ಮೋಳವಾಡ ಗ್ರಾಮ ಚಿಕ್ಕದಾದರೂ ಗ್ರಾಮಸ್ಥರ ಮನಸ್ಸು ಬಹಳ ವಿಶಾಲ : ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಪ್ರಶಂಸೆ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಯೋಜನೆಯ ಎರಡನೇ ದಿನ
ಲೋಕದರ್ಶನ ವರದಿ
ಕಾಗವಾಡ 20: ತಾಲೂಕಿನ ಮೋಳವಾಡ ಗ್ರಾಮ ಭೌಗೋಲಿಕವಾಗಿ ಹಾಗೂ ಜನಸಂಖ್ಯಾ ದೃಷ್ಟಿಯಿಂದ ಚಿಕ್ಕದಾದರೂ ಕೂಡ ಅಲ್ಲಿಯ ಜನರ ಮನಸ್ಸು ಬಹಳಷ್ಟು ವಿಶಾಲವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಎರಡನೇ ದಿನವಾದ ರವಿವಾರ ಕೂಡ ಬೆಳಿಗ್ಗೆ ವಾಯುವಿಹಾರ ಮುಗಿಸಿ ಕಾಗವಾಡ ತಾಲೂಕಿನ ಹಲವಾರು ಗ್ರಾಮಗಳ ಜನರ ಅಹವಾಲುಗಳನ್ನು ಸ್ವೀಕರಿಸಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ತಾಲೂಕಾ ಅಧಿಕಾರಿಗಳ ಮುಖಾಂತರ ಪರಿಹಾರ ಕೊಡಿಸಿದರು. ಇನ್ನು ಕೆಲವು ಸಮಸ್ಯೆಗಳಿಗೆ ಸರಕಾರದ ಮಟ್ಟದಲ್ಲಿ ಚರ್ಚಿಸಿ ಖಂಡಿತವಾಗಿಯೂ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದರು.
ಶನಿವಾರ ಬೆಳಿಗ್ಗೆ ಮೋಳವಾಡ ಗ್ರಾಮಕ್ಕೆ ಆಗಮಿಸಿ ಗ್ರಾಮದ ಎಲ್ಲ ದೇವಾಲಯಗಳಿಗೆ, ಅಂಗನವಾಡಿಗಳಿಗೆ, ಶಾಲೆಗಳಿಗೆ ಮತ್ತು ಗ್ರಾಮದ ಬಹುತೇಕ ಮನೆ-ಮನೆಗಳಿಗೆ ಭೇಟಿ ನೀಡಿ ಅವರ ಕುಂದು ಕೊರತೆಗಳನ್ನು ಆಲಿಸಿದರು. ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿ ಸ್ಥಳಿಯ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಾಧ್ಯವಾದಷ್ಟು ಸಮಸ್ಯೆಗಳಿಗೆ ಪರಿಹಾರ ನೀಡಿದರು. ರಾತ್ರಿ ಶಾಲಾ ಮಕ್ಕಳಿಂದ ಮತ್ತು ವಿವಿಧ ಇಲಾಖೆಯ ಸಿಬ್ಬಂದಿಗಳು ಮನರಂಜನಾ ಕಾರ್ಯಕ್ರಮಗಳು ಜರುಗಿದವು.
ಶೀಘ್ರವೇ ಶಿಪ್ಟಿಂಗ್ ಜಿಲ್ಲಾಧಿಕಾರಿ;
ರವಿವಾರ ಮುಂಜಾನೆ ವಾಯುವಿಹಾರ ಮುಗಿಸಿ ಮಾದ್ಯಮದೊಂದಿಗೆ ಮಾತನಾಡುವಾಗ ಕುಸನಾಳ ಹಾಗೂ ಮೋಳವಾಡ ಎರಡು ಗ್ರಾಮಗಳ ಸ್ಥಳಾಂತರವನ್ನು ಉಗಾರ ಬಿಕೆ ಗ್ರಾಮದ ಬಳಿ 66 ಎಕರೆ ಜಮೀನನ್ನು ನೋಡಿದ್ದೇವೆ, ಇನ್ನು 27 ಎಕರೆ ಜಮೀನಿನ ಅವಶ್ಯಕತೆ ಇದೆ. ಶೀಘ್ರವೇ ಸಿಟಿ ಸರ್ವೆ ಮಾಡಿಸಿ ಭೂಮಿಯನ್ನು ಸ್ವಾಧಿನ ಪಡಿಸಿಕೊಂಡು ಸೈಟ್ಗಳನ್ನು ನಿರ್ಮಾಣ ಮಾಡಿ ಅಲ್ಲಿ ಮೂಲಭೂತ ಸೌಲಭ್ಯಗಳನ್ನು ನೀಡಿ ಎರಡು ಗ್ರಾಮಗಳನ್ನು ಸ್ಥಳಾಂತರಿಸುವ ಕಾರ್ಯ ಮಾಡಲಾಗುವುದೆಂದು ಜಿಲ್ಲಾಧಿಕಾರಿಗಳು ಹೇಳಿದರು.
