ಗುಳೇಗುಡ್ಡ

ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ : ಬಹಿರಂಗ ಹರಾಜು ಪ್ರಕ್ರಿಯೆ

ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ : ಬಹಿರಂಗ ಹರಾಜು ಪ್ರಕ್ರಿಯೆ
ಪುರಸಭೆಯಲ್ಲಿ ಶುದ್ಧ ನೀರಿನ ಘಟಕಗಳ ನಿರ್ವಹಣೆಯ ಹರಾಜು ಪ್ರಕ್ರಿಯೆ ಮಂಗಳವಾರ ಪುರಸಭೆಯಲ್ಲಿ ಜರುಗಿತು.

ಗುಳೇದಗುಡ್ಡ 6: ಪಟ್ಟಣ ಪುರಸಭೆಯ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿರುವ ಶುದ್ದನೀರಿನ ಘಟಕಗಳ ನಿರ್ವಹಣೆಯ ಹರಾಜು ಪ್ರಕ್ರಿಯೆ ಪುರಸಭೆಯಲ್ಲಿ ಮಂಗಳವಾರ ಸದಸ್ಯರು ಹಾಗೂ ಗುತ್ತಿಗೆದಾರರ ಸಮ್ಮುಖದಲ್ಲಿ ಅಧ್ಯಕ್ಷೆ ಶಿಲ್ಪಾ ನಾಗರಾಜ ಹಳ್ಳಿ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 12 ಗಂಟೆಗೆ ಜರುಗಿತು.

ಹಾಜರಿದ್ದ ಗುತ್ತಿಗೆದಾರರು ಹರಾಜು ಪ್ರಕ್ರಿಯೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಹರಾಜಿನಲ್ಲಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಪುರಸಭೆ ಆರೋಗ್ಯ ಶಾಖೆಯ ಅಧಿಕಾರಿ ಶಿವಕುಮಾರ ಆಲೂರ ನಿರ್ವಹಣೆಗೆ ಸಂಬಂಧಪಟ್ಟಂತೆ ಪುರಸಭೆಯ ನಿಯಮ ಹಾಗೂ ಶರತ್ತುಗಳನ್ನು ಓದಿ ಹೇಳಿದರು. 

ನಂತರ ಹರಾಜು ಪ್ರಕ್ರಿಯೆಯಲ್ಲಿ ವಿವಿಧ ಗುತ್ತಿಗೆದಾರರು ಮಾಸಿಕ ದರಕ್ಕೆ  ಘಟಕಗಳನ್ನು ತಮ್ಮ ಸ್ವಾಧೀನ ಪಡಿಸಿಕೊಂಡರು. ಭಂಡಾರಿ ಕಾಲೇಜ ಹತ್ತಿರದ ಶುದ್ಧ ನೀರಿನ ಘಟಕ ಮಾಸಿಕ ದರ ರೂ.9200, ಸಾಲೇಶ್ವರ ಗುಡಿ ಹತ್ತಿರದ ಘಟಕ ರೂ. 1600, ಹಾದಿ ಬಸವೇಶ್ವರ ಗುಡಿ ಹತ್ತಿರ 14500, ಪುರಸಭೆ ಎದುರಿಗೆ ರೂ.8800, ಗಚ್ಚಿನಕಟ್ಟಿ ಹತ್ತಿರ ರೂ.1600 ದರಗಳಲ್ಲಿ ನಿಗದಿಯಾಯಿತು.

