ಬೈಲಹೊಂಗಲ

ಆರ್‌ಟಿಓ ಕಚೇರಿಯ ಅಧೀಕ್ಷಕನ ದುರಾಡಳಿತ: ನಾಗರಿಕರ ಆಕ್ರೋಶ

ಆರ್‌ಟಿಓ ಕಚೇರಿಯ ಅಧೀಕ್ಷಕನ ದುರಾಡಳಿತ: ನಾಗರಿಕರ ಆಕ್ರೋಶ

ಲೋಕದರ್ಶನ ವರದಿ 


ಬೈಲಹೊಂಗಲ 16: ಪಟ್ಟಣದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಚೇರಿಯ ಅಧೀಕ್ಷಕನ ಬೇಜವಾಬ್ದಾರಿಯಿಂದ  ಡಿಎಲ್, ಎಲ್‌.ಎಲ್‌.ಆರ್, ಹೊಸ ಲೈಸೆನ್ಸಗೆ ಅರ್ಜಿ ಸಲ್ಲಿಸಲು ಬರುವಂತಹ ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾಗುತ್ತಿದ್ದಾನೆ.      

   ಸಾರಿಗೆ ಇಲಾಖೆಯ ನಿಯಮದ ಪ್ರಕಾರ ಮೇಲಾಧಿಕಾರಿಗಳು ಕೆಳ ಹಂತದ ಆಯಾ ವಿಭಾಗದ ಉದ್ಯೋಗಿಗಳಿಗೆ ಸೂಕ್ತ ನಿರ್ಧೇಶನ ನೀಡಿದ್ದರೂ ಸಹ ಕಛೇರಿ ಅಧೀಕ್ಷಕ ಅವಿನಾಶ ಕಾವೇರಿ ಎನ್ನುವ ನೌಕರ ಮಾತ್ರ ಯಾವೂದಕ್ಕೂ ಕ್ಯಾರೇ ಎನ್ನದೇ ತನ್ನ ದುರಾಡಳಿತವನ್ನು ಮುಂದುವರೆಸಿದ್ದಾನೆ. ಮೋಟಾರು ವಾಹನಗಳ ಲೈಸನ್ಸ್‌ ಸೇರಿದಂತೆ ಸರಕಾರದ ವಿವಿಧ ಯೋಜನೆಗಳನ್ನು ಪಡೆಯಲು ಬರುವಂತಹ ಸಾರ್ವಜನಿಕರಿಗೆ, ಲೈಸನ್ಸ್‌ದಾರರಿಗೆ ಕಿರುಕುಳ ನೀಡುತ್ತಿದ್ದು ನಾನೇ ರಾಜಾ ಎನ್ನುವಂತೆ ಮೆರೆಯುತ್ತಿದ್ದಾನೆ. 

 ಹೊಸ ಲೈಸೆನ್ಸ, ಎಲ್‌.ಎಲ್‌.ಆರ್, ಡಿಎಲ್, ಸೇರಿದಂತೆ ಇನ್ನಿತರೇ ಕೆಲಸ ಕಾರ್ಯಗಳಿಗೆ ಬರುವಂತಹ ಜನರ ಕಾಗದ ಪತ್ರಗಳು ಕಾನೂನು ಪ್ರಕಾರ ಸಮಪರ್ಕವಾಗಿದ್ದರೂ ಸಹ ಅವುಗಳನ್ನು ವಿನಾಕಾರಣ ತಿರಸ್ಕರಿಸುತ್ತಿರುವದರಿಂದ ನಾಗರಿಕರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು ತಿಂಗಳುಗಟ್ಟಲೇ ಕಛೇರಿಗೆ ಎಡತಾಕುವಂತಾಗಿದೆ. ಕೈ ಬೆಚ್ಚಗೆ ಮಾಡಿದರೆ ಮಾತ್ರ ಕಾಗದ ಪತ್ರಗಳನ್ನು ಪರೀಶೀಲಣೆ ಮಾಡದೇ ರಾಜಾರೋಷವಾಗಿ ಸಹಿ ಮಾಡಿ ಶಿಫಾರಸು ಮಾಡುತ್ತಾನೆಂದು ಸಾರ್ವಜನಿಕ ವಲಯದಲ್ಲಿ ಗಂಭೀರವಾದ ಆರೋಪಗಳು ಕೇಳಿ ಬರುತ್ತಿವೆ. 

