ಬೈಲಹೊಂಗಲ

ಪ್ರಭುನೀಲಕಂಠ ಸ್ವಾಮೀಜಿಗೆ ಅಧಿಕಾರ ಹಸ್ತಾಂತರಕ್ಕೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಪ್ರಭುನೀಲಕಂಠ ಸ್ವಾಮೀಜಿಗೆ ಅಧಿಕಾರ ಹಸ್ತಾಂತರಕ್ಕೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಭುಗಿಲೆದ್ದ ಜನಾಕ್ರೋಶ: ಬೃಹತ್ ಮೆರವಣಿಗೆ: ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಗ್ಗಟ್ಟು ಬಂದ್ 

ಬೈಲಹೊಂಗಲ 17: ಶಾಖಾ ಮೂರುಸಾವಿರಮಠದ ಪೀಠಾಧಿಕಾರಿಗಳಾಗಿದ್ದ ಲಿಂ., ಗಂಗಾಧರ ಮಹಾಸ್ವಾಮೀಜಿ ಅವರು ಸಂಸ್ಥಾಪಿಸಿದ್ದ ನೀಲಕಂಠೇಶ್ವರ ವಿದ್ಯಾವರ್ಧಕ ಸಂಸ್ಥೆಯ ಸರ್ವಾಧಿಕಾರವನ್ನು ಈಗಿನ ಪೀಠಾಧಿಕಾರಿ ಪ್ರಭುನೀಲಕಂಠ ಸ್ವಾಮೀಜಿ ಅವರಿಗೆ ನೀಡಲು ಒತ್ತಾಯಿಸಿ, ನಾಡಿನ ಭಕ್ತರು ಬುಧವಾರ ಬೃಹತ್ ಪ್ರತಿಭಟನೆೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಸಂಸ್ಥೆಯ ಅಧಿಕಾರ ಹಸ್ತಾಂತರ ಪ್ರಕರಣ ಜನಾಕ್ರೋಶವನ್ನು ತಲುಪಿದ್ದು, ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಸಿ.ಎಸ್‌. ಸಾಧುನವರ ಶ್ರೀಗಳು ಸ್ಥಾಪಿಸಿದ ಸಂಸ್ಥೆಯನ್ನು ಬಿಟ್ಟುಕೊಡಲು ಹಿಂದೇಟು ಹಾಕುತ್ತಿರುವದು ನಾಡಿನ ಪೂಜ್ಯರ ಹಾಗೂ ಭಕ್ತವೃಂದದ ಕೆಂಗೆಣ್ಣೆಗೆ ಗುರಿಯಾಗಿದೆ. ದಿನವೊಂದಕ್ಕೆ ಈ ಪ್ರಕರಣ ಉಗ್ರರೂಪ ತಾಳುತ್ತಿರುವ ಲಕ್ಷಣಗಳು ಇಂದಿನ ಪ್ರತಿಭಟನೆೆಯಲ್ಲಿ ಗೋಚರಿಸಿದವು.  

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮುರಗೋಡ ನೀಲಕಂಠ ಸ್ವಾಮೀಜಿ ಮಾತನಾಡಿ, ಪ್ರಭುನೀಲಕಂಠ ಶ್ರೀಗಳಿಗೆ ಅಧಿಕಾರ ಹಸ್ತಾಂತರಿಸುವದು ಎಲ್ಲ ಭಕ್ತರ ಇಚ್ಛೆಯಾಗಿದೆ. ಜನಾಭಿಪ್ರಾಯದ ಮುಂದೆ ಅಧಿಕಾರ ದೊಡ್ಡದಲ್ಲ. ಇದು ಜಂಗಮರ ಆಸ್ತಿಯಾಗಿದ್ದು, ಜಂಗಮರನ್ನು ಕಡೆಗಣಿಸಿದರೆ ಜಂಗಮ ಅಸ್ತ್ರ ಅಂತವರನ್ನು ನಾಶಪಡಿಸದೆ ಬಿಡದು ಎಂದು ಎಚ್ಚರಿಸಿದರು.  

ಹೊಸೂರ ಗುರು ಮಡಿವಾಳೇಶ್ವರ ಮಠದ ಗಂಗಾಧರ ಸ್ವಾಮೀಜಿ ಮಾತನಾಡಿ, ಭಕ್ತರ ಆಸ್ತಿಯನ್ನು ಶ್ರೀಮಠದ ಸ್ವಾಮೀಜಿ ಅವರಿಗೆ ಬಿಟ್ಟುಕೊಡುವದು ನ್ಯಾಯಸಮ್ಮತವಾಗಿದೆ. ಇದೇ ರೀತಿ ಭಕ್ತರ ನಿರ್ಧಾರಕ್ಕೆ ನಿರ್ಲಕ್ಷ ಮುಂದುವರೆಸಿದರೆ, ಸಿ.ಎಸ್‌. ಸಾಧುನವರ ಅವರ ಮನೆಯ ಮುಂದೆ ಧರಣಿಯ ಮೂಲಕ ಉಗ್ರ ರೂಪದ ಹೋರಾಟದ ರೂಪರೇಷೆ ಹಮ್ಮಿಕೊಳ್ಳಲಾಗುವದು ಎಂದರು. 

