ಕಾಗವಾಡ

ಐನಾಪುರ ಪಪಂಗೆ ಸಚಿವ ಶ್ರೀಮಂತ ಪಾಟೀಲ ಭೇಟಿ

ಐನಾಪುರ ಪಪಂಗೆ ಸಚಿವ ಶ್ರೀಮಂತ ಪಾಟೀಲ ಭೇಟಿ

ಕಾಗವಾಡ 20: ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಖಾತೆ ಸಚಿವರಾದ ಶ್ರೀಮಂತ ಪಾಟೀಲರು ಇಂದು ಆಕಸ್ಮಿಕವಾಗಿ ಐನಾಪುರ ಪಟ್ಟಣ ಪಂಚಾಯತಿಗೆ ಭೇಟಿ ನೀಡಿ ಪಟ್ಟಣ ಪಂಚಾಯತ್ ಕಟ್ಟಡ, ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.

ಪಟ್ಟಣ ಪಂಚಾಯತ್ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ ಸಚಿವ ಶ್ರೀಮಂತ ಪಾಟೀಲರಿಗೆ ಮಾಹಿತಿ ನೀಡುತ್ತಾ, ಐನಾಪುರ ಪಟ್ಟಣ ಒಂದು ಸಿರಿವಂತಿಕೆಯ ಊರು, ಇಲ್ಲಿ ಬಹಳಷ್ಟು ಜನರು ಶ್ರೀಮಂತರಿದ್ದಾರೆ. ಆದರೆ ಅಭಿವೃದ್ಧಿಯ ದೃಷ್ಟಿಯಿಂದ ಬಡವಾಗಿದೆ. ಅದಕ್ಕಾಗಿ ರಾಜ್ಯದಲ್ಲಿಯೇ ಮಾದರಿ ಪಟ್ಟಣ ಪಂಚಾಯತಿಯನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದೇವೆ. ಆದ್ದರಿಂದ ತಾವು ಹೆಚ್ಚಿನ ಮುತುವರ್ಜಿವಹಿಸಿ ಪಟ್ಟಣದ ಸರ್ವತೋಮುಖ ಅಭಿವೃದ್ದೀಯ ದೃಷ್ಟಿಯಿಂದ ನಮ್ಮ ಪಟ್ಟಣ ಪಂಚಾಯತಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿಕೊಂಡರು.

ಆಗ ಸಚಿವ ಶ್ರೀಮಂತ ಪಾಟೀಲರು ಪ್ರತಿಕೃಯಿಸಿ ಶಿರಗುಪ್ಪಿ ಗ್ರಾಮ ಪಂಚಾಯತಿ ರಾಜ್ಯದಲ್ಲಿಯೇ ಮಾದರಿ ಗ್ರಾಮ ಪಂಚಾಯತಿ ಎಂದು ಹೆಸರುವಾಸಿಯಾಗಿದೆ. ನನ್ನ ಉದ್ದೇಶವೂ ಅದೇ ಆಗಿದೆ. ರಾಜ್ಯ ಹಾಗೂ ದೇಶದಲ್ಲಿ ನಮ್ಮದೆ ಸರಕಾರವಿದೆ. ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ 23 ಗ್ರಾಮ ಪಂಚಾಯತಿಗಳು ಐನಾಪುರ, ಶೇಡಬಾಳ,ಕಾಗವಾಡ ಮುರು ಪಟ್ಟಣ ಪಂಚಾಯತಿಗಳು ಹಾಗೂ ಉಗಾರ ಪುರಸಭೆ ಬರುತ್ತದೆ. ಅವೆಲ್ಲವುಗಳನ್ನು ರಾಜ್ಯದಲ್ಲಿಯೇ ಮಾದರಿ ಮಾಡುವ ಸಂಕಲ್ಪ ಹೊಂದಿದ್ದೇನೆ ಎಂದರು.

ಈಗಾಗಲೇ ಐನಾಪುರ ಪಟ್ಟಣ ಪಂಚಾಯತಿಗೆ ನಗರೋತ್ಥಾನದಲ್ಲಿ ಸಾಕಷ್ಟು ಅನುದಾನವನ್ನು ನೀಡಲಾಗಿದೆ. ಅಲ್ಲದೆ ವಾರ್ಡ ನಂ 9, 10, 11, 12 15, 16, 17 ಹಾಗೂ 18ನೇ ವಾರ್ಡುಗಳಲ್ಲಿ ಕೊಳಗೇರಿ ಅಭಿವೃದ್ದಿ ನಿಗಮದಡಿಯಲ್ಲಿ ಸೇರಿಸಲಾಗಿದ್ದು ಮೂಲಭೂತ ಸೌಲಭ್ಯಗಳಾದ ಆಶ್ರಯ ಮನೆಗಳು, ಚರಂಡಿ ನಿರ್ಮಾಣ, ಶೌಚಾಲಯ, ರಸ್ತೆ, ಶುದ್ದ ಕುಡಿಯುವ ನೀರು, ಬೀದಿದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಆಯೋಜನೆಯಡಿ ನಿರ್ಮಿಸಲಾಗುವುದೆಂದರು

ತಮ್ಮ ಮುಂದಾಲೋಚನೆ ಉತ್ತಮವಾಗಿದೆ, ಬರುವ ಕೆಲ ದಿನಗಳಲ್ಲಿ ಐನಾಪುರ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡಿಸಿ ಐನಾಪುರ ಪಟ್ಟಣ ಪಂಚಾಯತಿಯನ್ನು ರಾಜ್ಯದಲ್ಲಿಯೇ ಹೈಟೆಕ್ ಪಟ್ಟಣ ಪಂಚಾಯತಿ ಮಾಡಲು ಎಲ್ಲ ರೀತಿಯ ಅನುದಾನ ಕೊಡಿಸುತ್ತೇನೆಂದು ಸಚಿವ ಶ್ರೀಮಂತ ಪಾಟೀಲ ಭರವಸೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿಯವರಿಗೆ ನೀಡಿದರು.

ಉಪಾಧ್ಯಕ್ಷೆ ಗೀತಾ ಕೆಂಗಾರಿ, ಮುಖ್ಯಾಧಿಕಾರಿ ಎ.ಆರ್.ಕುಲಕರ್ಣಿ, ಇಂಜನೀಯರ ವಿ.ಎಂ.ನಾಗನಕೇರಿ ಮುಖಂಡರಾದ ದಾದಾ ಪಾಟೀಲ, ರಾಜೇಂದ್ರ ಪೋತದಾರ, ಉದಯ ನಿಡಗುಂದಿ, ಡಾ.ಮೋಹನರಾವ್ ಕಾರ್ಚಿ, ಅಣ್ಣಾಸಾಹೇಬ ಡೂಗನವರ, ಪ್ರಕಾಶ ಕೋರ್ಬು, ಸುನೀಲ ಮಾಳಿ, ಸದಸ್ಯರಾದ ರಾವ್‍ಬಹಾದ್ದೂರ ಕುಡಚಿ, ಅಜೀತ ಹಚ್ಚಿಬಟ್ಟಿ, ಸುನೀತಾ ಮಾಳಿ, ನೀಲಮ್ಮ ಡೂಗನವರ, ನಾಗಪ್ಪ ದೊಡಮನಿ, ಸೇರಿದಂತೆ ಅನೇಕರು ಇದ್ದರು.

ಸುದ್ದಿ ಓದಿ