ಧಾರವಾಡ - ಹುಬ್ಬಳ್ಳಿ

ಕೇಂದ್ರ ಸಾಹಿತ್ಯ ಅಕಾದೆಮಿ, ಹೊಸದಿಲ್ಲಿ ಮತ್ತು ಕರ್ನಾಟಕ ವಿದ್ಯಾವರ್ಧಕ ಲೇಖಕರೊಂದಿಗೆ ಭೇಟಿ

ಕೇಂದ್ರ ಸಾಹಿತ್ಯ ಅಕಾದೆಮಿ, ಹೊಸದಿಲ್ಲಿ ಮತ್ತು ಕರ್ನಾಟಕ ವಿದ್ಯಾವರ್ಧಕ ಲೇಖಕರೊಂದಿಗೆ ಭೇಟಿ

ಧಾರವಾಡ 30: ಕನ್ನಡದ ಸುಪ್ರಸಿದ್ಧ ಬರಹಗಾರರಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರಿಂದ ಲೇಖಕರೊಂದಿಗೆ ಭೇಟಿ ಕಾರ್ಯಕ್ರಮ ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ಸಭಿಕರನ್ನು ಸೆರೆಹಿಡಿಯುವಲ್ಲಿ ಸಂಪೂರ್ಣ ಯಶಸ್ವಿಯಾಯಿತು. ತಮ್ಮ ಬದುಕು ಬರಹವನ್ನು ಮುಕ್ತಕಂಠದಿಂದ ಹಂಚಿಕೊಂಡ ಮಾಲತಿಯವರು ತಮ್ಮ ಬರವಣಿಗೆಯ ಮೂಲ ಪ್ರೇರಣೆ ಬದುಕಿನ ವಿದ್ಯಮಾನಗಳೇ ಆಗಿವೆ. ತಮ್ಮ ಬದುಕುತೆರೆದಿಟ್ಟ ಪುಸ್ತಕದಂತಿದ್ದು, ನನ್ನ ಕಷ್ಟಗಳು ಮತ್ತು ಕಾಲಕಾಲಕ್ಕೆ ಎದುರಾದ ಸವಾಲುಗಳು ನನ್ನನ್ನು ಈ ಮಟ್ಟಕ್ಕೆ ರೂಪಿಸಿವೆ. ಜೀವನದಲ್ಲಿ ಎದುರಾದ ಮೂರು ಸಾವುಗಳು ನನಗೆ ತೀವ್ರ ಆಘಾತವನ್ನು ತಂದಿಟ್ಟವು. ಮೂರನೇ ವಯಸ್ಸಿನಲ್ಲಿ ತಾಯಿ, ನಂತರಅಜ್ಜಿ ಮತ್ತುತಾಯಿಗೆ ಸಮನಾಗಿದ್ದ ಅಕ್ಕ ಸುಲೋಚನಾ ಕೋಟೂರ. ತಾಯಿಯ ಪ್ರೀತಿಯನ್ನು ಕಾಣದ ನನಗೆ ಅಜ್ಜಿ ಬಾಲ್ಯದಲ್ಲಿ ಪೊರೆದರೆ ನಂತರದ ಜೀವನ ಪಯಣದಲ್ಲಿ ಅಕ್ಕ ನನ್ನ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಕಟ್ಟಿಕೊಟ್ಟರು. ಆ ಕಾಲದಲ್ಲಿ ಮಹಿಳೆಯರು ಶಿಕ್ಷಣ ಪಡೆಯುವುದು ಅತ್ಯಂತ ಸವಾಲಿನ ಸಂಗತಿಯಾಗಿತ್ತು. ಪ್ರಾಥಮಿಕ ಶಿಕ್ಷಣದಲ್ಲಿ ಪ್ರತಿಭಾವಂತೆಯಾಗಿದ್ದ ನಾನು ಬಡತನದ ಕಾರಣಕ್ಕಾಗಿ ಬಹಳಷ್ಟು ನಲುಗಬೇಕಾಯಿತು. ಆದರೆ ನನ್ನಅಜ್ಜಿ ಬೆಂಗಾವಲಾಗಿ ನಿಂತಿದ್ದಲ್ಲದೇ ಹೆಣ್ಣುಮಕ್ಕಳಿಗೆ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆ ಎಷ್ಟು ಮಹತ್ವದ್ದು ಎಂದು ತಿಳಿಸಿಕೊಟ್ಟರು. ನನ್ನ ಬದುಕಿನಲ್ಲಿ ಆಲದ ಮರದಂತಿದ್ದ ನನ್ನ ಅಕ್ಕ ಬದುಕಿನಲ್ಲಿ ಎದುರಾಗುವ ಅನ್ಯಾಯ, ಮೋಸ, ವಂಚನೆಗಳನ್ನು ಧೈರ್ಯದಿಂದ ಎದುರಿಸುತ್ತ ನಮ್ಮನಮ್ಮ ಬದುಕಿನ ಗುರಿಯತ್ತ ಸಾಗಬೇಕೆಂದು ಹೇಳುತ್ತಿದ್ದರು. ನಮಗೆ ಕಿರುಕುಳ ನೀಡಿದವರ ಮೇಲೆ ದ್ವೇಷ ಸಾಧಿಸಿ ಸೇಡು ತೀರಿಸಿಕೊಳ್ಳುವ ಮನೋಧರ್ಮ ಒಳ್ಳೆಯದಲ್ಲವೆಂದು ಸ್ಪಷ್ಟವಾಗಿ ತಿಳಿಸಿಕೊಟ್ಟರು. ಅಕ್ಕ ನನ್ನ ಬದುಕನ್ನು ಕಟ್ಟುವಲ್ಲಿ ಮಹತ್ವದ ಪಾತ್ರವನ್ನು ವಹಿಸಿ ಇವತ್ತಿನ ನನ್ನ ಸ್ಥಿತಿಗೆ ಕಾರಣಕರ್ತರಾಗಿದ್ದಾರೆ. ಅವರ ಸಲಹೆ ಸೂಚನೆಗಳನ್ನು ನಿಷ್ಠೆಯಿಂದ ಪಾಲಿಸಿ ನನ್ನ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಬೆಳೆಸಿ ಸಮಾಜಕ್ಕೆ ನೀಡಿದತೃಪ್ತಿ ನನಗಿದೆ ಎಂದು ತಮ್ಮ ಜೀವನದ ಎಲ್ಲ ಅನುಭವಗಳನ್ನು ಮುಚ್ಚು ಮರೆಯಿಲ್ಲದೆ ಎಳೆ ಎಳೆಯಾಗಿ ಬಿಚ್ಚಿಟ್ಟು ನೆರೆದ ಸಭಿಕರ ಮನಸ್ಸನ್ನು ತಟ್ಟಿದರು.  