    ಕೋವಿಡ್‌ನಿಂದ ತತ್ತರಿಸಿರುವ ಜನರಿಗೆ ಬರೆಯ ಮೇಲೆ ಬರೆ ಎಂಬಂತೆ ಇಲ್ಲ ಸಲ್ಲದ ಸಬೂಬ ಹೇಳಿ ಕಳುಹಿಸಿ ಕಚೇರಿ ವ್ಯಾಪ್ತಿಯ ಗ್ರಾಹಕರಿಗೆ ಕಿರಿ ಕಿರಿ ಉಂಟಾಗುತ್ತಿರುವದು ಸಾರಿಗೆ ಕಚೇರಿಗೆ ಕಳಂಕ ತರುತ್ತಿರುವದು ದೌರ್ಭಾಗ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ನಾಗರಿಕರಿಗೆ ನೇರವಾಗಿ ಯೋಜನೆ ತಲುಪಿಸಬೇಕೆಂಬ ಮಹಾದಾಸೆ ಇಟ್ಟುಕೊಂಡು ಕಾನೂನು ಜಾರಿಗೆ ತಂದರೆ ಮತ್ತೂಂದು ಕಡೆ ಬೈಲಹೊಂಗಲ ಎಆರ್‌ಟಿಓದಲ್ಲಿ ಕಛೇರಿ ಅಧೀಕ್ಷಕನ ಕಾನೂನು ಬೇರೆ ಎನ್ನುವಂತೆ ವರ್ತಿಸುತ್ತಿರುವದರಿಂದ ನಾಗರಿಕರಿಗೆ ತುಂಬಾ ತೊಂದರೆಯಾಗುತ್ತದೆ.  

    ಈತನ ಕರ್ತವ್ಯ ನಿರ್ಲಕ್ಷ್ಯೆತನವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವದೇ ಕ್ರಮ ಕೈಗೊಳ್ಳದೇ ಜಾರಿಕೊಳ್ಳುತ್ತಿದ್ದಾರೆ. ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗೇಶ ಮುಂಡಾಸ ಅವರು ಹುಬ್ಬಳ್ಳಿ, ಬೈಲಹೊಂಗಲ ವ್ಯಾಪ್ತಿಯ ಇಲಾಖೆಗಳಲ್ಲಿ ಜವಾಬ್ದಾರಿ ಇದ್ದು ಬೈಲಹೊಂಗಲಕ್ಕೆ ವಾರಕ್ಕೊಮ್ಮೆ ಬಾರಿ ಬರುತ್ತಾರೆ. ಹೀಗಾಗಿ ಕಛೇರಿ ಅಧಿಕ್ಷಕನು ನಾನು ಮಾಡಿದ್ದೇ ಕಾನೂನು ಎನ್ನುವಂತಾಗಿದೆ.  

   ಸರಕಾರ ಈ ಕೂಡಲೇ ಬೈಲಹೊಂಗಲಕ್ಕೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯನ್ನು ನಿಯುಕ್ತಿ ಮಾಡಿ ಬೇಜಾವಾಬ್ದಾರಿಯಿಂದ ವರ್ತಿಸುತ್ತಿರುವ ಕಚೇರಿ ಅಧಿಕ್ಷಕನನ್ನು ಕೂಡಲೇ ಎತ್ತಂಗಡಿ ಮಾಡಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.  

-------------------------------------  

    

   ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಿನ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆಯ ಕಛೇರಿಯಲ್ಲಿ ಆಯಾ ವ್ಯಾಪ್ತಿಯ ನಾಗರಿಕರು ತಮ್ಮ ಕೆಲಸ ಕಾರ್ಯಗಳನ್ನು ಝರಾಕ್ಷ ಪ್ರತಿಗಳ ಮೂಲಕ ಕೆಲಸ ಮಾಡಿಸಿಕೊಳ್ಳುತ್ತಿದ್ದು ಆದರೆ ಬೈಲಹೊಂಗಲದಲ್ಲಿ ಮಾತ್ರ ಮೂಲ ಅಸಲಿ ಪ್ರತಿಗಳೇ ಬೇಕು ಎನ್ನುವಂತಾಗಿದ್ದು ಈ ಅವ್ಯವಸ್ಥೆಯಿಂದ ಮಾನಸಿಕ ಕಿರುಕುಳ ಅನುಭವಿಸುವಂತಾಗಿದೆ. ಎಲ್ಲ ಕಾಗದ ಪತ್ರಗಳು ಸರಿ ಇದ್ದರೂ ಸಹ ಕುಂಟು ನೆಪ ಹೇಳಲಿಕ್ಕೆ ಯಾವೂದಕ್ಕೂ ಕಮ್ಮಿ ಇಲ್ಲ ಎನ್ನುವಂತಾಗಿದೆ.---- 

             ಎಂ.ಎಂ. ರಾಜಗೋಳಿ, ನಾಗರಿಕ ಬೈಲಹೊಂಗಲ   

  

 ಕಛೇರಿಯಲ್ಲಿ ನಾಗರಿಕರಿಗೆ ಯಾವದೇ ತೊಂದರೆಯಾದರೆ ಖುದ್ದಾಗಿ ಬೇಟಿಯಾಗಿ ಸಮಸ್ಯಯನ್ನು ಇತ್ಯರ್ಥಪಡಿಸಿಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಸಮಸ್ಯೆಗಳು ಉದ್ಭವಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವದು.--- ನಾಗೇಶ ಮುಂಡಾಸ  

         ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ, ಬೈಲಹೊಂಗಲ 


ಸುದ್ದಿ ಓದಿ