ಗೋಕಾಕ್

ಮಕ್ಕಳು ಬೆಳೆಯುವ ಗದ್ದೆಗಳಾಗಬೇಕು: ಮಹೇಶ ಕಂಬಾರ

ಮಕ್ಕಳು ಬೆಳೆಯುವ ಗದ್ದೆಗಳಾಗಬೇಕು: ಮಹೇಶ ಕಂಬಾರ

ಗೋಕಾಕ 14: ನಮ್ಮ ಮಕ್ಕಳು ದೇಸಿ ಸಂಸ್ಕೃತಿಯೊಂದಿಗೆ ಅಗತ್ಯ ಬಿದ್ದರೆ ಅಲಂಕಾರಕ್ಕೆ ಪಾಶ್ಚಾತ್ಯ ಸಂಸ್ಕೃತಿ ಬೆರೆಸಿಕೊಂಡರೂ ಬೆಳೆ ಬೆಳೆಯುವ ಗದ್ದೆಗಳಾಗಬೇಕೆಂಬುದನ್ನು ಡಾ.ಸಿ.ಕೆ.ನಾವಲಗಿ ತಮ್ಮ ‘ಮಕ್ಕಳ ಸ್ಕೂಲ್ ಮನೇಲಲ್ವೆ’! ಪುಸ್ತಕದಲ್ಲಿ ಸಾಧಾಣರವಾಗಿ ವಿಶ್ಲೇಷಿಸಿದ್ದಾರೆಂದು ನಗರದ ಸರಕಾರಿ ಕಾಲೇಜಿನ ಪ್ರಾಚಾರ್ಯ ಪ್ರೊ.ಮಹೇಶ ಕಂಬಾರ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಜಾನಪದ ಪರಿಷತ್ತು ಬೆಳಗಾವಿ ಜಿಲ್ಲಾ ಸಮಿತಿ ಮತ್ತು ಸರಕಾರಿ ಪದವಿ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಂಡ ಡಾ. ಸಿ.ಕೆ.ನಾವಲಗಿ ವಿರಚಿತ ‘ಮಕ್ಕಳ ಸ್ಕೂಲ್ ಮನೇಲಲ್ವೆ’! ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಕೃತಿ ಕುರಿತು ಮಾತನಾಡಿದ ಸಾಹಿತಿ ಚಿಂತಕ ಪ್ರಕಾಶ ಗಿರಿಮಲ್ಲನವರ,  ಮಕ್ಕಳಿಗೆ ಪಾಠದ ಜತೆಗೆ ಆಟದ ಅಭಿರುಚಿ, ಸಾಹಸ ಪ್ರವೃತ್ತಿ, ಧೈರ್ಯ, ಶೌರ್ಯದ ಭಾವನೆಗಳು ಮೂಡುವ ಕವಿತೆ, ಕತೆ ಹಾಡುಗಳನ್ನು ಮನೆಯಿಂದಲೇ ಹೇಳುವುದಾಗಬೇಕೆಂಬುದನ್ನು ಕೃತಿಯಲ್ಲಿ ನಾವಲಗಿಯವರು ಮಾರ್ಮಿಕವಾಗಿ ತಿಳಿಸುವ ಪ್ರಯತ್ನ ಮಾಡಿದ್ದು ಶ್ಲಾಘನೀಯವೆಂದರು.

