುಮಾರ ಕಟೀಲ ಹೇಳಿದರು.  

ಅವರು ಕಾಗವಾಡ ಮತಕ್ಷೇತ್ರದ ಮದಭಾವಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. 

ಕಾಂಗ್ರೆಸ್ ಜನವಿರೋಧಿ ನೀತಿಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರೆ​‍್ಡಗೊಂಡು ಸರಕಾರ ರಚನೆಗೆ ಕಾರಣರಾದ ಶಾಸಕ ಶ್ರೀಮಂತ ಪಾಟೀಲರ ಬೇಡಿಕೆಯಂತೆ ಕಾಗವಾಡ ಮತಕ್ಷೇತ್ರದಲ್ಲಿ ಕುಡಿಯುವ ನೀರು, ನೀರಾವರಿ, ಶಿಕ್ಷಣ, ಆರೋಗ್ಯ, ರಸ್ತೆ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳ ಅನುಷ್ಠಾನಕ್ಕಾಗಿ ಬಿಜೆಪಿ ಸರಕಾರ ಶಾಸಕ ಶ್ರೀಮಂತ ಪಾಟೀಲರ ಮೂಲಕ 2000 ಕ್ಕೂ ಹೆಚ್ಚು ಕೋಟಿ ಅನುದಾನ ನೀಡಲಾಗಿದೆ ಎಂದ ಅವರು ರಾಜ್ಯದ ರೈತರ ಮಕ್ಕಳ ಶಿಕ್ಷಣದ ಅನಕೂಲಕ್ಕಾಗಿ ರೈತ ವಿದ್ಯಾನಿಧಿ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಷ್ಠಾನಗೊಳಿಸಿದ್ದರೆ. ಈ ಯೋಜನೆಯಡಿ ಲಕ್ಷಾಂತರ ರೈತರ ಮಕ್ಕಳ ಶಿಕ್ಷಣಕ್ಕೆ ಅನಕೂಲವಾಗಿದೆ ಎಂದರು.  

ಕಾಂಗ್ರೆಸ್‌-ಜೆಡಿಎಸ್ ಸಮಿಶ್ರ ಸರಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನ ಸೌಧದಿಂದ ಆಡಳಿತ ನಡೆಸದೆ ತಾಜ ಹೊಟೇಲನಿಂದಲೇ ಆಡಳಿತ ನಡೆಸುತ್ತಿದ್ದರು. ಆ ಸರಕಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಶಾಸಕರಲ್ಲಿ ಅಷ್ಟೇ ಅಲ್ಲ ಮುಖಂಡರಲ್ಲಿಯೂ ಸಹ ಒಮ್ಮತ ಮೂಡಲಿಲ್ಲ ಹೀಗಾಗಿ ರಾಜ್ಯದಲ್ಲಿ ಅಭಿವೃದ್ಧಿಗೆ ಹಿನ್ನಡೆ ಉಂಟಾದ ಪರಿಣಾಮ ಅಭಿವೃದ್ಧಿ ಬಯಸಿ 17 ಶಾಸಕರು ಸಮಿಶ್ರ ಸರಕಾರ ತೊರೆದು ಬಿಜೆಪಿ ಸೇರೆ​‍್ಡಗೊಂಡರು ಎಂದ ಅವರು ಆಧಾರ ರಹಿತವಾಗಿ ಬಿಜೆಪಿ ಮೇಲೆ 40ಅ ಸರಕಾರ ಎಂದು ಆರೋಪ ಮಾಡುತ್ತಿದ್ದು, ರಾಜ್ಯದ ಜನತೆ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದರು.  

