ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸಿದ್ದೇಶ್ವರ ತೂಗು ಸೇತುವೆಯನ್ನು ಸಚಿವ ಆರ್.ಬಿ.ತಿಮ್ಮಾಪೂರ ಚಾಲನೆ
ಲೋಕದರ್ಶನ ವರದಿ,
ಜಮಖಂಡಿ4: ಸರ್ಕಾರದ ಸಹಾಯ ಕೇಳದೆ ರೈತರು ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರಲ್ನಿಂದ ತೇಲುವ ಸೇತುವೆ ನಿರ್ಮಿಸಿಕೊಂಡು ರಾಷ್ಟ್ರಕ್ಕೆ ಮಾದರಿಯಾಗಿ ಸರ್ಕಾರದ ಕಣ್ಣು ತೆರೆಸುವಂತೆ ಮಾಡಿದ್ದಾರೆ ಎಂದು ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ತಾಲ್ಲೂಕಿನ ಕಂಕಣವಾಡಿ ಗ್ರಾಮದ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸಿದ್ದೇಶ್ವರ ತೂಗು ಸೇತುವೆ ಉದ್ಘಾಟಿಸಿದರು.
ಗುಹೇಶ್ವರ ದೇವಸ್ಥಾನದಲ್ಲಿ ಮಾತನಾಡಿ ಅವರು, ಇಲ್ಲಿನ ರೈತರು ಪ್ರತಿದಿನ ನದಿದಾಟಿ ಹೋಗಲು, ಕೃಷಿ ಬೆಳೆಗಳನ್ನು ಸಾಗಿಸಲು ತೊಂದರೆಯಾಗುತ್ತಿರುವದನ್ನು ಗಮನಿಸಿ ರೈತರು ವಂತಿಗೆ ಹಣ ಸಂಗ್ರಹಿಸಿ ಮಾಡಿರುವದು ಶ್ಲಾಘನೀಯ ಎಂದರು.
ಹಲವಾರು ವರ್ಷಗಳಿಂದ ಶಾಶ್ವತ ಸೇತುವೆ ನಿರ್ಮಿಸುವಂತೆ ಬೇಡಿಕೆ ಇದೆ, ಆದರೆ ಮುಳುಗಡೆ ಪ್ರದೇಶವಿರುವದರಿಂದ ಆಗಿಲ್ಲ, ಇದನ್ನು ಸಿಎಂ ಸಿದ್ದರಾಮಯ್ಯ ಅವರ ಮನವಲಿಸಿ ಸೇತುವೆ ನಿರ್ಮಿಸುವ ಕೆಲಸ ಮಾಡಲು ಪ್ರಯತ್ನಿಸುವದಾಗಿ ತಿಳಿಸಿದರು.
ಬರಗಾಲ ಇರುವದರಿಂದ ಜನರು ಕಷ್ಟದಲ್ಲಿದ್ದಾರೆ, ಕೈಗೆ ಕೆಲಸವಿಲ್ಲ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ವರದಾನವಾಗಿವೆ, ವಿದ್ಯುತ್ ಸರಬರಾಜು ಮಾಡಲು ತೊಂದರೆಯಾಗಿತ್ತು, ಸಕ್ಕರೆ ಕಾರ್ಖಾನೆಯಿಂದ ಖರೀದಿಸಿ ರೈತರಿಗೆ ನೀಡಲಾಗುತ್ತಿದೆ, ರೈತರು ಯಾವ ಇಂಜನೀಯರ್ಗಿಂತ ಕಡಿಮೆ ಇಲ್ಲ, ಬರುವ ದಿನಗಳಲ್ಲಿ ಇದೊಂದು ಪ್ರೇಕ್ಷಣಿಯ ಸ್ಥಳವಾಗುತ್ತದೆ, ಪ್ರತಿನಿತ್ಯ ಸೇತುವೆ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು, ಪ್ರವಾಹ ಸಂದರ್ಭದಲ್ಲಿ ಜೀವಹಾನಿಯಾಗದಂತೆ ಎಚ್ಚರ ವಹಿಸಬೇಕು ಎಂದರು.
ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ನಡುಗಡ್ಡೆಯಲ್ಲಿ ಏಳುನೂರು ಎಕರೆ ಜಮೀನಿದ್ದು ಪ್ರತಿವರ್ಷ ಪ್ರವಾಹದಲ್ಲಿ ತೊಂದರೆಯಾಗುತ್ತದೆ, ಸರ್ಕಾರ ಭೂಮಿಯನ್ನು ಸ್ವಾಧಿನ ಪಡಿಸಿಕೊಂಡು ಯೋಗ್ಯದರ ನೀಡಿ ಸ್ಥಳಾಂತರಿಸುವ ಕಾರ್ಯ ಮಾಡಬೇಕು ಎಂದರು.
ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಜನಪ್ರತಿನಿಧಿಗಳ ಜವಾಬ್ದಾರಿಯನ್ನು ರೈತರು ಮಾಡಿ ಸರ್ಕಾರ ಮತ್ತು ಜನಪ್ರತಿನಿಧಿಗಳು ನಾಚುವಂತೆ ಮಾಡಿದ್ದಿರಿ, ರೈತರ ಜೀವನದ ಜೊತೆ ಸರ್ಕಾರ ಚಲ್ಲಾಟವಾಡಬಾರದು, ಪಕ್ಷಾತೀತವಾಗಿ ಈ ಭಾಗದ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಗಮನ ಸೆಳೆದು ಶಾಸ್ವತ ಸೇತುವೆ ನಿರ್ಮಿಸುವಲ್ಲಿ ಒತ್ತಾಯಿಸಲಾಗುವುದು ಇದರ ಬಗ್ಗೆ ಸದನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಸೇತುವೆ ನಿರ್ಮಿಸಲು 12 ಕೋಟಿ ಯೋಜನೆ ರೂಪಿಸಲಾಗಿತ್ತು ಆದರೆ ಟೆಕ್ನಿಕಲ್ ಸಮೀತಿಯವರು ಅನುಮತಿ ನೀಡದೆ ಹಿನ್ನಲೆ ನೆನೆಗುದಿಗೆ ಬಿದ್ದಿದೆ. ಆದರೂ ಸಿಎಂ ಸಿದ್ದರಾಮಯ್ಯನವರಿಗೆ ಮನವರಿಕೆ ಮಾಡಿ ಶಾಸ್ವತ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ತಿಳಿಸಿದರು.
ಓಲೇಮಠದ ಡಾ.ಚನ್ನಬಸವ ಸ್ವಾಮೀಜಿ, ಸಂಸದ ಪಿ.ಸಿ.ಗದ್ದಿಗೌಡರ, ಉದ್ಯಮಿ ಸಂಗಮೇಶ ನಿರಾಣಿ ಮಾತನಾಡಿದರು. ವೇದಿಕೆಯಲ್ಲಿ ವಿಪ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ಏಗಪ್ಪ ಸವದಿ, ಅರುಣಕುಮಾರ ಶಹಾ, ಮುತ್ತಣ್ಣ ಹಿಪ್ಪರಗಿ, ನಿಖಿಲ ಮಹಾಬಳಶೆಟ್ಟಿ, ಅಶೋಕ ಕಿವಡಿ, ಎಸಿ ಸಂತೋಷ ಕಾಮಗೌಡ, ತಾಪಂ ಇಓ ಸಂಜು ಜುನ್ನುರ ಇದ್ದರು. ಈಶ್ವರ ಆದೆಪ್ಪನವರ ಸ್ವಾಗತಿಸಿದರು. ಸಂಗಮೇಶ ಗಾಣಿಗೇರ, ರುದ್ರಗೌಡ ಪಾಟೀಲ ನಿರೂಪಿಸಿದರು, ವಕೀಲ ಕಾಡಯ್ಯ ಹಿರೇಮಠ ವಂದಿಸಿದರು.