ಮಾನವನು ಸತ್ಯ ನ್ಯಾಯ ನೀತಿಯ ದಾರಿಯಲ್ಲಿ ಸಾಗಿ: ಸದಾನಂದ ಸ್ವಾಮೀಜಿ
ರಾಣಿಬೆನ್ನೂರ:13 ಪ್ರತಿಯೊಬ್ಬ ಮಾನವನು ಸತ್ಯ, ಪ್ರಾಮಾಣಿಕ, ನ್ಯಾಯ, ನೀತಿಯ ದಾರಿಯಲ್ಲಿಯೇ ಸಾಗಿ ಉತ್ತಮ ಹೆಸರು ಮಾಡಬೇಕು. ಅದರಲ್ಲು ದಾನ ಮಾಡುವ ಗುಣ ಬಹಳ ಶ್ರೇಷ್ಠ. ಅಂತಹ ಸೇವೆಯಲ್ಲಿ ತೊಡಗಿರುವ ಮಂಜಯ್ಯ ಚಾವಡಿ ಅವರ ಅಭಿಮಾನಿಗಳ ಬಳಗವಾಗಿದೆ ಎಂದು ಸ್ಥಳೀಯ ಗುರು ಮಾರ್ಕಂಡೇಶ್ವರ ಪೀಠದ ಸದಾನಂದ ಸ್ವಾಮೀಜಿ ಹೇಳಿದರು.
ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ಸಂಗನಬಸವ ಶಾಲೆಯ ಆವರಣದಲ್ಲಿ ಶುಕ್ರವಾರ ಜೈ ಶ್ರೀ ರಾಮ್ ಎಂದೇ ಹೆಸರು ಪಡೆದಿರುವ ಮಂಜಯ್ಯ ಚಾವಡಿ ಅಭಿಮಾನಿಗಳ ಬಳಗದ ವತಿಯಿಂದ ತುಮ್ಮಿನಕಟ್ಟಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಪೌಢಶಾಲೆಯ 3500 ವಿಧ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಪ್ರತಿಭಾವಂತ ಮಕ್ಕಳಿದ್ದಾರೆ. ಅವರಿಗೆ ಹೆಚ್ಚಿನ ಸಹಕಾರ ಹಾಗೂ ಪ್ರೋತ್ಸಾಹ ಅಗತ್ಯವಿದೆ. ಮಕ್ಕಳು ಚೆನ್ನಾಗಿ ಓದುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕು. ನೀವು ಸಹ ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶ್ರೀಗಳು ಕರೆ ನೀಡಿದರು.
ಗ್ರಾಪಂ ಅಧ್ಯಕ್ಷ ಮಂಜುನಾಥ ಹೊನ್ನಾಳಿ ಮಾತನಾಡಿ, ನಮ್ಮ ವಿದ್ಯಾರ್ಥಿ ದಿನಗಳಲ್ಲಿ ವಿಧ್ಯಾಬ್ಯಾಸಕ್ಕೆ ಬಡತನ ಒಂದು ಅಡ್ಡಗೋಡೆಯಂತಿತ್ತು. ಕಿತ್ತು ತಿನ್ನುವ ಬಡತನ, ಹಸಿವು, ಬಟ್ಟೆ, ಪಠ್ಯ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು ಹಣವಿಲ್ಲದೆ ಇದ್ದರೂ ಸಹ ಓದಿನಲ್ಲಿ ಆಸಕ್ತಿಯನ್ನು ಎಂದಿಗೂ ಕಳೆದುಕೊಳ್ಳುತ್ತಿರಲಿಲ್ಲ. ವಿಧ್ಯಾರ್ಥಿ ದಿನಗಳಲ್ಲಿ ಇದ್ದ ಕಷ್ಟ ಇಂದಿನ ಮಕ್ಕಳಿಗೆ ಬಹುತೇಕ ಇಲ್ಲದಿರುವುದು ಖುಷಿ ವಿಚಾರ. ಈ ನಿಟ್ಟಿನಲ್ಲಿ ಮಕ್ಕಳು, ದಾನಿಗಳು ನೀಡಿದ ಪಠ್ಯ ಪುಸ್ತಕಗಳ ಸದುಪಯೋಗ ಪಡಿಸಿಕೊಂಡು ದೇಶವೇ ಕೊಂಡಾಡುವಂತಹ ಉತ್ತಮ ಪ್ರಜೆಯಾಗಬೇಕು ಎಂದರು.