ಲೇಖಕರು ತಮ್ಮ ಅನುಭವವನ್ನು ಹರಳುಗಟ್ಟಿಸಿಕೊಂಡು ಭಾಷೆಯ ಮೇಲೆ ಹಿಡಿತ ಸಾಧಿಸಿ ಬರವಣಿಗೆ ಮಾಡಬೇಕು. ಬರಹಗಾರನಿಗೆ ಅದರಲ್ಲೂ ವಿಶೇಷವಾಗಿ ಉದಯೋನ್ಮುಖ ಹೊಸತಲೆಮಾರಿನ ಲೇಖಕರು ಹೆಚ್ಚು ಹೆಚ್ಚು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ತಮ್ಮ ಬರವಣೆಗೆಯ ಹಿಂದೆ ಬದುಕಿನಲ್ಲಿ ಎದುರಾದ ಸಂಕಟಗಳ ಸರಮಾಲೆಯೇ ಅನಾವರಣ ಗೊಂಡಿದೆ. ಹಾಗೆಂದ ಮಾತ್ರಕ್ಕೆ ನಾವು ನಿರಾಶಾವಾದಿಗಳು ಆಗಬೇಕಾಗಿಲ್ಲ. ನಡೆದುಹೋದ ಘಟನೆಗಳಿಗೆ ಪಶ್ಚಾತಾಪ ಪಡುತ್ತ ಕುಳಿತುಕೊಂಡರೆ ಬದುಕು ಮತ್ತಷ್ಟು ದುಸ್ತರ ವಾಗುತ್ತದೆ. ಯುವಜನಾಂಗದವರು ಬದುಕಿನ ಉತ್ಸಾಹವನ್ನು ಕಳೆದುಕೊಳ್ಳದೆ ಸ್ವಸ್ಥ ಜೀವನವನ್ನು ನಡೆಸಲು ಮುಂದಾಗಬೇಕು. ಆರೋಗ್ಯಕರ ಮನಸ್ಸಿನಿಂದ ಮಾತ್ರ ಆರೋಗ್ಯಕರ ಸಾಹಿತ್ಯ ಬರಲು ಸಾಧ್ಯವಾಗುತ್ತದೆ. ಆತ್ಮಕಥೆ ಬರೆಯುವ ಯೋಚನೆ ಬಂದರೂ ಕೂಡ ಆ ಪ್ರಾಕಾರದ ಪ್ರಾಮಾಣಿಕ ನಡೆಯ ಬಗ್ಗೆ ತಮಗೆ ಅನುಮಾನವಿರುವುದರಿಂದ ಕೆಲವು ನೆನಪುಗಳನ್ನು ಮಾತ್ರ ದಾಖಲಿಸಲು ಇಚ್ಛಿಸುವುದಾಗಿ ಹೇಳಿದರು. ಕಾವ್ಯ, ಕಥೆ, ಪ್ರಬಂಧ, ವಿಮರ್ಶೆ, ಸಂಪಾದನೆ, ಮಕ್ಕಳ ಸಾಹಿತ್ಯ ಎಲ್ಲ ಕ್ಷೇತ್ರದಲ್ಲೂ ಆಸಕ್ತಿ ಇದ್ದು ತಮ್ಮ ಇದುವರೆಗಿನ ಬರವಣಿಗೆಗೆ ಉತ್ತಮ ಮನ್ನಣೆ ಮತ್ತು ಸ್ಪಂದನೆಎರಡೂ ಸಿಕ್ಕಿದ್ದು, ವಿಮರ್ಶೆಯ ಬಗ್ಗೆ ತಮ್ಮಲ್ಲಿ ತೃಪ್ತಿ ಇಲ್ಲವೆಂದರು. 

