ಕಾಗವಾಡ

ಮೋಮಿನ್, ಮೋಳೆಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

ಮೋಮಿನ್, ಮೋಳೆಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

ಶೇಡಬಾಳ 19: ವಿದ್ಯಾರ್ಥಿ ಹಂತದಲ್ಲಿ ಉತ್ತಮ ಓದು ಮತ್ತು ಆಟೋಟ ಇವುಗಳೆರಡೂ ನಿಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆ ಟರ್ನಿಂಗ್ ಪಾಯಿಂಟ್ ಎಂದು ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ ಹೇಳಿದರು.

ಕಾಗವಾಡ ಶಿವಾನಂದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ವಾರ್ಷಿಕ ಕ್ರೀಡಾ ದಿನಾಚರಣೆ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಪ್ರತಿಭೆ ಪ್ರದರ್ಶಿಸುವುದರಿಂದ ಉನ್ನತ ಸ್ಥಾನ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಲಿದೆ, ಇದಕ್ಕೆ ವಿದ್ಯಾರ್ಥಿ ಹಂತವೇ ಸೂಕ್ತ ಸಮಯವಾಗಿದೆ ಎಂದು ಸಚಿವ ಶ್ರೀಮಂತ ಪಾಟೀಲ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಹುನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ವಾಯ್.ವಾಯ್.ಕೊಕ್ಕನವರ ಅವರು ಮನರಂಜನಾತ್ಮಕವಾಗಿ ಮಾತನಾಡಿ ವಿದ್ಯಾರ್ಥಿಗಳನ್ನು ನಕ್ಕು ನಲಿಸಿದರು. ಜೊತೆಗೆ ಮಕ್ಕಳು ತಂದೆ, ತಾಯಿ ಹಾಗೂ ಗುರುಗಳಿಗೆ ಗೌರವ ಕೊಡಬೇಕು. ಮೊಬೈಲ ಮತ್ತು ಟಿ.ವ್ಹಿ. ಮಾಧ್ಯಮಗಳಿಂದ ದೂರವಿದ್ದು, ಓದುವುದರ ಕಡೆಗೆ ಗಮನ ಹರಿಸಬೇಕೆಂದರು.

ಸಾನಿದ್ಯವನ್ನು ಯತೀಶ್ವರಾನಂದ ಸ್ವಾಮೀಜಿ, ಶಿವಶಂಕರ ಸ್ವಾಮಿಜಿ, ವಹಿಸಿದ್ದರು.

ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ.ಬಿ.ನಂದಾಳೆ ವಾರ್ಷಿಕ ವರದಿ ಓದಿದರು. ಪದವಿ ಕಾಲೇಜಿನ ಪ್ರಾಚಾರ್ಯ  ಬಿ.ಎ.ಪಾಟೀಲ ಅಧ್ಯಕ್ಷೀಯ ಪರ ಭಾಷಣ ಮಾಡಿದರು. ಅತಿಥಿಗಳು ವಿದ್ಯಾರ್ಥಿಗಳಿಗೆ ಕ್ರೀಡಾ, ಸಾಂಸ್ಕೃತಿಕ, ಪ್ರತಿಭಾ ಪುರಸ್ಕಾರ ಹಾಗೂ ನಗದು ಬಹುಮಾನಗಳನ್ನು ವಿತರಿಸಿದರು. ಬಾಲಕರ ವಿಭಾಗದಲ್ಲಿ ವಾಸೀಮ ಮೋಮಿನ್, ಬಾಲಕಿಯರ ವಿಭಾಗದಲ್ಲಿ ಕೀರ್ತಿ ಮೋಳೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡರು. ಕ್ರೀಡಾ ಕಾರ್ಯಾಧ್ಯಕ್ಷ ಪ್ರೊ. ಮಿಸ್. ವ್ಹಿ.ಆರ್.ತೊರಸೆ ಕ್ರೀಡಾ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಡಾ. ಶೃದ್ಧಾನಂದ ಸ್ವಾಮೀಜಿ, ಗೀತಾಶ್ರಮ ಸದಲಗಾ ಇವರು ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು. ಮಧ್ಯಾಹ್ನ ವಿದ್ಯಾರ್ಥಿ/ನಿಯರಿಂದ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾತ್ಮಕ ಕಾರ್ಯಕ್ರಮಗಳು ಜರುಗಿದವು.


ಸುದ್ದಿ ಓದಿ