ನಿರ್ಲಕ್ಷ್ಯ ತೋರಿದ ಮಹಿಳಾ ಪಿಎಸ್ಐ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹ
ಲೋಕದರ್ಶನ ವರದಿ
ಸಿಂದಗಿ 24: ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ನಡಹಳ್ಳಿ ಗ್ರಾಮದ ಬುದ್ಧಿಮಾಂದ್ಯ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣವನ್ನು ದಾಖಲಿಸಿಕೊಳ್ಳಲು ನಿರ್ಲಕ್ಷ್ಯ ತೋರಿದ ಮಹಿಳಾ ಪಿ.ಎಸ್.ಐ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ಅಂಗವಿಕಲರ ಐಕ್ಯತಾ ವೇದಿಕೆ ಪದಾಧಿಕಾರಿಗಳು ಪಟ್ಟಣದ ತಹಶೀಲದಾರ ಕಚೇರಿಗೆ ತೆರಳಿ ತಹಶೀಲದಾರ ಅವರಿಗೆ ಮನವಿ ಸಲ್ಲಿಸಿದರು.
ತಾಳಿಕೋಟಿ ತಾಲೂಕಿನ ನಡಹಳ್ಳಿ ಗ್ರಾಮದ ಬುದ್ಧಿಮಾಂದ್ಯ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ ಕುರಿತು ದಿ.16-12-2020 ರಂದು ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಆದರೆ ಆರೋಪಿಯ ಮೇಲೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಹಾಗೂ ಘಟನೆ ನಡೆದು ನಾಲ್ಕೈದು ದಿನಗಳಾದರೂ ಸಹ ಎಫ್ಐಆರ್ ಮಾಡಲು ನಿರ್ಲಕ್ಷ್ಯ ವಹಿಸಿದ ಮಹಿಳಾ ಪಿಎಸ್ಐ ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಪ್ರಕರಣದ ಬಗ್ಗೆ ಆರೋಪಿತರ ಮೇಲೆ ಎಫ್ಐಆರ್ ಮಾಡಲು ಸಹ ನಿಷ್ಕಾಳಜಿವಹಿಸಿದ್ದಾರೆ ಮತ್ತು ಕರ್ನಾಟಕ ರಾಜ್ಯದಲ್ಲಿ ವಿಶೇಷ ಚೇತನರ ಮೇಲೆ ಆಗುವ ದೌರ್ಜನ್ಯ, ಅತ್ಯಾಚಾರ ಹೆಚ್ಚಾಗುತ್ತಿದ್ದು, ಇಂತಹ ಅತ್ಯಾಚಾರಗಳು ನಡೆಯದಂತೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಡಹಳ್ಳಿ ಗ್ರಾಮದಲ್ಲಿ ನಡೆದ ಘಟನೆಗೆ ಕಾರಣರಾದ ಆರೋಪಿತನಿಗೆ ಕಠಿಣ ಶಿಕ್ಷೆಕೊಟ್ಟು ಸಮಾಜದಲ್ಲಿ ಇಂತಹ ಪ್ರಕರಣಗಳಲ್ಲಿ ಪಾಲ್ಗೊಂಡ ಅತ್ಯಾಚಾರಿಗಳಿಗೆ ಕಠಿಣ ಕ್ರಮ ಕೈಗೊಳ್ಳಬೇಕು ಅತ್ಯಾಚಾರಕೊಳಗಾದ ಬಾಲಕಿ ಕುಟುಂಬಕ್ಕೆ ಸರಕಾರ ಕೂಡಲೇ ಪರಿಹಾರ ಒದಗಿಸಬೇಕು ಎಂದು ಕರ್ನಾಟಕ ಅಂಗವಿಕಲರ ಐಕ್ಯತಾ ವೇದಿಕೆ ಹಾಗೂ ಎಮ್.ಆರ್.ಡಬ್ಲೂ, ವಿ,ಆರ್,ಡಬ್ಲೂ, ಫ್ರೀಡಮ್ ಅಸೋಸಿಯೇಶನ್ ವಿಥ್ ಡಿಸೇಬಲ್ಟಿ, ಸಿಂದಗಿ ಸಂಘಟನೆಗಳ ಮುಖಾಂತರ ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಕರ್ನಾಟಕ ಅಂಗವಿಕಲರ ಐಕ್ಯತಾ ವೇದಿಕೆ ರಾಜಾಧ್ಯಕ್ಷೆ ಸಬಿಯಾಬೇಗಂ ಡಿ.ಮರ್ತೂರ, ವಿಠ್ಠಲ ಕರ್ಜಗಿ, ಮುತ್ತುರಾಜ ಸಾತಿಹಾಳ, ಸುನೀತಾ ಛತ್ರಿ, ವಿಜಯ ಬಜಂತ್ರಿ, ಗುಲಶನಬಿ ಬೈರೋಡಗಿ, ನೀಲಮ್ಮ ಶಂಭೇವಾಡ, ಕೌಸರ್ ಬೈರೋಡಗಿ, ರೇವಣಸಿದ್ಧ ಆಹೇರಿ, ರಾಜು ಯಡ್ರಾಮಿ, ಪಾರ್ವತಿ ಬಗಲೂರ, ವಸಂತ್ರಾಯ ಕುಲಕರ್ಣಿ ಇನ್ನಿತರರು ಇದ್ದರು.