ಸೆ.29 ರಂದು ಲೇಖಕರೊಂದಿಗೆ ಭೇಟಿ ಕಾರ್ಯಕ್ರಮ
ಧಾರವಾಡ 27: ನವ ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗದೊಂದಿಗೆ ಲೇಖಕರೊಂದಿಗೆ ಭೇಟಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 29, 2024 ರಂದು ಬೆಳಗ್ಗೆ 10 ಗಂಟೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಕನ್ನಡದ ಪ್ರಖ್ಯಾತ ಸಾಹಿತಿಗಳಾದ ಪ್ರೊ. ಮಾಲತಿ ಪಟ್ಟಣಶೆಟ್ಟಿಯವರು ತಮ್ಮ ಜೀವನ ಹಾಗೂ ಸಾಹಿತ್ಯ ಬರವಣಿಗೆ ಕುರಿತಂತೆ ವಿಚಾರಗಳನ್ನು ಹಂಚಿಕೊಂಡು ಸಾಹಿತ್ಯಾಸಕ್ತ ಸಭಿಕರೊಂದಿಗೆ ಸಂವಾದವನ್ನು ನಡೆಸಲಿದ್ದಾರೆ. 84ರ ವಯೋಮಾನದ ಹಿರಿಯ ಸಾಹಿತಿಗಳಾದ ಪ್ರೊ.ಮಾಲತಿ ಪಟ್ಟಣಶೆಟ್ಟಿಯವರು ಕವನ ಸಂಕಲನ, ಕಥಾ ಸಂಕಲನ, ವಿಮರ್ಶೆ, ವ್ಯಕ್ತಿಚಿತ್ರ, ಮಕ್ಕಳ ಸಾಹಿತ್ಯ, ಪ್ರಬಂಧ, ಸಂಪಾದನೆಯೂ ಸೇರಿದಂತೆ 25ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಭಾವಗೀತೆಯ ಓ ನನ್ನ ಪ್ರಥಮ ಪ್ರೀತಿಯೇ ಸಿ.ಡಿ.ಯನ್ನು ಹೊರತಂದಿದ್ದು, ಅವರ ಭಾವಗೀತೆಗಳು ಜನಪ್ರಿಯವಾಗಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯೂ ಸೇರಿದಂತೆ, ಗೋರೂರು ಪ್ರಶಸ್ತಿ, ಇನ್ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಪ್ರಶಸ್ತಿ, ಅನುಪಮ ಪ್ರಶಸ್ತಿ, ಗಂಗಾದೇವಿ ಸಿಂಧೂರ ಪ್ರಶಸ್ತಿ, ಡಿ.ಎಸ್.ಕರ್ಕಿ ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ-ಪುರಸ್ಕಾರಗಳನ್ನು ಲಭಿಸಿವೆ.
ಸಂಗೀತ ಕಲಾವಿದೆ ಸುಜಾತಾ ಗುರವ ಕಮ್ಮಾರ ಅವರು ಮಾಲತಿ ಪಟ್ಟಣಶೆಟ್ಟಿ ವಿರಚಿತ ಭಾವಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯ ಚನ್ನಪ್ಪ ಅಂಗಡಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.