ಸ್ವಾತಂತ್ರ್ಯದಿಂದ ಅತೀ ಹೆಚ್ಚು ಆಡಳಿತ ನೀಡಿದ ಕಾಂಗ್ರೆಸ್ ಪಕ್ಷದಿಂದ ಪ್ರಧಾನಿಯಾಗಿದ್ದ ಲಾಲಬಹಾದ್ದೂರ ಶಾಸ್ತ್ರಿ ಒಬ್ಬರನ್ನು ಹೊರತು ಪಡೆಸಿ ಇನ್ನೂಳಿದ ಕಾಂಗ್ರೆಸ್ ಪಕ್ಷದ ಎಲ್ಲ ಪ್ರಧಾನಿಗಳು ಭಷ್ಟರಾಗಿದ್ದರು ಇಂತಹ ಕಾಂಗ್ರೆಸ್ ದೇಶದಲ್ಲಿ ಭಷ್ಟಾಚಾರ ವ್ಯವಸ್ಥೆಯ ಜನಕ ಹೀಗಾಗಿಯೇ ಭ್ರಷ್ಟಾಚಾರ ಮತ್ತು ಕಾಂಗ್ರೆಸ್ ಪಕ್ಷ ಒಂದೇ ನಾಣ್ಯದ ಮುಖಗಳಿದ್ದಂತೆ ಎಂದ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ ಶಹಾ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿ ದೇಶ ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ ಆದರೆ ಇದೇ ಸಿದ್ಧರಾಮಯ್ಯ ತಾನು ಮುಖ್ಯಮಂತ್ರಿ ಇದ್ದ ಸಮಯದಲ್ಲಿ ಜೈಲಿನಲ್ಲಿದ್ದ ಪಿಎಫ್‌ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದರು ಅಲ್ಲದೆ ಸುಮಾರು 2000 ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ಹಿಂದೆ ಪಡೆದಿದ್ದರು ಎಂದು ಆರೋಪಿಸಿದರು.  

ಸಿದ್ಧರಾಮಯ್ಯ ಆಡಳಿತದಲ್ಲಿ ಶಿಕ್ಷಕರ ನೇಮಕಾತಿ, ಪಿಎಸ್‌ಐ, ಅರ್ಕಾವತಿ, ಹಾಸ್ಟೇಲ್ ಹಗರಣದಂತ ಅನೇಕ ಪ್ರಕರಣಗಳಲ್ಲಿ ತಾನು ಸಿಕ್ಕಿಹಾಕಿಕೊಳ್ಳುವ ಭಯದಿಂದಲೇ ಲೋಕಾಯುಕ್ತ ಇಲಾಖೆಯನ್ನೇ ಬಂದ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದ ಅವರು ಸಿದ್ಧರಾಮಯ್ಯ ಸರಕಾರದಲ್ಲಿ 3000 ಅಧಿಕ ಸಂಖ್ಯೆಯಲ್ಲಿ ರೈತರು ಆತ್ಮ ಹತ್ಯೆ ಮಾಡಿಕೊಂಡರು ಮತ್ತೊಂದೆಡೆ 24ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡಲಾಯಿತು ತನಗೆ ಏನೂ ಗೊತ್ತಿಲ್ಲದಂತೆ ಸಿದ್ಧರಾಮಯ್ಯ ನರಹಂತಕನಂತೆ ವರ್ತಿಸಿದರು ಎಂದು ಗಂಭೀರವಾಗಿ ಆರೋಪಿಸಿದರು.  

ಸಮಾವೇಶದ ನೇತೃತ್ವ ವಹಿಸಿದ್ದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಮಾತನಾಡಿ, ರಾಜಕೀಯದಿಂದ ಅಥವಾ ಶಾಸಕ ಸ್ಥಾನದಿಂದ ಲಾಭ ಮಾಡಿಕೊಳ್ಳುವ ಅಥವಾ ಹಣ ಗಳಿಕೆ ಮಾಡಿಕೊಳ್ಳುವ ಅವಶ್ಯಕತೆ ನನಗೆ ಇಲ್ಲ. ನಾನು ರಾಜಕೀಯ ಮಾಡುತ್ತಿರುವುದು ಬಡವರ, ನಿರ್ಗತಿಕರ, ರೈತರ ಸೇವೆಗಾಗಿ ಎಂದು ಸ್ಪಷ್ಟಪಡಿಸಿದರು.  

