ವೆಬ್ನಾರ್ ಕಲಿಕೆಯ ಸದುಪಯೋಗವಾಗಲಿ
ಗುಳೇದಗುಡ್ಡ,ಜು.8: ವೆಬ್ನಾರ್ ಒಂದು ಆಧುನಿಕ ಕಲಿಕಾ ಪ್ರಕ್ರಿಯೆಯ ನೂತನ ಆಯಾಮವಾಗಿದ್ದೂ, ಅದರ ಮೂಲಕ ಅಧ್ಯಯನದ ವ್ಯಾಪ್ತಿ ವಿಸ್ತಾರಗೊಳ್ಳುತ್ತದೆ. ವಿದ್ಯಾರ್ಥಿಗಳಿಗೆ ಅದರ ಸದುಪಯೋಗವಾಗಲಿ ಎಂದು ಗುಳೇದಗುಡ್ಡದ ಪಿಇ ಟ್ರಸ್ಟಿನ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಹೇಳಿದರು.
ಗುರುವಾರ ಪಟ್ಟಣದ ಪಿಇ ಟ್ರಸ್ಟಿನ ಭಂಡಾರಿ ಮತ್ತು ರಾಠಿ ಕಾಲೇಜಿನ ಪದವಿ ಮತ್ತು ಸ್ನಾತ್‌ಕೋತ್ತರ ವಿಭಾಗಗಳ ಆಶ್ರಯದಲ್ಲಿ ಮಾಹಿತಿ ತಂತ್ರಜ್ಞಾನಕ್ಕಾಗಿ ಯು.ಎಸ್.ಕಾರ್ಪೊರೇಟ್ ವಲ್ಡ್‌ನಲ್ಲಿ ಸಾಕ್ಸ್ ಆಡಿಟ್ ಕುರಿತಾಗಿ ಐಕ್ಯೂಎಸಿ ಉಪಕ್ರಮಗಳ ವಾಣಿಜ್ಯ ಇಲಾಖೆ ವತಿಯಿಂದ ಜರುಗಿದ ಒಂದು ದಿನದ ವೆಬ್ನಾರ್ ಕಾರ್ಯಕ್ರಮದ ಗೂಗಲ್‌ಮೀಟ್‌ನಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ಇಂದಿನ ಆಧುನಿಕ ತಂತ್ರಜ್ಞಾನದ ಬೆಳವಣಿಗೆ ಸಾಕಷ್ಟು ವಿಸ್ತಾರವಾಗಿದೆ. ಅದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು.
ಸಂಸ್ಥೆಯ ಚೇರಮನ್ ಕಮಲಕಿಶೋರ ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿದರು. ಬೆಂಗಳೂರಿನ ಸೀನಿಯರ್ ಕನ್ಸಲ್ಟಂಗ್ ಎನ್. ಅಭಿಷೇಕ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಎಂ.ಕಾಂ.ವಿಭಾಗದ ಅಧ್ಯಕ್ಷ ಜುಗಲ್‌ಕಿಶೋರ ಭಟ್ಟಡ್, ಬಿ.ವಿ.ಹಣಗಿ, ವೆಬ್ನಾರ್ ಸಂಯೋಜಕ ಡಾ. ಎಂ.ಎಸ್.ಪಾಟೀಲ ಸೇರಿದಂತೆ ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
ವಿವಿಧ ಜಿಲ್ಲೆಗಳ ಸುಮಾರು 300 ಕ್ಕೂ ಹೆಚ್ಚು ಕಾಲೇಜುಗಳ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಎಂ.ಕಾಂ. ವಿದ್ಯಾರ್ಥಿಗಳು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.