ಧಾರವಾಡ - ಹುಬ್ಬಳ್ಳಿ

ಮಹರ್ಷಿ ವಾಲ್ಮೀಕಿ ಅವರ ಜೀವನವೇ ಒಂದು ಪಾಠ: ಡಿಸಿ ದಿವ್ಯ ಪ್ರಭು

ಮಹರ್ಷಿ ವಾಲ್ಮೀಕಿ ಅವರ ಜೀವನವೇ ಒಂದು ಪಾಠ: ಡಿಸಿ ದಿವ್ಯ ಪ್ರಭು

ಧಾರವಾಡ 17: ಋಷಿ ಮಹರ್ಷಿ , ಮಹಾನ್ ತಪಸ್ವಿ ಮಹರ್ಷಿ ವಾಲ್ಮೀಕಿ ಅವರ ಜೀವನವೇ ಒಂದು ಪಾಠ. ಅವರು ರಾಮಾಯಣ ಮಹಾಕಾವ್ಯವನ್ನು ರಚಿಸುವ ಮೂಲಕ ಪ್ರತಿಯೊಬ್ಬರು ಜೀವನದಲ್ಲಿ ಎದುರಿಸುವ ಪ್ರಸಂಗಗಳನ್ನು ಪಾತ್ರಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ನಿತ್ಯವೂ ಸತ್ಯವಾಗಿರುವ ಜೀವನ ಮೌಲ್ಯಗಳ ಸಂದೇಶಗಳನ್ನು ಮಹಾಕಾವ್ಯದ ಮೂಲಕ ಸಮಾಜಕ್ಕೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.  

ಅವರು ಇಂದು ಬೆಳಿಗ್ಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮಹಾನಗರಪಾಲಿಕೆ ಮತ್ತು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.  

ತಪ್ಪು ಮಾಡುವುದು ಸಹಜ; ಆದರೆ ಅದರ ಅರಿವು ಮೂಡಿದಾಗ ತಿದ್ದುಕೊಂಡು ಮತ್ತೇ ತಪ್ಪದಂತೆ ಜೀವನದಲ್ಲಿ ಮುನ್ನಡೆಯಬೇಕು. ಮಹರ್ಷಿ ವಾಲ್ಮೀಕಿ ಅವರ ಜೀವನವನ್ನು ನಾವು ಅವಲೋಕಿಸಿದಾಗ ಇದೇ ಸತ್ಯ ತಿಳಿದು ಬರುತ್ತದೆ. ಒಬ್ಬ ಬೇಟೆಗಾರ ವೃತ್ತಿಯ ವ್ಯಕ್ತಿ ಸತ್ಯದ ಅರಿವಾದಾಗ, ಒಂದು ಮಹಾಕಾವ್ಯವನ್ನು ಬರೆದು, ಮನುಕುಲಕ್ಕೆ ಮಾರ್ಗದರ್ಶಕನಾದ ಮತ್ತು ಋಷಿ ಮಹರ್ಷಿ ಎಂದು ಪ್ರಸಿದ್ಧಿ ಗಳಿಸಿದ ಎಂದು ಅವರು ತಿಳಿಸಿದರು. ವಾಲ್ಮೀಕಿ ಅವರು, ರಾಮಾಯಣವನ್ನು ಕಾವ್ಯರೂಪದಲ್ಲಿ ರಚಿಸಿದ್ದಾರೆ. ಜೀವನಕ್ಕಿಂತ ಯಾವುದು ದೊಡ್ಡದಿಲ್ಲ. ಕೆಟ್ಟದನ್ನು ಮರೆತು ಒಳ್ಳೆಯದನ್ನು ಜೀವನದಲ್ಲಿ ಯಾವಾಗಲೂ ಅಳವಡಿಸಿಕೊಳ್ಳಬೇಕು ಎಂಬುದು ರಾಮಾಯಣ ಮಹಾಕಾವ್ಯದ ತಾತ್ಪರ್ಯವಾಗಿದೆ. ಸಾವಿರಾರು ಶ್ಲೋಕಗಳಿರುವ ಈ ಮಹಾಕಾವ್ಯ ರಚಿಸಿ, ಮಹರ್ಷಿ ವಾಲ್ಮೀಕಿ ಅವರು ಸಮಾಜ ಮಾರ್ಗದರ್ಶಿ ಆದರು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.  

ವಾಲ್ಮೀಕಿ ಅವರ ನೀತಿ ಪಾಠಗಳು ಉತ್ತಮ ಬದುಕು ರೂಪಿಸಲು ಸಹಕಾರಿಯಾಗಿವೆ. ಸಮುದಾಯ ಮತ್ತು ವ್ಯಕ್ತಿಯ ಸಮಗ್ರ ಅಭಿವೃದ್ಧಿಗೆ ಶಿಕ್ಷಣವು ಅತೀ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ. ಸರಕಾರವು ಪರಿಶಿಷ್ಟರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳುವುದರ ಮೂಲಕ ಎಲ್ಲರೂ ಶಿಕ್ಷಿತರಾಗಬೇಕು. ಸರಕಾರ ಉಚಿತ ಶಿಕ್ಷಣ, ವಸತಿನಿಲಯಗಳ ಸೌಲಭ್ಯ ನೀಡಿದೆ. ಇವುಗಳನ್ನು ಸಮರ​‍್ಕವಾಗಿ ಬಳಸಿಕೊಂಡು, ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.  

