ಬೆಳಗಾವಿ ಜಿಲ್ಲೆಯನ್ನು ವಿಭಜಿಸುವುದಾದಲ್ಲಿ ಬೈಲಹೊಂಗಲ ಜಿಲ್ಲೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಬೈಲಹೊಂಗಲ 13: ರಾಜ್ಯ ಸರಕಾರ ಬೆಳಗಾವಿ ಜಿಲ್ಲೆ ವಿಭಜನೆ ವಿಷಯ ಕೈಬಿಟ್ಟು ಜಿಲ್ಲೆಯ ಅಖಂಡತೆಯನ್ನು ಕಾಯ್ದುಕೊಂಡು ಹೋಗಬೇಕು. ಆಡಳಿತಾತ್ಮಕ ದೃಷ್ಟಿಯಿಂದ ಜಿಲ್ಲೆಯನ್ನು ವಿಭಜಿಸುವುದಾದಲ್ಲಿ ವೈಜ್ಞಾನಿಕವಾಗಿ ಪರೀಶೀಲಿಸಿ ಉಪವಿಭಾಗದ ಆಧಾರದ ಮೇಲೆ ಬೈಲಹೊಂಗಲವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲೆ ವಿಭಜನೆ ಹೋರಾಟ ಸಮಿತಿ ಮುಖಂಡರು ಮಂಗಳವಾರ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆ ತಡೆದು ಬೃಹತ ಪ್ರತಿಭಟನೆ ನಡೆಸಿದರು.
ಹೋರಾಟ ಸಮಿತಿ ಅಧ್ಯಕ್ಷ ಶಿವರಂಜನ ಬೋಳನ್ನವರ, ಮುಖಂಡರಾದ ಮಹಾಂತೇಶ ತುರಮರಿ, ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಬೆಳಗಾವಿ ಜಿಲ್ಲೆ ಗಂಡು ಮೆಟ್ಟಿನ ಸ್ಥಳವಾಗಿದೆ. ವೀರರಾಣಿ ಕಿತ್ತೂರ ಚನ್ನಮ್ಮ, ಬೆಳವಡಿ ಮಲ್ಲಮ್ಮ,, ಶೂರ ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ ಮುಂತಾದವರು ನಾಡಿನ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಇವರೆಲ್ಲ ಬೆಳಗಾವಿ ಜಿಲ್ಲೆಯವರು. ಬಹು ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ತಮ್ಮ ಪ್ರಾಬಲ್ಯ ರಚಿಸಿಕೊಳ್ಳಲು ಮರಾಠಿ ಮುಖಂಡರು ಪದೇ ಪದೇ ಕನ್ನಡಿಗರ ಸಹನೆ ಕೆಣಕುತ್ತ ಗಡಿ ಸಮಸ್ಯೆಯನ್ನು ಹುಟ್ಟು ಹಾಕುತ್ತಿದ್ದಾರೆ. ಇದು ಸರಕಾರಕ್ಕೂ ತಲೆನೋವಾಗಿ ಪರಿಣಮಿಸಿದೆ. ಪರಿಸ್ಥಿತಿ ಅರಿತು ಸರಕಾರ ಜಿಲ್ಲೆ ವಿಭಜನೆಗೆ ಕೈ ಹಾಕದೆ ಅಖಂಡತೆಯನ್ನು ಕಾಯ್ದುಕೊಂಡು ಹೋಗಬೇಕು. ಸುಮಾರು 30 ವರ್ಷಗಳಿಂದಲೂ ಜಿಲ್ಲೆ ಅಖಂಡೆತೆಗೆ ಹೋರಾಟ ನಡೆಸುತ್ತಾ ಬಂದಿದ್ದೆವೆ. ಸರ್ಕಾರ ಈ ನಿಟ್ಟಿನಲ್ಲಿ ಗಂಭಿರವಾಗಿ ಚರ್ಚಿಸಿ ವಿಭಜನೆ ವಿಷಯಕ್ಕೆ ಕೈ ಹಾಕಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗವುದು ಎಂದರು
ಶಾಖಾ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮಿಜಿ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಡಾ.ಮಹಾಂತೇಶ ಶಾಸ್ರ್ತಿ ಆರಾದ್ರಿಮಠ ಮಾತನಾಡಿ, ಒಂದು ವೇಳೆ ಸರಕಾರ ಆಡಳಿತಾತ್ಮಕ ದಷ್ಟಿಯಿಂದ ಜಿಲ್ಲೆಯನ್ನು ವಿಭಜಿಸಲೇ ಬೇಕಾದ ಅನಿವಾರ್ಹತೆ ಎದುರಾದರೆ, ನಿರ್ಧಾರ ಕೈಗೊಂಡಲ್ಲಿ ವೈಜ್ಞಾನಿಕವಾಗಿ ಯೋಗ್ಯವಾದ ಉಪವಿಭಾಗೀಯ ಕೇಂದ್ರವಾದ ಬೈಲಹೊಂಗಲವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕೆಂದು ಮುಖ್ಯ ಮಂತ್ರಿಗಳನ್ನು ಆಗ್ರಹಿಸಿದರು.
ಮುಖಂಡರಾದ ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ಮುರಗೇಶ ಗುಂಡ್ಲೂರ, ಮಹಾಂತೇಶ ಮತ್ತಿಕೊಪ್ಪ, ರಾಜು ಕುಡಸೋಮನ್ನವರ, ಸೋಮನಾಥ ಸೊಪ್ಪಿಮಠ, ಸುಭಾಸ ತುರಮರಿ, ವೀರುಪಾಕ್ಷ ವಾಲಿ, ವೀರುಪಯ್ಯ ಕೋರಿಮಠ, ಅರುಣ ತುರಮರಿ, ರವಿ ತುರಮರಿ, ಬಾಬುಸಾಬ ಸುತಗಟ್ಟಿ , ಅಬ್ದುಲರೆಹಮಾನ ನಂದಗಡ ಅನೇಕರು ಇದ್ದರು.