ಮಹಾರಾಷ್ಟ್ರದಿಂದ ಕಳ್ಳ ಮಾರ್ಗದ ಪ್ರವೇಶಕ್ಕೆ ದಿಗ್ಬಂಧನ
ಸಂಪರ್ಕ ರಸ್ತೆಯಲ್ಲಿ ಆಳೆತ್ತರದ ಗುಂಡಿ: ಮಣ್ಣಿನ ಗುಡ್ಡೆ
ಶೇಡಬಾಳ 22: ನೆರೆಯ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರ ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೇ ಅತೀ ವೇಗವಾಗಿ ಸೋಂಕು ಹರಡಿರುವದರಿಂದ ಗಡಿ ಗ್ರಾಮಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಕಳ್ಳ ಮಾರ್ಗವಾಗಿ ಬರುವುದನ್ನು ತಪ್ಪಿಸಲು ಸಂಪರ್ಕ ರಸ್ತೆಯಲ್ಲಿ ಆಳೇತ್ತರದ ಗುಂಡಿಯನ್ನು ತೋಡಿ ರಸ್ತೆಯ ಮೇಲೆ ಮಣ್ಣಿನ ಗುಡ್ಡೆ ಹಾಕಿ ವಾಹನ ಸಾಗಾಟಕ್ಕೆ ದಿಗ್ಬಂಧನ ಹಾಕಿದ್ದಾರೆ.
ಜಿಲ್ಲಾಡಳಿತದ ಆದೇಶದ ಮೇರೆಗೆ ಕಾಗವಾಡ ಪಿಎಸ್‍ಐ ಹಣಮಂತ ಧರ್ಮಟ್ಟಿ, ಜುಗೂಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕಾಕಾಸಾಬ ಪಾಟೀಲ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಗ್ರಾಮಸ್ಥರು ಕೂಡಿಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆ.
ಈಗಾಗಲೇ ಮಹಾರಾಷ್ಟ್ರದಲ್ಲಿ ಸಂಪೂರ್ಣ ಲಾಕ್‍ಡೌನ್ ಆಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿ ಕೃಷ್ಣಾ ನದಿ ಹರಿದಿರುವದರಿಂದ ಆಚೆಗಿರುವ ಮಹಾರಾಷ್ಟ್ರದ ವ್ಯಾಪಾರಸ್ಥರು ನದಿ ದಾಟಿ ವ್ಯಾಪಾರ ವಹಿವಾಟು ಮಾಡಲು ಪ್ರತಿನಿತ್ಯ ನೂರಾರು ಜನರು ಬರುತ್ತಿರುವದರಿಂದ ಆತಂಕಗೊಂಡ ಜಿಲ್ಲಾಡಳಿತ ಜುಗೂಳ ಹಾಗೂ ರಾಜಾಪುರ ಮಾರ್ಗದ ಮದ್ಯೆ ಮಣ್ಣಿನ ಗುಡ್ಡೆಯನ್ನು ಹಾಕಿ ಸಂಪೂರ್ಣ ಸಾರಿಗೆ ಸಂಚಾರವನ್ನು ಕಡಿತಗೊಳಿಸಿದ್ದಾರೆ.
ಕರ್ನಾಟಕ ಹಾಗೂ ಮಹಾರಾಷ್ಟ್ರ ಎರಡು ರಾಜ್ಯಗಳನ್ನು ಸಂಪರ್ಕಿಸುವ ರಸ್ತೆಯ ಕಾಗವಾಡ ಸಾಂಗ್ಲಿ ರಾಜ್ಯ ಹೆದ್ದಾರಿಯ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟಿದ್ದು ಡಿವೈಎಸ್‍ಪಿ ಎಸ್.ವ್ಹಿ.ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ, ಆದೇಶದ ಮೇರೆಗೆ ಪಿಎಸ್‍ಐ ಹಣಮಂತ ಧರ್ಮಟ್ಟಿಯವರು ಹಗಲು ರಾತ್ರಿ ತಮ್ಮ ಸಿಬ್ಬಂದಿಯೊಂದಿಗೆ ಹೈ ಅಲರ್ಟಾಗಿ ಕಾರ್ಯ ನಿರ್ವಾಹಿಸುತ್ತಿದ್ದು, ತುರ್ತು ಚಿಕಿತ್ಸೆಗೆ ಮಾತ್ರ ಕೊವಿಡ್ ತಪಾಸನೆಗೊಳಿಸಿ ಬಿಡುತ್ತಿದ್ದಾರೆ.
ಪಕ್ಕದ ನೆರೆಯ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರ, ಇಚಲಕರಂಜಿ, ಸಾತಾರಾ, ಜಯಸಿಂಗಪುರ ಸೇರಿದಂತೆ ವಿವಿದೆಡೆಗಳಲ್ಲಿ ಊರಿಗೆ ಊರೆ ಕೊವಿಡ್ ಸೋಂಕಿಗೆ ಬಲಿಯಾಗಿರುವದರಿಂದ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ.
ನೆರೆಯ ಮಹಾರಾಷ್ಟ್ರದಲ್ಲಿ ವೇಗವಾಗಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ ಎಂದರೆ ಅದು ನಿಮ್ಮ ಮನೆ ಬಾಗಿಲಿಗೆ ಬಂದಂತೆ, ಸರ್ಕಾರ ಹಲವಾರು ರೀತಿಯ ಕ್ರಮಗಳನ್ನು ಜರುಗಿಸುತ್ತಿದೆ. ವೈದ್ಯರು,ಪೋಲಿಸರು ಹಾಗೂ ಹಿರಿಯ ಅಧಿಕಾರಿಗಳು ನಿಮ್ಮ ಸಂರಕ್ಷಣೆಯಗೋಸ್ಕರ ಹಗಲಿರುಳು ಹೋರಾಡುತ್ತಿದ್ದಾರೆ. ನೀವು ಸಾರ್ವಜನಿಕರು ಮನೆಯಿಂದ ಹೊರಗಡೆ ಬರದೆ ಮನೆಯಲ್ಲಿದ್ದು ಈ ವೈರಸ್‍ನ್ನು ಹೋಗಲಾಡಿಸಲು ಸಹಕಾರ ನೀಡಬೇಕು.
ಹಣಮಂತ ಧರ್ಮಟ್ಟಿ
ಪಿಎಸ್‍ಐ ಕಾಗವಾಡ