ಇತ್ತೀಚಿಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪರವಾಗಿಯೇ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಆದರೆ ಕೆಲವರು ನನ್ನ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ರೀತಿಯಲ್ಲಿ ಗೊಂದಲ ಹುಟ್ಟಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಎಂದ ಅವರು ನಾನು ಬಿಜೆಪಿ ಸಂಪೂರ್ಣವಾಗಿ ನಿಷ್ಠಾವಂತನಾಗಿದ್ದೇನೆ. ವಿನಾಕಾರಣ ಗೊಂದಲ ಹುಟ್ಟಿ ಹಾಕುವವರಿಗೆ ಅಂಜುವುದಿಲ್ಲ ಎಂದು ಖಾರವಾಗಿಯೇ ಉತ್ತರಿಸಿದರು.  

ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಮಾತನಾಡಿ, ಕಾಗವಾಡ ಕ್ಷೇತ್ರದಲ್ಲಿ ಇದುವರೆಗೂ 7 ಚುನಾವಣೆಗಳಲ್ಲಿ ಕೆಲಸ ಮಾಡಿದ ಅನುಭವ ನನಗಿದೆ ಹೀಗಾಗಿಯೇ ನಾನು ಈ ಮೊದಲು ಹೇಳಿದಂತೆ ಕಾಂಗ್ರೆಸ್ ಮುಖಂಡರು ಈ ಕ್ಷೇತ್ರದಲ್ಲಿ ತಿಪ್ಪರಲಾಗ ಹೊಡೆದರೂ ಕೂಡ ಬಿಜೆಪಿಯ ಶ್ರೀಮಂತ ಪಾಟೀಲರೇ ಆಯ್ಕೆಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಈ ಕ್ಷೇತ್ರದಲ್ಲಿ ಒಂದು ವೇಳೆ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ನನ್ನ ಮಗನೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಕೂಡ ನಾನು ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲರ ಪರವಾಗಿಯೇ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು ಅಷ್ಟೇ ಅಲ್ಲ ನೀವು ನನ್ನನ್ನು ಯಾವಾಗ ಬೇಕಾದರೂ ಕರೆದರೂ ಕೂಡ ನಾನು ನಿಮ್ಮ ಜೊತೆ ಬಂದು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಶಾಸಕ ಶ್ರೀಮಂತ ಪಾಟೀಲರಿಗೆ ಅಭಯ ಹಸ್ತ ನೀಡಿದರು.  

ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಅನಂತಪುರ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ದಾದಾ ಶಿಂಧೆ ತನ್ನ ಸಾವಿರಾರು ಬೆಂಬಲಿಗರೊಂದಿಗೆ ಶ್ರೀಮಂತ ಪಾಟೀಲ ಹಾಗೂ ಶ್ರೀನಿವಾಸ ಪಾಟೀಲ ನೇತೃತ್ವದಲ್ಲಿ ಬಿಜೆಪಿ ಸೇರೆ​‍್ಡಗೊಂಡರು. ಸಮಾವೇಶದಲ್ಲಿ ಚಿಕ್ಕೋಡಿ ಸಂಸದ ಅಣ್ಣಸಾಹೇಬ ಜೊಲ್ಲೆ, ಕುಡಚಿ ಶಾಸಕ ಪಿ.ರಾಜು, ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿದರು. ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ.ರಾಜೇಶ್ ನೇರ್ಲಿ ಸ್ವಾಗತಿಸಿದರು. ಶಾಂಭವಿ ಅಶ್ವಥಪುರ ವಂದೇಮಾತರಂ ಗೀತೆ ಹಾಡಿದರು. ಶಾಸಕ ಮಹೇಶ ಕುಮಠಳ್ಳಿ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಧುರೀಣರಾದ ಉಮೇಶ ಬಂಟೋಡಕರ, ಮಹಾದೇವ ಮೇತ್ರಿ, ಅಪ್ಪಾಸಾಹೇಬ ಚೌಗಲಾ, ಅಪ್ಪಾಸಾಹೇಬ ಅವತಾಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಮಾವೇಶದಲ್ಲಿ 10 ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. 


ಸುದ್ದಿ ಓದಿ