ಸಭಿಕರು ಸರಣಿರೂಪದಲ್ಲಿ ಕೇಳಿದ ಎಲ್ಲ ಪ್ರಶ್ನೆಗಳಿಗೂ ಸಮಾಧಾನದಿಂದ ಉತ್ತರಿಸಿದ ಪ್ರೊ. ಮಾಲತಿ ಪಟ್ಟಣ ಶೆಟ್ಟಿಯವರು ತಮ್ಮ ಬದುಕು ಬರಹ ಕುರಿತಾದ ಹಿನ್ನೆಲೆಗಳನ್ನು ಹಂಚಿಕೊಂಡರು. ಸಂವಾದದಲ್ಲಿ ವೆಂಕಟೇಶ ಮಾಚಕನೂರ, ಸತೀಶಕುಲಕರ್ಣಿ, ರಾಜೇಶ್ವರಿ ಮಹೇಶ್ವರಯ್ಯ, ಡಿ. ಎಂ. ಹಿರೇಮಠ, ಶ್ರೀನಿವಾಸ ವಾಡಪ್ಪಿ, ಸರಸ್ವತಿ ಭೋಸಲೆ, ಶಕುಂತಲಾ ಸಿಂಧೂರ, ಅಶೋಕ ಶೆಟ್ಟರ, ಅರವಿಂದ ಯಾಳಗಿ, ಆರ್‌. ಈ ತಿಮ್ಮಾಪುರ, ಪಾರ್ವತಿ ಹಾಲಭಾವಿ, ಬಾಳಣ್ಣ ಶೀಗಿಹಳ್ಳಿ, ಸುನಂದಾಕಡಮೆ, ವಿಶ್ವೇಶ್ವರಿ ಹಿರೇಮಠ ಮುಂತಾದವರು ಸಕ್ರೀಯವಾಗಿ ಸಂವಾದದಲ್ಲಿ ಪಾಲ್ಗೊಂಡರು.  

ಆರಂಭದಲ್ಲಿ ಕೇಂದ್ರ ಸಾಹಿತ್ಯ ಅಕಾದೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯರಾದ ಚನ್ನಪ್ಪ ಅಂಗಡಿಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ರೂಪು ರೇಶೆಯನ್ನು ವಿವರಿಸಿದರು. ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಮಾಲತಿ ಪಟ್ಟಣಶೆಟ್ಟಿಯವರ ವ್ಯಕ್ತಿತ್ವಕುರಿತಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ನರಸಿಂಹ ಪರಾಂಜಪೆ, ಆನಂದ ಪಾಟೀಲ, ಶಿವಶಂಕರ ಹಿರೇಮಠ, ಸದಾಶಿವ ಮರ್ಜಿ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿ ಸುಜಾತಾಗುರವ ಅವರು ಮಾಲತಿ ಪಟ್ಟಣಶೆಟ್ಟಿಯವರ ಭಾವಗೀತೆಗಳನ್ನು ಪ್ರಸ್ತುತಪಡಿಸಿದರು. ಸಾಹಿತ್ಯ ಅಕಾದೆಮಿಗಾಗಿ ಮಾಲತಿ ಪಟ್ಟಣ ಶೆಟ್ಟರ ಉಲ್ಲೇಖ ಪತ್ರ ತಯಾರಿಸಿದ ಶ್ಯಾಮಲಾ ರತ್ನಾಕರವರು ಸಭೆಯಲ್ಲಿ ಅದನ್ನು ವಾಚಿಸಿದರು. 


ಸುದ್ದಿ ಓದಿ