ಸಾಹಿತಿ ಚಿಂತಕ ಡಾ. ಸುರೇಶ ಹನಗಂಡಿಯವರು ಪಾರಿಜಾತದ ಕೊರವಂಜಿ ಸನ್ನಿವೇಶವನ್ನು ಕುರಿತು ಮಾತನಾಡಿ, ನಮ್ಮ ಅಂಗಳದಲ್ಲಿ, ನಮ್ಮ ಹಿತ್ತಲಲ್ಲಿ ಜಾನಪದದ ಹಾಡು, ಕತೆ, ಗಾದೆ, ಒಗಟು, ರಂಗಗೀತೆಗಳು, ಬಯಲಾಟಗಳು ತುಂಬಿ ತುಳುಕುತ್ತಿದ್ದು, ಅವನ್ನು ನಮ್ಮ ಯುವಕರ ಮೂಲಕ ಮುಂದುವರಿಸುವುದಾದರೆ ನಮ್ಮ ದೇಸಿ ಸಂಸ್ಕೃತಿ ಖಂಡಿತ ಉಳಿಯುತ್ತದೆಂದರು. ಜನಪದ ಸಾಹಿತ್ಯ-ಸಂಸ್ಕೃತಿ ಈಗಲೂ ಪ್ರಸ್ತುತವಾಗಲು ಅದಕ್ಕೆ ಕಾಯಕಲ್ಪ ಚಿಕಿತ್ಸೆ ಯುವ ಕಲಾವಿದರಿಂದ ಮಾತ್ರ ಸಾಧ್ಯವೆಂದು ಚಿಂತಕ ಪ್ರಾ. ಜಯಾನಂದ ಮಾದರ ತಿಳಿಸಿದರು.

ಕ್ರೀಡೆಗಳಿಂದ ದೈಹಿಕ ಆರೋಗ್ಯ ಮಾನಸಿಕ ವಿಕಾಸ ಜತೆಗೆ ಮಕ್ಕಳಲ್ಲಿ ಮಧುರ ಸಾಮರಸ್ಯ ಖಂಡಿತ ಉದಿಸುತ್ತದೆ. ಇದಕ್ಕೆ ಪೂರಕವಾಗಿ ನಾವಲಗಿ ಅವರು ಬರೆದ ಸುದೀರ್ಘ ಮಕ್ಕಳ ಕ್ರೀಡೆಗಳು ಲೇಖನ ನಿಜಕ್ಕೂ ಸಂಶೋಧನ ಆಕರ ಸಾಮಗ್ರಿಯಾಗಿದೆಯೆಂದು ಅಧ್ಯಕ್ಷ ಸ್ಥಾನದಿಂದ ಖ್ಯಾತ ವೈದ್ಯರು-ಲೇಖಕರು ಆದ ಡಾ. ಶಶಿಕಲಾ ಕಾಮೋಜಿ ಮಾತನಾಡಿದರು. ಲೇಖಕ ನಾವಲಗಿಯವರೊಂದಿಗೆ ಎಲ್ಲ ಸಾಧಕರನ್ನು ಕಜಾಪದಿಂದ ಮತ್ತು ಕಾಲೇಜಿನಿಂದ ಸತ್ಕರಿಸಲಾಯಿತು.

ಕಲಾವಿದ ಈಶ್ವರಚಂದ್ರ ಬೆಟಗೇರಿ ಕೊರವಂಜಿ ಸನ್ನಿವೇಶವನ್ನು ಸುಂದರವಾಗಿ ಪ್ರದರ್ಶಿಸಿದರು. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದರು.

ವಿನೂತಾ ನಾವಲಗಿ, ಗಿರಿಮಲ್ಲನವರ, ಪ್ರೊ. ಮಹಾದೇವ ತೇರದಾಳ, ಪ್ರೊ. ಕಲ್ಪನಾ ಪೈನಗೋಣಿ, ಪ್ರೊ. ವಿದ್ಯಾ ರಡ್ಡಿ, ಪ್ರೊ. ಸಿಗ್ಲಿ, ಪ್ರೊ. ನದಾಫ್, ಪ್ರೊ. ಲಕ್ಷೆಟ್ಟಿ ಹಾಗು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ಸಿದ್ದು ಪ್ರಾರ್ಥಿಸಿದರು, ಡಾ. ಸುನಂದಾ ಮಾದರ ಸ್ವಾಗತಿಸಿ ನಿರೂಪಿಸಿದರು. ಸುನೀಲ ಕಾಂಬಳೆ ವಂದನೆ ಸಲ್ಲಿಸಿದರು.


ಸುದ್ದಿ ಓದಿ