ರಾಣೆಬೆನ್ನೂರ

ತೋಟಗಾರಿಕೆ ಇಲಾಖೆ ಅಭಿವೃದ್ಧಿಗೆ ಮರಿಗೌಡರ ಕೊಡುಗೆ ಅಪಾರ: ಡಾ. ಗುರುಪ್ರಸಾದ

ತೋಟಗಾರಿಕೆ ಇಲಾಖೆ ಅಭಿವೃದ್ಧಿಗೆ ಮರಿಗೌಡರ ಕೊಡುಗೆ ಅಪಾರ: ಡಾ. ಗುರುಪ್ರಸಾದ

ರಾಣಿಬೆನ್ನೂರು 12: ಕರ್ನಾಟಕದಲ್ಲಿ ತೋಟಗಾರಿಕೆ ಕ್ರಾಂತಿಗೆ ಮರಿಗೌಡರವರು ಮುಖ್ಯ ಕಾರಣ. ಇವರಿಂದ ಕರ್ನಾಟಕ ರಾಜ್ಯವು ದೇಶದಲ್ಲಿಯೇ ತೋಟಗಾರಿಕಾ ರಾಜ್ಯವಾಗಿ ಹೊರ ಹೊಮ್ಮಲು ಸಾಧ್ಯವಾಯಿತು. ಕರ್ನಾಟಕದಲ್ಲಿ ಸಸ್ಯಕ್ಷೇತ್ರ, ಹಾಪ್‌ಕಾಮ್ಸ್‌ ಸೇರಿದಂತೆ ಒಟ್ಟಾರೆ ತೋಟಗಾರಿಕೆ ಇಲಾಖೆ ಅಭಿವೃದ್ಧಿಗೆ ಎಂ.ಎಚ್‌. ಮರಿಗೌಡರ ಅವರ ಕೊಡುಗೆ ಅಪಾರವಾದುದ್ದು ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಗುರುಪ್ರಸಾದ ಜಿ. ಎಸ್ ಹೇಳಿದರು. 

ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಕೃಷಿ ಇಲಾಖೆಯ ಆತ್ಮಾಯೋಜನೆ ಅಡಿಯಲ್ಲಿ ಈಚೆಗೆ ಕರ್ನಾಟಕ ತೋಟಗಾರಿಕೆ ಪಿತಾಮಹ ಡಾ. ಎಂ.ಎಚ್‌. ಮರಿಗೌಡರ ರವರ ಸ್ಮರರ್ಣಾಥವಾಗಿ ತೋಟಗಾರಿಕೆ ದಿನಾಚರಣೆ ಅಂಗವಾಗಿ ಗೋಡಂಬಿ ಬೇಸಾಯ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. 

ತೋಟಗಾರಿಕೆ ವಿಭಾಗದ ಪ್ರಾಧ್ಯಾಪಕ ಡಾ. ಬಾಬು ಪಿ ಅವರು ಗೋಡಂಬಿ ಬೆಳೆಯು ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಅಧಿಕ ಮೌಲ್ಯವಾಗಿದೆ. ನಮ್ಮ ದೇಶದ ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ ಗಮನಾರ್ಹ ಪಾತ್ರ ವಹಿಸುತ್ತದೆ. ಇವತ್ತು ಗೇರು ನಮ್ಮ ದೇಶದ ಪ್ರಮುಖ ವಿದೇಶಿ ವಿನಿಯಮ ಗಳಿಕೆಯಲ್ಲಿ ಒಂದಾಗಿದೆ ಎಂದರು. 

ಗೋಡಂಬಿ ಬೆಳೆಯನ್ನು ಬೆಳೆಯಲು ಹೆಚ್ಚಿನ ಫಲವತ್ತತೆ ಭೂಮಿ ಹಾಗೂ ಸಾಕಷ್ಟು ನೀರಿನ ಅವಶ್ಯಕತೆ ಇರುವುದಿಲ್ಲ. ಈ ಬೆಳೆಯು ಕಠಿಣ ಹವಾಗುಣಕ್ಕೆ ಹೊಂದಿಕೊಳ್ಳುವ ಬೆಳೆಯಾಗಿದ್ದು, ಭಾರವಾದ ಜೇಡಿಮಣ್ಣು, ನೀರು ನಿಲ್ಲುವ ಲವಣಯುಕ್ತ ಮಣ್ಣನ್ನು ಹೊರತುಪಡಿಸಿ ವಿವಿಧ ರೀತಿಯ ಶ್ರೇಣಿಯ ಮಣ್ಣಿನಲ್ಲಿ ಬೆಳೆಯಬಹುದು. ರೈತರು ಈ ಬೆಳೆಯನ್ನು ಅಳವಡಿಸಿಕೊಂಡು ಲಾಭ ಪಡೆಯಬೇಕೆಂದು ಹೇಳಿದರು. 

