ಇಂಡಿ

ನಿವೃತ್ತಿ ಬಳಿಕ ರೈತರಾಗಿ ಹೊರಹೊಮ್ಮಿದ ಮಲ್ಲೇಶಪ್ಪ ಬಳಬಟ್ಟಿ

ನಿವೃತ್ತಿ ಬಳಿಕ ರೈತರಾಗಿ ಹೊರಹೊಮ್ಮಿದ ಮಲ್ಲೇಶಪ್ಪ ಬಳಬಟ್ಟಿ

ರಾಜಕುಮಾರ ನಾಯ್ಕೋಡಿ 

ಇಂಡಿ: ಸರಕಾರದ ರೇಷ್ಮೆ ಇಲಾಖೆಯಲ್ಲಿ ಸುದೀರ್ಘ 28 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ನಿವೃತ್ತ ನೌಕರ ಮಲ್ಲೇಶಪ್ಪ ಬಳಬಟ್ಟಿ ತಮ್ಮ ನಿವೃತ್ತಿ ಜೀವನದಲ್ಲೂ ಸುಮ್ಮನೆ ಕೂರಬಾರದೆಂಬ ಉದ್ದೇಶದಿಂದ ಕೃಷಿಯಲ್ಲಿ ತೊಡಗಿಕೊಂಡು ಉತ್ತಮ ರೈತರಾಗಿ ಹೊರಹೊಮ್ಮಿದ್ದಾರೆ. 

ಮಲ್ಲೇಶಪ್ಪ ಬಳಬಟ್ಟಿ ಅವರು ರೇಷ್ಮೆ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಪ್ರಾರಂಭಿಸಿ ಅದೇ ಇಲಾಖೆಯಲ್ಲೇ ಖಾಯಂ ನೌಕರರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 

ಸಧ್ಯ ತಮ್ಮ ಜಮೀನಿನಲ್ಲಿ ಒಂದೂವರೆ ಎಕರೆ ದಾಳಿಂಬೆ ಬೆಳೆ ಮತ್ತು ನಾಲ್ಕು ಎಕರೆ ಕಬ್ಬು ಬಿತ್ತನೆ ಮಾಡಿ ರೈತರಾಗಿದ್ದಾರೆ. ಅವರ ಧರ್ಮಪತ್ನಿ ನಿರ್ಮಲಾ ಬಳಬಟ್ಟಿ ಅವರು ಸಹ ಪತಿಯ ಕಾರ್ಯಕ್ಕೆ ಕೈ ಜೋಡಿಸಿದ್ದು ಜಮೀನಿನಲ್ಲಿ ಕೆಲಸ   ಸಂಪೂರ್ಣ ಬೆಳೆಗಳಿಗೆ ಡ್ರಿಪ್ ಮೂಲಕ ನೀರುಣಿಸಿ ಸಮಯಕ್ಕೆ ಸರಿಯಾಗಿ ಓಷಧಿ ಸಂಪಡಣೆ ಮಾಡಿದ್ದು ಈಗ ದಾಳಿಂಬೆ ಬೆಳೆ ಕೈಗೆ ಬಂದಿದೆ. ಪ್ರಥಮ ವರ್ಷದ ಬೆಳೆಯಾದರೂ ಉತ್ತಮ ಫಸಲು ಬಂದಿದೆ. ಸಧ್ಯದ ಮಾರುಕಟ್ಟೆ ದರದಲ್ಲಿ ಮಾರಾಟ ಮಾಡಿದರೆ 3 ರಿಂದ ನಾಲ್ಕು ಲಕ್ಷ ರೂಪಾಯಿಗೆ ಮಾರಾಟವಾಗುತ್ತದೆ ಎನ್ನುತ್ತಾರೆ ಮಲ್ಲೇಶಪ್ಪ ಅವರು. 

ಜೈವಿಕ ಬಳಕೆ: 

ರಾಸಾಯನಿಕ ಮುಕ್ತ ಮಾಡುವ ಉದ್ದೇಶ ಹೊಂದಿದ ಈ ರೈತರು ಹೆಚ್ಚಿನ ಪ್ರಮಾಣದಲ್ಲಿ ಜೈವಿಕ ಗೊಬ್ಬರ ಬಳಕೆ ಮಾಡುತ್ತಿದ್ದಾರೆ. ರಾಸಾಯನಿಕ ಗೊಬ್ಬರದ ಬಳಕೆ ಸಂಪೂರ್ಣ ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಇವರ ಮಾದರಿಯನ್ನು ಇತರ ರೈತರೂ ಅಳವಡಿಸಿಕೊಳ್ಳುತ್ತಿದ್ದಾರೆ. 

ಪ್ರಸಕ್ತ ವರ್ಷ ಗಿಡ ಕಟಾವು ಮಾಡಿ ಕಾಯಿ ಹಿಡಿದ ಮೇಲೆ ಸುಮಾರು ಒಂದು ವಾರಗಳ ಕಾಲ ನಿರಂತರ ಮಳೆ ಸುರಿದಿದ್ದರಿಂದ ದಾಳಿಂಬೆಗೆ ರೋಗ ಬಂದಿದೆ. ಹೀಗಾಗಿ ಹೆಚ್ಚು ಓಷಧಿ ಸಿಂಪರಣೆ ಮಾಡಬೇಕಾಗಿ ಬಂತು. ಇಲ್ಲವಾದರೆ ಅಲ್ಪ ಖರ್ಚಿನಲ್ಲೇ ಬೆಳೆ ಬೆಳೆಯಬಹುದಿತ್ತು ಎನ್ನುತ್ತಾರೆ ಮಲ್ಲೇಶಪ್ಪ. 

ರಾಸಾಯನಿಕ ಬಳಕೆ ಮಾಡುತ್ತಿರುವುದರಿಂದ ಭೂಮಿಯಲ್ಲಿನ ಜೀವಾಣುಗಳು ಸತ್ತು ಭೂಮಿ ಸತ್ವ ಕಳೆದುಕೊಳ್ಳುತ್ತಿದೆ. ಹೀಗಾಗಿ ಭೂಮಿಗೆ ರಾಸಾಯನಿಕ ಗೊಬ್ಬರ ಬಳಕೆ ಮಾಡುವುದನ್ನು ನಿಲ್ಲಿಸಿ ಜೈವಿಕ ಗೊಬ್ಬರ ಬಳಕೆಗೆ ಆಧ್ಯತೆ ನೀಡಬೇಕಾಗಿದೆ. ಮೊದಲು ಒಂದೆರಡು ವರ್ಷ ಲಾಭ ಕಡಿಮೆ ಬಂದರೂ ಪರವಾಗಿಲ್ಲ ಆದರೆ ಮುಂದೆ ಹೆಚ್ಚಿನ ಲಾಭ ಬರುವುದಲ್ಲದೆ. ಭೂಮಿ ಫಲವತ್ತಾಗುತ್ತದೆ. ಆದ್ದರಿಂದ ರೈತರು ರಾಸಾಯನಿಕ ಬಳಕೆ ನಿಲ್ಲಿಸಬೇಕೆಂದು ಮಲ್ಲೇಶಪ್ಪ ಬಳಬಟ್ಟಿ ಮನವಿ ಮಾಡಿದರು. 

ಸುದ್ದಿ ಓದಿ