ಶುದ್ದ ನೀರಿನ ಘಟಕಗಳ ನಿರ್ವಹಣೆಯ ಹರಾಜು  ಮಾಡುವ ಸಂದರ್ಭದಲ್ಲಿ ಪುರಸಭೆ ಸದಸ್ಯ ಪ್ರಶಾಂತ ಜವಳಿ ಹಾಗೂ ಉಮೇಶ ಹುನಗುಂದ ಪ್ರತಿ 20 ಲೀಟರ್ ನೀರಿಗೆ ರೂ.5 ರಂತೆ ಗುತ್ತಿಗೆದಾರರು ಪಡೆಯುತ್ತಾರೆ. ಅದರ ಬದಲಿಗೆ ರೂ.2 ರೂ ಮಾಡುವಂತೆ ಮುಖ್ಯಧಿಕಾರಿಗಳಿಗೆ ಒತ್ತಾಯಿಸಿದರು. ಆದರೆ ಇನ್ನುಳಿದ ಸದಸ್ಯರು ರೂ.5 ಇರುವಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಮನೆ ಕರ ಪ್ರಸಕ್ತ ಸಾಲಿನಿಂದ ಹೆಚ್ಚಾಗಿರುವುದರಿಂದ ಹಾಗೂ ಕೋರೊನಾ ಲಾಕ್‍ಡೌನ್ ಸಂಕಟವನ್ನು ಜನ ಅನುಭವಿಸುತ್ತಿರುವುದರಿಂದ ಶುದ್ಧ ನೀರಿನ ಘಟಕಗಳಲ್ಲಿ ನೀರಿನ ದರ ರೂ.2 ಕ್ಕೆ ಇಳಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ.  

ಪುರಸಭೆ ಮುಖ್ಯಾಧಿಕಾರಿ ಚಿದಾನಂದ ಮಠಪತಿ, ಸದಸ್ಯರಾದ ವಿನೋದ ಮದ್ದಾನಿ, ಯಲ್ಲಪ್ಪ ಮನ್ನಿಕಟ್ಟಿ, ಪ್ರಶಾಂತ ಜವಳಿ, ಉಮೇಶ ಹುನಗುಂದ, ವಿಠ್ಠಲ ಕಾವಡೆ, ಮುಖಂಡ ಮುಬಾರಕ ಮಂಗಳೂರ, ಮಹಾಂತೇಶ ಲಕ್ಕುಂಡಿ ಸೇರಿದಂತೆ ಇತರರು ಇದ್ದರು.

ಹರಾಜು ನಡೆದ ಸಂದರ್ಭದಲ್ಲಿ ವೇದಿಕೆ ಮೇಲೆ ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರು ಕುಳಿತುಕೊಂಡಿದ್ದರು. ಅವರ ಜೊತೆಗೆ ಬಾರದ ಸದಸ್ಯರ ಕುಟುಂಬ ವರ್ಗದವರೂ ವೇದಿಕೆ ಮೇಲೆ ಕುಳಿತಿದ್ದರು. ಸೇರಿದ ಜನಕ್ಕೆ ಮುಜುಗುರ ಉಂಟಾಗಿ ಅವರು ಮೆಲುದನಿಯಲ್ಲಿ ಮಾತನಾಡುತ್ತಿದ್ದುದು ಕೇಳಿ ಬಂದಿತು.  ಆಯ್ಕೆಯಾದ ಸದಸ್ಯರ ಬದಲಾಗಿ ಅವರ ಕುಟುಂಬ ವರ್ಗದವರು ಅಧಿಕಾರ ಚಲಾಯಿಸುವುದು ಸಂವಿಧಾನಿಕವಾಗಿ ಎಷ್ಟೊಂದು ಸರಿ ಎಂಬುದು ಸೇರಿದ ಜನರ ಮಾತಾಗಿತ್ತು. ಇನ್ನುಮುಂದಾದರೂ ಪುರಸಭೆಯಲ್ಲಿ ಜರುಗುವ ಸಭೆಗಳಲ್ಲಿ ಜನರಿಂದ ಆಯ್ಕೆಯಾದ ಚುನಾಯಿತ ಸದಸ್ಯರೇ ವೇದಿಕೆ ಅಲಂಕರಿಸಲಿ ಎಂಬುದು ಜನರ ಅಭಿಪ್ರಾಯ.

ಸುದ್ದಿ ಓದಿ