ತೋಟಗಾರಿಕೆ ವಿಜ್ಞಾನಿ ಡಾ. ಸಂತೋಷ್ ಹೆಚ್‌.ಎಂ. ಮಾತನಾಡಿ,  ಗೋಡಂಬಿಯ ವೆಂಗುರ್ಲಾ-3 ಮತ್ತು ವೆಂಗುರ್ಲಾ-4 ಮುಖ್ಯ ತಳಿಗಳ ಬಗ್ಗೆ ತಿಳಿಸಿದ ಅವರು, ಗೋಡಂಬಿ ಸಸಿಗಳ ನಾಟಿ ಅಂತರ, ಪೋಷಕಾಂಶಗಳ ನಿರ್ವಹಣೆ, ಚಾಟನಿ, ಮರದ ಆಕಾರದ ನಿರ್ವಹಣೆ ಮತ್ತು ಅಂತರಬೆಳೆ ಪದ್ಧತಿಗಳ ಬಗ್ಗೆ ತಿಳಿಸಿದರು. 

ವಿಜ್ಞಾನಿ ಡಾ. ಅಕ್ಷತಾ ರಾಮಣ್ಣನವರ ಮಾತನಾಡಿ, ಗೋಡಂಬಿ ಬೀಜಗಳು ಶೇಖರಣೆಯ ಸಮಯದಲ್ಲಿ ಹಾಳಾಗುವುದನ್ನು ತಡೆಯಲು ಕೊಯ್ಲು ಮಾಡಿ ಸಂಗ್ರಹಿಸಿರುವ ಗೇರು ಬೀಜಗಳ ತೇವಾಂಶವನ್ನು ಶೇ.25  ರಿಂದ ಶೇ .9 ಕ್ಕೆ ಕಡಿತಗೊಳಿಸಲು 2 ರಿಂದ 3 ದಿನಗಳವೆರೆಗ ಸೂರ್ಯನ ಬಿಸಿಲಿನಲ್ಲಿ ಒಣಗಿಸುವುದು ಅತಿ ಅವಶ್ಯಕ. ಸರಿಯಾದ ಒಣಗಿಸುವಿಕೆಯೊಂದಿಗೆ, ಗೋಡಂಬಿ ಬೀಜಗಳ ಗುಣಮಟ್ಟ ಹಾಗೂ ನಿರ್ದಿಷ್ಟವಾಗಿ ಪರಿಮಳವನ್ನು ಉಳಿಸಿಕೊಳ್ಳುತ್ತವೆ ಎಂದರು. 

ಹೆಚ್ಚಿನ ಪ್ರಮಾಣದಲ್ಲಿ ಗೇರು ಹಣ್ಣುಗಳು ಹಾಳಾಗುವುದನ್ನು ತಡೆಯಲು ಆಯಾ ಪ್ರದೇಶಕ್ಕನುಗುಣವಾಗಿ ಮೌಲ್ಯವರ್ಧಿತ ಪದಾರ್ಥಗಳಾದ ಗೋಡಂಬಿ ಹಣ್ಣಿನ ಸಿರ​‍್, ಸಪ್ ಅಥವಾ ಫೆನ್ನಿ ಇವುಗಳನ್ನು ತಯಾರಿಸಿ ಹೆಚ್ಚಿನ ಆದಾಯ ನೀರೀಕ್ಷಿಸಬಹುದು ಎಂದರು. 

ತರಬೇತಿಯಲ್ಲಿ  ಕೂನಬೇವು ಗ್ರಾಮದ ಸಾವಯವ ಕೃಷಿ ಚಂದ್ರಶೇಖರ ಪಾಟೀಲ ಹಾಗೂ 35 ಕ್ಕೂ ಹೆಚ್ಚು ರೈತರು ರೈತ ಮಹಿಳೆಯರು ಭಾಗವಹಿಸಿದ್ದರು. 


ಸುದ್ದಿ ಓದಿ