ಈದ್ಗಾ ಮೈದಾನದಲ್ಲಿ ಸಹಸ್ರಾರು ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ
ರಾಣಿಬೆನ್ನೂರ 12: ತಾಲೂಕಿನಾಧ್ಯಂತ ಅಲ್ಲಾನ ಆರಾಧನೆ ಮತ್ತು ಉಪವಾಸ ಮಾಸದ ಪ್ರತೀಕವಾದ ಪವಿತ್ರ ರಮಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ಗುರುವಾರ ಸಡಗರ ಸಂಭ್ರಮದಿಂದ ಮತ್ತು ಶ್ರದ್ಧಾ ಭಕ್ತಿಯಿಂದ ಆಚರಿಸುವ ಮೂಲಕ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಇಲ್ಲಿನ ಮಾರುತಿ ನಗರದಲ್ಲಿರುವ ಈದ್ಗಾ ಮೈದಾನದಲ್ಲಿ ಬೆಳಗ್ಗೆ 10.30ರ ಸಮಯದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಸಮಾಜ ಬಾಂಧವರು ಮೌಲ್ವಿ ಸಮ್ಮುಖದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನಗರದಲ್ಲಿ ಬೆಳಿಗ್ಗೆಯಿಂದಲೇ ಮಕ್ಕಳು ಸೇರಿದಂತೆ ಹಿರಿಯರು ಹೊಸ ಉಡುಪುಗಳನ್ನು ಧರಿಸಿ ರಮಜಾನ್ ಹಬ್ಬದಲ್ಲಿ ತೊಡಗಿದ್ದು ವಿಶೇಷವಾಗಿತ್ತು. ಇಲ್ಲಿನ ಕೋಟೆಯ ದರ್ಗಾ ಮಸೀದಿಯಿಂದ ಕಾಲ್ನಡಿಗೆಯ ಮುಖಾಂತರ 2 ಕಿಲೋ.ಮೀ ನಷ್ಟು ಅಂತರದಲ್ಲಿ ದೂರವಿರುವ ಮಾರುತಿ ನಗರದ ಈದ್ಗಾ ಮೈದಾನಕ್ಕೆ ತೆರಳಿ ಶ್ರದ್ಧಾ ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿರುವುದು ಕಂಡು ಬಂದಿತು.
ಸಹಸ್ರಾರು ಮುಸ್ಲಿಂ ಬಾಂಧವರು ಈದ್ಗಾದಲ್ಲಿ ಸುಮಾರು ಒಂದು ಗಂಟೆಯ ಕಾಲ ಸಾಮೂಹಿಕವಾಗಿ ಪ್ರಾರ್ಥನೆಗೈದರು. ಮೌಲಾನವರು ಸೇರಿದ್ದ ಮುಸ್ಲಿಂ ಬಾಂಧವರಿಗೆ ಪ್ರಾರ್ಥನೆಯನ್ನು ಬೋಧಿಸಿದರು. ವಿಶಾಲವಾದ ಮೈದಾನದಲ್ಲಿ ಕಿಕ್ಕಿರಿದು ಸೇರಿದ್ದ ಮುಸ್ಲೀಂ ಬಾಂಧವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಅಂಜುಮನ್ ಸಂಸ್ಥೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಹಾಗೂ ಸಾವಿರಾರು ಮುಸ್ಲಿಂ ಬಾಂಧವರು ಸೇರಿದಂತೆ ಹಿಂದೂ ಬಾಂಧವರು ಇದ್ದರು.