ಮಹರ್ಷಿ ವಾಲ್ಮೀಕಿ ಸಂಘದ ಜಿಲ್ಲಾಧ್ಯಕ್ಷ ಮನೋಹರ ಗುಡಸಲಮನಿ, ಚಂದ್ರಶೇಖರ ಜುಟ್ಟಲ, ಸುರೇಶ ಗುಂಡನವರ ಅವರು ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಂಪನ್ಮೂಲ ಶಿಕ್ಷಕರಾದ ಶಿವಾನಂದ ಇಟಗಿ ಅವರು ಮಹರ್ಷಿ ವಾಲ್ಮೀಕಿ ಜೀವನ, ಆರ್ದಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಾಧಕರಿಗೆ ಸನ್ಮಾನ: ಮಹರ್ಷಿ ವಾಲ್ಮೀಕಿ ಜಯಂತಿ ವೇದಿಕೆ ಕಾರ್ಯಕ್ರಮದಲ್ಲಿ ಎಸ್‌.ಎಸ್‌.ಎಲ್‌.ಸಿ, ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ವೇದಿಕೆಯಲ್ಲಿನ ಗಣ್ಯರು ಸತ್ಕರಿಸಿ, ಗೌರವಿಸಿದರು. ಶಾಲಾ ವಿದ್ಯಾರ್ಥಿಗಳು ಮಹಾಕಾವ್ಯದ ಪ್ರಸಂಗವನ್ನು ದೊಡ್ಡಾಟದ ಮೂಲಕ ಪ್ರಸ್ತುತ ಪಡಿಸಿದರು.  

ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಜಿಲ್ಲಾ ಪೊಲೀಸ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ, ತಹಶಿಲ್ದಾರ ಡಿ.ಎಚ್‌.ಹೂಗಾರ, ಡಿಡಿಪಿಐ ಎಸ್‌.ಎಸ್‌.ಕೆಳದಿಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು, ಸಫಾಯಿ ಕರ್ಮಚಾರಿಗಳ ಜಿಲ್ಲಾ ಸಮಿತಿ ಸದಸ್ಯರು, ವಿವಿಧ ಸಮಾಜ ಮುಖಂಡರಾದ ಕಲ್ಮೇಶ ಹಾವೇರಿಪೇಟ, ಪರಮೇಶ್ವರ ಕಟ್ಟಿಮನಿ, ಲಕ್ಷ್ಮಣ ಬಕ್ಕಾಯಿ, ಫಕೀರ​‍್ಪ ಯಾದವಾಡ ಸೇರಿದಂತೆ ವಾಲ್ಮೀಕಿ ಸಮಾಜದ ಮುಖಂಡರು ವೇದಿಕೆಯಲ್ಲಿದ್ದರು. ಗಣ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.  

ಆನಂದ ಹಿರೆಲಿಂಗಪ್ಪನವರ ಅತಿಥಿಗಳನ್ನು ಸ್ವಾಗತಿಸಿದರು. ಪ್ರವೀಣ ಮಸಾಗಿ ಕಾರ್ಯಕ್ರಮ ನಿರೂಪಿಸಿದರು. ತಾಲೂಕಾ ಸಹಾಯಕ ನಿರ್ದೇಶಕಿ ಎಂ.ಬಿ.ಸಣ್ಣೇರ ಅವರು ವಂದಿಸಿದರು.  

ಮಹರ್ಷಿ ವಾಲ್ಮೀಕಿ ಭಾವಚಿತ್ರದ ಭವ್ಯ ಮೆರವಣಿಗೆ: ಮಹರ್ಷಿ ವಾಲ್ಮಿಕಿ ಜಯಂತಿ ಪ್ರಯುಕ್ತ ಇಂದು ಬೆಳಿಗ್ಗೆ ಜರುಗಿದ ಮೆರವಣಿಗೆಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು. ಮಹರ್ಷಿ ವಾಲ್ಮಿಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಹಾಗೂ ಗೌರವ ಸಮರೆ​‍್ಣ ಸಲ್ಲಿಸುವ ಮೂಲಕ ಪ್ರಾರಂಭವಾದ ಮೆರವಣಿಗೆಯು ಜಿಟಿಜಿಟಿ ಮಳೆಯ ನಡುವೆಯೂ ಅದ್ದೂರಿಯಾಗಿ, ಉತ್ಸಹದಿಂದ ನಗರದ ಪ್ರಮುಖ ಬಡಾವಣೆ ಮತ್ತು ರಸ್ತೆಗಳಲ್ಲಿ ಸಂಚರಿಸಿ, ಆಲೂರು ವೇಂಕಟರಾವ್ ವೃತ್ತದ ಮೂಲಕ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಾಂಗಣಕ್ಕೆ ಬಂದು ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ಪೂರ್ಣ ಕುಂಬ ಹೊತ್ತ ಮಹಿಳೆಯರು ಹಾಗೂ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. 


ಸುದ್ದಿ ಓದಿ