ಬುಡರಕಟ್ಟಿಯ ಮೃತ್ಯುಂಜಯ ಸ್ವಾಮೀಜಿ, ಮಾನ್ವಿಹಿಪ್ಪರಗಿಯ ಅಭಿನವಶಿವಲಿಂಗ ಸ್ವಾಮೀಜಿ, ಬಳಗಾನೂರ ಹಳೆಕೋಟೆಯ ಸಿದ್ಧಬಸವ ಸ್ವಾಮೀಜಿ, ಚಿಕ್ಕಲಪರರ್ವಿ ಅನ್ನದಾನೇಶ್ವರ ದೇವರು, ದುರ್ಗಾದೇವಿ ಆರಾಧಕ ಡಾ. ಮಹಾಂತಯ್ಯ ಶಾಸ್ತ್ರೀ ಆರಾದ್ರಿಮಠ, ಭಗಳಾಂಬಾದೇವಿ ದೇವಸ್ಥಾನದ ವೀರಯ್ಯ ಸ್ವಾಮೀಜಿ, ಸಿದ್ಧರಾಮ ಶಾಸ್ತ್ರೀ ಮಾತನಾಡಿ, ಶ್ರೀಗಳಿಗೆ ಅಧಿಕಾರ ಹಸ್ತಾಂತರ ಮಾಡಿ, ಶ್ರೀಮಠದ, ಸಂಸ್ಥೆಯ ಅಭಿವೃದ್ದಿಗೆ  ಮುಂದಾಗುವದು ಸೂಕ್ತ ಎಂದರು. 

ಹೋರಾಟದ ನೇತೃತ್ವ ವಹಿಸಿದ್ದ ಶಿವರಂಜನ ಬೊಳನ್ನವರ ಮಾತನಾಡಿ, ನಾಡಿನ ಹಿತದೃಷ್ಠಿಯಿಂದ ಶ್ರೀಗಳಿಗೆ ಅಧಿಕಾರ ಹಸ್ತಾಂತರಿಸುವದು ಭಕ್ತರ ಇಚ್ಛೆಯಾಗಿದೆ. ಇದಕ್ಕೆ ಸ್ಪಂದಿಸದವರ ವಿರುದ್ಧ ಶ್ರೀಗಳು ನೀಡುವ ಮಾರ್ಗದರ್ಶನದಲ್ಲಿ ಹೋರಾಟಕ್ಕೆ ಸಿದ್ದ ಎಂದರು. 

ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ಶಾಸಕರು, ಮಾಜಿ ಶಾಸಕರುಗಳು ಶ್ರೀಮಠದ ಹಾಗೂ ಸಂಸ್ಥೆಯ ಹೋರಾಟದಲ್ಲಿ ಮುಂಚೂಣಿಯಾಗಿ ನಿಲ್ಲಬೇಕೆಂದು ಒತ್ತಾಯಿಸಿದರು. 

ಮಹಾಂತೇಶ ತುರಮರಿ, ರುದ್ರ​‍್ಪ ಹೊಸಮನಿ, ಪ್ರೋ.ಸೋಮನಿಂಗ ಮೆಳ್ಳಿಕೇರಿ, ಮುಸ್ಲಿಂ ಸಮಾಜದ ಮುಖಂಡ ಜೆ.ಡಿ. ಬಾಗವಾನ ಮಾತನಾಡಿದರು. 

ಶಾಖಾಮೂರುಸಾವಿರ ಮಠದಿಂದ ಪ್ರಮುಖ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಗ್ಗಟ್ಟುಗಳನ್ನು ಬಂದ ಮಾಡಿ ಶ್ರೀಗಳಿಗೆ ಬೆಂಬಲ ಸೂಚಿಸಿದರು. ಶ್ರೀಗಳ ನೇತೃತ್ವದಲ್ಲಿ ಉಪವಿಭಾಗಾಧಿಕಾರಿ ಶಶಿಧರ ಬಗಲಿ ಅವರಿಗೆ ಮನವಿ ಸಲ್ಲಿಸಲಾಯಿತು. 