ಬಡತನ ನಮಗೆ ಯಾವತ್ತು ಶಾಪ ಎಂದು ಕೊಳ್ಳಬಾರದು. ಆತ್ಮಸೈರ್ಯ ತುಂಬುವ ಅಸ್ತ್ರವಾಗಬೇಕು. ಬಡ ಕುಟುಂಬದ ವಿದ್ಯಾರ್ಥಿಗಳು ಇಂದಿಗೂ ಸಹ ನೋಟ್ ಪುಸ್ತಕ ಮತ್ತಿತರ ಸಲಕರಣೆಗಳನ್ನು ಕೊಂಡುಕೊಳ್ಳುವುದು ದುಸ್ತರವಾಗಿದ್ದು, ಇಂತಹ ಸಂದರ್ಭದಲ್ಲಿ ಸಮಾಜ ಸೇವಕ ಮಂಜಯ್ಯ ಚಾವಡಿ ಅವರು ಹಳ್ಳಿ ಪರಿಸರದಲ್ಲಿ ಬೆಳೆದು ಬಡ ಕುಟುಂಬದಲ್ಲಿ ಹುಟ್ಟಿ ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡಿ ಇಂದು ಹೆಮ್ಮರವಾಗಿ ಬೆಳೆದು ಎಲ್ಲರಿಗೂ ಮಾದರಿಯಾಗಿ ಬದುಕುತ್ತಿದ್ದಾರೆ. ಅವರ ಅಭಿಮಾನಿ ಬಳಗವು ಇಂದು ವಿದ್ಯಾರ್ಥಿಗಳ ವಿದ್ಯಾರ್ಜನೆಗಾಗಿ ನೋಟ್ ಪುಸ್ತಕ ವಿತರಿಸುತ್ತಿರುವುದು ಶ್ಲ್ಯಾಘನೀಯ ಎಂದರು.
ಸಂಗನಬಸವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಚಂದ್ರಶೇಖರ ಬಣಕಾರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಕೃಷ್ಣಪ್ಪ ಕಂಬಳಿ, ರಂಗಪ್ಪ ಆಡಿನವರ, ರಮೇಶ ನಾಯಕ, ಸಿಆರ್‌ಸಿಪಿ ಆರ್.ಜಿ. ಲಮಾಣಿ, ಸುರೇಶ ರಡ್ಡೇರ, ಅಶೋಕ ಚವಡಣ್ಣನವರ, ಮಂಜಯ್ಯ ತಂದೆ ತಾಯಿಗಳಾದ ಮಹೇಶ್ವರಯ್ಯ ಚಾವಡಿ, ಸಾವಿತ್ರಾ ಚಾವಡಿ, ಎಸ್‌ಡಿಎಂಸಿ ಅಧ್ಯಕ್ಷೆ ಕವಿತ ಮರಿಗೌಡ್ರ, ಶ್ರೀನಿವಾಸ ಅರಗಟ್ಟಿ, ಕೃಷ್ಣಪ್ಪ ಜಾಡರ, ಮನೋಹರ ಹುಲ್ಮನಿ, ಅಪ್ಪು ಕಲಾಲ, ಮಂಜಣ್ಣ ಕಂಬಳಿ, ಪ್ರಕಾಶ ಮರಿಗೌಡರ, ರಮೇಶ ಪಾಟೀಲ, ಪ್ರಕಾಶ ಪಾಟೀಲ, ವಿನಾಯಕ ಕಮ್ಮಾರ, ತಿಪ್ಪೇಶ ಮಡಿವಾಳರ ಸೇರಿದಂತೆ ಗ್ರಾಮಸ್ಥರು ಮತ್ತು ಶಿಕ್ಷಕರು ಸೇರಿದಂತೆ ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮಂಜಣ್ಣ ಆಡಿನವರ ಪ್ರಸ್ತಾವಿಕವಾಗಿ ಮಾಡಿದರು. ವಿಧ್ಯಾರ್ಥಿನಿಯರು ಪ್ರಾರ್ಥಿಸಿದರು. ಕವಿತಾ ಮರಿಗೌಡ್ರ ಸ್ವಾಗತಿಸಿದರು. ಷಭ್ಮುಖ ಮಧ್ಯಾಹ್ನದ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವಿನಾಯಕ ಕಮ್ಮಾರ ವಂದಿಸಿದರು.