ಕಾಗವಾಡ

ರೈತರ ಸಮಸ್ಯೆಗಳಿಗೆ ಸ್ಪಂದಿಸಿದ ಸಚಿವ ಶ್ರೀಮಂತಗೆ ಸನ್ಮಾನ

ರೈತರ ಸಮಸ್ಯೆಗಳಿಗೆ ಸ್ಪಂದಿಸಿದ ಸಚಿವ ಶ್ರೀಮಂತಗೆ ಸನ್ಮಾನ
ಲೋಕುರ ಗ್ರಾಮದಲ್ಲಿ ರೈತರು ಸಚಿವ ಶ್ರೀಮಂತ ಪಾಟೀಲರನ್ನು ಸತ್ಕರಿಸುತ್ತಿರುವ ಚಿತ್ರ.

ಶೇಡಬಾಳ 19: ರೈತರು ತಮ್ಮಲ್ಲಿರುವ ಜ್ವಲಂತ ಸಮಸ್ಯೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗಬೇಡಿ. ನಿಮ್ಮ ಯಾವುದೇ ಸಮಸ್ಯೆಗಳನ್ನು ನನ್ನ ಬಳಿ ಹೇಳಿಕೊಂಡು ಸಮಸ್ಯೆಗೆ  ಪರಿಹಾರವನ್ನು ದೊರಕಿಸಿಕೊಳ್ಳುವಂತೆ ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ ಹೇಳಿದರು. 

ಅವರು ಶುಕ್ರವಾರ ದಿ. 18 ರಂದು ಲೋಕುರ ಗ್ರಾಮದ ಜೈ ಹನುಮಾನ ನೀರಾವರಿ ಸಂಘ, ಗಂಗಾಕಲ್ಯಾಣ ನೀರಾವರಿ ಸಂಘ ಹಾಗೂ ಇನ್ನಿತರ ನೀರಾವರಿ ಸಂಘಗಳು ಆಯೋಜಿಸಿದ್ದ ಸತ್ಕಾರ ಸಮಾರಂಭದಲ್ಲಿ ರೈತರು ನೀಡಿದ ಸತ್ಕಾರವನ್ನು ಸ್ವೀಕರಿಸಿ ಮಾತನಾಡುತ್ತಾ ರೈತರು ವಿದ್ಯುತ್ ಸಮಸ್ಯೆ ಕುರಿತು ನನ್ನ ಬಳಿಗೆ ಬಂದಾಗ ಅವರ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವಗೋಸ್ಕರ ಹೆಸ್ಕಾಂ ಇಲಾಖೆಯ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ದೊರಕಿಸಿ ಕೊಟ್ಟಿದ್ದೇನೆ. ಇದರಲ್ಲಿ ನನ್ನದೇನು ಮಹತ್ತರವಾದ ಪಾತ್ರವಿಲ್ಲ. ನಿಮ್ಮ ಯಾವುದೇ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡುವುದೇ ನನ್ನ ಆದ್ಯ ಕರ್ತವ್ಯವಾಗಿದೆ ಎಂದು ಸಚಿವರು ಹೇಳಿದರು. 

ರೈತ ಮುಖಂಡ ಹಾಗೂ ಲೋಕುರ ಪಿಕೆಪಿಎಸ್ ಅಧ್ಯಕ್ಷ ರಾಜಾರಾಮ ಗಡಗೆ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಬೇಸಿಗೆ ಸಮಯದಲ್ಲಿ ಈ ಭಾಗದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿತ್ತು. ಇದರಿಂದಾಗಿ ರೈತರು ಕಷ್ಟ ಪಟ್ಟು ಬೆಳೆದ ಬೆಳೆಗಳು ಒಣಗಿ ಸಾಕಷ್ಟು ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದರು. ರೈತರ ನಿಯೋಗ ಈ ಸಮಸ್ಯೆ ಕುರಿತು ಸಚಿವ ಶ್ರೀಮಂತ ಪಾಟೀಲರಿಗೆ ಮನವಿ ಮಾಡಿಕೊಂಡಾಗ ತತ್‌ಕ್ಷಣವೇ ಸಂಬಂಧಪಟ್ಟ ಇಲಾಖೆಯವರೊಂದಿಗೆ ಮಾತನಾಡಿ ನಮ್ಮ ಸಮಸ್ಯೆಗೆ ಸ್ಪಂದಿಸಿದ್ದಾರೆ. ಆ ಕಾರಣದಿಂದ ಅವರನ್ನು ಸತ್ಕರಿಸಲಾಗುತ್ತಿದೆ ಎಂದು ಹೇಳಿದರು. 

ಅದೇ ರೀತಿ ಕಳೆದ ಹಲವಾರು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ಯಾತ ನೀರಾವರಿ ಸಂಘಗಳ ವಿದ್ಯುತ್ ಬಿಲ್‌ಗಳನ್ನು ಮನ್ನಾ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡರು.  

ರೈತ ಮುಖಂಡ ಹಾಗೂ ಲೋಕುರ ಪಿಕೆಪಿಎಸ್ ಅಧ್ಯಕ್ಷ ರಾಜಾರಾಮ ಗಡಗೆ, ತಾಪಂ ಸದಸ್ಯ ಸುಧಾಕರ ಭಗತ, ರವೀಂದ್ರ ಪೂಜಾರಿ, ದಾದಾ ಪಾಟೀಲ, ಸುಭಾಷ ಕಟಾರೆ, ಭರತೇಶ ಪಾಟೀಲ, ನೇಮಿನಾಥ ಪಾಟೀಲ ಸೇರಿದಂತೆ ಲೋಕುರ, ಶೇಡಬಾಳ ಗ್ರಾಮದ ನೂರಾರು ರೈತ ಮುಖಂಡರು ಇದ್ದರು.  

ಶಿಕ್ಷಕ ಸಂಕಪಾಳ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