ಮೆರವಣಿಗೆಯಲ್ಲಿ ಪುರಸಭೆ ಅಧ್ಯಕ್ಷ ಬಾಬು ಕುಡಸೋಮಣ್ಣವರ, ಬಸವಪ್ರಭು ಬೆಳಗಾವಿ, ವೀರನಗೌಡ ಸಂಗಣ್ಣವರ, ಮಹ್ಮದಸಾಹೇಬ ನದಾಫ, ಗದಿಗೆಪ್ಪ ಉಳ್ಳೆಗಡ್ಡಿ, ಮಡಿವಾಳಪ್ಪ ಹೋಟಿ, ಬಸವರಾಜ ಜನ್ಮಟ್ಟಿ, ಈಶ್ವರ ಉಳ್ಳೆಗಡ್ಡಿ, ಪ್ರಮೋದಕುಮಾರ ವಕ್ಕುಂದಮಠ, ಈಶ್ವರ ಕೊಪ್ಪದ, ಮಹಾಂತೇಶ ಮತ್ತಿಕೊಪ್ಪ, ಮಹಾಂತೇಶ ಅಕ್ಕಿ, ಈರಣ್ಣ ಬೆಟಗೇರಿ, ರಾಮನಗೌಡ ಪಾಟೀಲ, ಬಾಬುಸಾಬ ಸುತಗಟ್ಟಿ,  ತಿಪ್ಪಣ್ಣ ಬಿಳ್ಳೂರ, ಮಹಾಂತೇಶ ಮೆಟಗುಡ್ಡ, ಸಂಜೀವಗೌಡ ಪಾಟೀಲ, ಶಿವಬಸಪ್ಪ ತುರಮರಿ, ಸುಭಾಷ ತುರಮರಿ, ಮುರಗೇಶ ಗುಂಡ್ಲೂರ, ಮಂಜುನಾಥ ಊಳವಿ, ಈರ​‍್ಪ ಹರಕುಣಿ, ಅಕ್ಬರ ತಾಳಿಕೊಟಿ ಅಲ್ಲದೆ ಹೊಸೂರ, ತಿಗಡಿ, ಸಂಪಗಾಂವ, ಬುಡರಕಟ್ಟಿ, ವಕ್ಕುಂದ, ದೇವಲಾಪೂರ, ಚಿವಟಗುಂಡಿ ಗ್ರಾಮಗಳ ಭಕ್ತರು, ಮುಸ್ಲಿಂ ಸಮಾಜ ಮುಖಂಡರು ಸೇರಿದಂತೆ ವಿವಿದ ಸಂಘಟಣೆಗಳು ಭಾಗವಹಿಸಿದ್ದರು. 

ಪ್ರಭುನೀಲಕಂಠ ಸ್ವಾಮೀಜಿ ಮಾತನಾಡಿ, ನನಗೆ ಅಧಿಕಾರ ಆಸೆ ಇಲ್ಲ. ಲಿಂ., ಗಂಗಾಧರ ಶ್ರೀಗಳು ಸ್ಥಾಪಿಸಿದ ಸಂಸ್ಥೆಗಳು ಒಂದೊಂದಾಗಿ ಮುಚ್ಚಲ್ಪಡುತ್ತಿವೆ ಅಲ್ಲದೆ ಕೆಲವು ಸಂಸ್ಥೆಗಳನ್ನು ಬೇರೆಯವರಿಗೆ ನಡೆಸಲು ಪರಭಾರೆ ಮಾಡುತ್ತಿರುವದರಿಂದ ಮನಸ್ಸಿಗೆ ನೂವಾಗಿದೆ. ಈ ನೋವಿನಿಂದ ನಾನು ಮಠ ಬಿಟ್ಟು ಹೋಗಲೆ? ನಾನು ಇದ್ದು ಇಲ್ಲದಂತಾಗಿದೆ. ಸಂಸ್ಥೆಗಳನ್ನು ಅಭಿವೃದ್ದಿಪಡಿಸಿ, ಸಮಾಜಕ್ಕೆ ಕೊಡುಗೆ ನೀಡಿ, ಜೀವನ ಸಾರ್ಥಕಪಡಿಸಿಕೊಳ್ಳುವ ಅಭಿಲಾಷೆ ನನ್ನದಾಗಿದೆ ಎಂದು ಭಾವುಕರಾಗಿ ಕಣೀರಿಟ್ಟರು!! 

ಪ್ರತಿಭಟಣಾ ಮೆರವಣಿಗೆ ನಡೆದಾಗ ಆಕ್ರೋಶಗೊಂಡ ಪ್ರತಿಭಟಣಾಕಾರರು ಸಂಗೊಳ್ಳಿ ರಾಯಣ್ಣ ವೃತ್ತದ ರಾ​‍್ಯಲಿ ಬದಲಾಯಿಸಿ, ಸಂಸ್ಥೆಯ ಕಾರ್ಯಾಧ್ಯಕ್ಷ ಸಿ.ಎಸ್‌. ಸಾಧುನವರ ಅವರ ಮನೆಗೆ ಮುತ್ತಿಗೆ ಹಾಕಲು ಹಠ ಹಿಡಿದು ಹೋರಟಾಗ ಮಧ್ಯಪ್ರವೇಶಿಸಿದ ಪೋಲಿಸರು ತಡೆಹಿಡಿದು, ಅನುಮತಿಯಂತೆ ಉಪವಿಭಾಗಾಧಿಕಾರಿಗಳ ಕಾರ್ಯಾಲಯಕ್ಕೆ ಪ್ರತಿಭಟನಾಕಾರರನ್ನು ಮರಳಿಸಿದರು. 


ಸುದ್ದಿ ಓದಿ