ಭಗವಾನ ಮಹಾವೀರ ಜನ್ಮ ಜಯಂತಿ ಸರಳವಾಗಿ ಆಚರಣೆ
ಶೇಡಬಾಳ 25: ಜಿವೋ ಓರ್ ಜಿನೇ ದೋ ಹಾಗೂ ಅಹಿಂಸಾ ಪರಮೋ ಧರ್ಮ ಎಂಬ ತತ್ವಗಳನ್ನು ಜಗತ್ತಿಗೆ ಸಾರಿದ ಭಗವಾನ ಮಹಾವೀರರ 2619 ನೇ ಜನ್ಮ ಜಯಂತಿಯನ್ನು ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯ ಮಹಾವೀರ ವೃತಿ ಆಶ್ರಮದಲ್ಲಿ ಹಾಗೂ ಕಾಗವಾಡದ ಭಗವಾನ ಮಹಾವೀರ ಜೈನ ಮಂದಿರದಲ್ಲಿ ಬೆರಳೆಣಿಕೆ ಭಕ್ತರ ಸಮ್ಮುಖದಲ್ಲಿ ಸರಳವಾಗಿ ಆಚರಿಸಲಾಯಿತು.
ರವಿವಾರ ದಿ. 25 ರಂದು ಕೋವಿಡ್ 2 ನೇ ಅಲೆಯ ಹಿನ್ನಲೆಯಲ್ಲಿ ಯಾವುದೇ ಜನದಟ್ಟಣೆಗೆ ಆಸ್ಪದ ನೀಡದೇ ಸರ್ಕಾರದ ಆದೇಶದಂತೆ ಕಾಗವಾಡದ ಭಗವಾನ ಮಹಾವೀರ ಜೈನ ಮಂದಿರದಲ್ಲಿ ಹಾಗೂ ಕಾಗವಾಡ- ಮೈಶಾಳ ಗ್ರಾಮಗಳ ಮಧ್ಯೆದಲ್ಲಿರುವ ವೃತಿ ಆಶ್ರಮದ ವಾಜುಪೂಜ್ಯ ಪಂಚ ಬಾಲಯತಿ ದಿಗಂಬರ ಜೈನ ಮಂದಿರದಲ್ಲಿ ಭಗವಾನ ಮಹಾವೀರರ ಜನ್ಮ ಕಲ್ಯಾಣಕ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮ ಅಂಗವಾಗಿ ಮುಂಜಾನೆ ಭಗವಾನ ಮಹಾವೀರರಿಗೆ ಹಾಗೂ 31 ಅಡಿ ಎತ್ತರದ 1008 ಮುನಿಸುವೃತನಾಥ ಭಗವಾನರಿಗೆ ಚರಣಾಭಿಷೇಕ, ಪಂಚಾಮೃತ ಅಭಿಷೇಕ, ಜಲಾಭಿಷೇಕ, ಅಷ್ಟದೃವ್ಯಗಳ ಅಭಿಷೇಕ, ಪಲ್ಲಕ್ಕಿ ಉತ್ಸವ, ಭಗವಾನ ಮಹಾವೀರರ ಜನ್ಮ ಕಲ್ಯಾಣ ಮಹೋತ್ಸವ, ತೊಟ್ಟಿಲ ನಾಮಕರಣ ಕಾರ್ಯಕ್ರಮ, ಪೂಜಾಭಿಷೇಕ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳನ್ನು ಉಪಾಧ್ಯಾಯರಾದ ಶಾಂತಿನಾಥ ಉಪಾಧ್ಯೆಯವರು ನೆರವೇರಿಸಿದರು.
ಕಾಗವಾಡದ ಭಗವಾನ ಮಹಾವೀರ ಜೈನ ಮಂದಿರದ ಹಾಗೂ ವೃತಿ ಆಶ್ರಮದ ಅಧ್ಯಕ್ಷರಾದ ನ್ಯಾಯವಾದಿ ತಾತ್ಯಾಸಾಬ ದೋತರೆ ಮಾತನಾಡಿ "ಅಹಿಂಸಾ ಪರಮೋ ಧಮಃರ್" - ಅಹಿಂಸೆಯೇ ಮೂಲಮಂತ್ರವಾದ ಜೈನಧರ್ಮ ತ್ಯಾಗಪ್ರಧಾನವಾದ ಧರ್ಮ. ಪ್ರಥಮ ತೀಥಂರ್ಕರರಾದ ಭಗವಾನ್ ಋಷಭದೇವರಿಂದ ಪ್ರಾರಂಭವಾಗಿ ಭಗವಾನ್ ಮಹಾವೀರರವರೆಗೆ, ಭಗವಾನ್ ಮಹಾವೀರರಿಂದ ಹಿಡಿದು ಇಂದಿನ ದಿಗಂಬರ-ಶ್ವೇತಾಂಬರ ರವರೆಗೆ ಪ್ರಾಚೀನ ಧರ್ಮವು ಸರ್ವದಾ ತ್ಯಾಗ, ವೈರಾಗ್ಯ, ತಪಸ್ಸು ಇವುಗಳಿಗೆ ಮಹತ್ವ ನೀಡಿದೆ. ಭಗವಾನ ಮಹಾವೀರರು ಬೋಧಿಸಿದ ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಪುಣ್ಯ ಪ್ರಾಪ್ತಿ ಮಾಡಿಕೊಳ್ಳುವಂತೆ ಕರೆ ನೀಡಿದರು.
ಭಗವಾನ ಮಹಾವೀರ ಜೈನ ಮಂದಿರ ಹಾಗೂ ವೃತಿ ಆಶ್ರಮದ ಅಧ್ಯಕ್ಷ ನ್ಯಾಯವಾದಿ ತಾತ್ಯಾಸಾಬ ದೋತರೆ, ಅಣ್ಣಾಸಾಬ ಮಾಲಗಾಂವೆ, ಅಪ್ಪಾಸಾಬ ಗೋಬಾಜೆ, ಕಾಕಾಸಾಬ ಚೌಗಲೆ, ಪ್ರಣವ ಪಾಟೀಲ, ಬಂಟಿ ಭೈಯಾ, ಕಾಗವಾಡದ ಸುಧೀರ ಹುದ್ದಾರ, ರಾಜು ಖೋತ, ಅಪ್ಪಾಸಾಬ ಗೋಬಾಜೆ, ಗೊಟು ಚೌಗಲೆ, ಜಿನೇಂದ್ರ ಕರವ, ಸಚೀನ ಉಗಾರೆ, ವಿಜಯ ಕಿನಂಗೆ ಸೇರಿದಂತೆ ಅನೇಕ ಶ್ರಾವಕ ಶ್ರಾವಕಿಯರು ಇದ್ದರು.