ದೋಣಿ ವಿಹಾರ
ಮೋಳವಾಡದಿಂದ ಕುಸನಾಳದವರೆಗೆ ಕೃಷ್ಣಾ ನದಿಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಅಪರ ಜಿಲ್ಲಾಧಿಕಾರಿ ಅಶೋಖ ದುಡಗುಂಟಿ, ಚಿಕ್ಕೋಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ತಹಸೀಲ್ದಾರ ರಾಜೇಶ ಬುರ್ಲಿ ಸೇರಿದಂತೆ ಹಲವಾರು ಅಧಿಕಾರಿಗಳೊಂದಿಗೆ ಮೋಳವಾಡದಿಂದ ಕುಸನಾಳದವರೆಗೆ ದೋಣಿ ಮೂಲಕ ತೆರಳಿ ಅಲ್ಲಿಯ ವಿಠ್ಠಲ ಮಂದಿರಕ್ಕೆ ಭೇಟ್ಟಿ ನೀಡಿ ದರ್ಶನ ಪಡೆದು ಕುಸನಾಳ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಉಪಹಾರ ಮಾಡಿ ಎರಡು ದಿನಗಳವರೆಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದರು.
ಬಿಸಿಎಂ ಹಾಸ್ಟೆಲ್ನಲ್ಲಿ ನೌಕರಿ ಭರವಸೆ;
ನದಿಯಲ್ಲಿ ದೋಣಿ ನಡೆಸುವ ರಾಣಿ ಅಂಬಿಗೇರ ಅವರು ಪ್ರವಾಹ ಸಂದರ್ಭದಲ್ಲಿ ಓರ್ವ ಮಹಿಳೆಯಾಗಿ ಜೀವದ ಹಂಗು ತೊರೆದು ಜನ ಹಾಗೂ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಮುಟ್ಟಿಸಿದ ಹೆಮ್ಮೆಯ ಪುತ್ರಿ ರಾಣಿ ಅಂಬಿಗೇರ ಇವರು ದೋಣಿ ಮೂಲಕ ತೆರಳುವಾಗ ಸರ್ ಮೋಳವಾಡ-ಚಿಂಚಲಿ ಮದ್ಯ ಕೃಷ್ಣಾ ನದಿಗೆ ಸೇತುವೆ ನಿರ್ಮಾಣವಾಗುತ್ತಿದೆ, ನನಗೆ ಉಪಜೀವನಕ್ಕೊಂದು ಆಧಾರ ಮಾಡಿಕೊಡಿ ಎಂದು ಮನವಿ ಸಲ್ಲಿಸಿದಾಗ ನಿಮಗೆ ಬಿಸಿಎಂ ಹಾಸ್ಟೆಲ್ನಲ್ಲಿ ನೌಕರಿ ಕೊಡಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ಕೃಷ್ಣಾ ನದಿಯಲ್ಲಿ ದೋಣಿ ಮೂಲಕ ವಿಹಾರ ಮಾಡುವಾಗ ಸಜ್ಜಕ್ ಹಾಗೂ ತುಪ್ಪ ಸವಿಯುತ್ತ ವಿಹಾರ ಮಾಡಿದ ಜಿಲ್ಲಾಧಿಕಾರಿ ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕುತ್ತ, ನಾನು ರೈತಾಪಿ ಕುಟುಂಬದಿಂದ ಬಂದವನು, ಚಿಕ್ಕಂದಿನಲ್ಲಿ ನಾವು ಬೆಳಿಗ್ಗೆ ಸಜ್ಜಕ, ತುಪ್ಪ ತಿಂದು ಹೋದರೆ ಸಾಯಂಕಾಲದವರೆಗೆ ಹಸಿವೇ ಆಗುತ್ತಿರಲಿಲ್ಲ, ಇದು ದೇಹಕ್ಕೆ ಶಕ್ತಿ ಕೊಡುವ ಆಹಾರ ಎಂದು ನೆನಪಿಸಿಕೊಂಡು ಇಂದಿನ ತಾಯಂದಿರು ಮಕ್ಕಳಿಗೆ ಫಿಜ್ಜಾ ಬರ್ಗರ ಬಿಟ್ಟು ಸಜ್ಜಕ್ ತುಪ್ಪ ತಿನ್ನಲು ಕೊಡಿ ಎಂದು ಸಲಹೆ ನೀಡಿದರು.
ಸಮಾರಂಭ ಯಶಸ್ವಿಗೊಳಿಸಲು ಗ್ರಾಮ ಪಂಚಾಯತ್ ಅಧ್ಯಕ್ಷೆ ದೀಪಾ ಖನಿಕುಡೆ, ಉಪಾಧ್ಯಕ್ಷೆ ನಿರ್ಮಲಾ ಪಾಟೀಲ, ಸದಸ್ಯರಾದ ಚಿದಾನಂದ ಅಥಣಿ, ಅಶೋಕ ನಾಂದಣಿ, ಸುಭಾಷ ಅಥಣಿ, ಜಯಪಾಲ ಯರಂಡೋಲೆ, ಸುಶೀಲ ಮಾಂಜರೆ, ರಾಜು ಕಾಂಬಳೆ, ಭಾಸ್ಕರ ಕಾಂಬಳೆ, ಸಂದೀಪ ಮಗದುಮ್, ರಾಜು ದುಗ್ಗೆ, ಪ್ರಕಾಶ ದುಗ್ಗೆ ಹಾಗೂ ತಾಲೂಕಿನ ಎಲ್ಲ ಅಧಿಕಾರಿಗಳು ಇದ್ದರು.