ದೇಶಕ್ಕೆ ಜೈನ ದಿಗಂಬರ ಮುನಿಗಳನ್ನು ಕೊಟ್ಟ ಶ್ರೇಯಸ್ಸು ಬೆಳಗಾವಿ ಜಿಲ್ಲೆಗೆ ಸಲ್ಲುತ್ತದೆ
ನ್ಯಾಯವಾದಿ ಸಂಜಯ ಕುಚನೂರೆ ಹೇಳಿಕೆ: ಕುಂತುಸಾಗರ ಮಹಾರಾಜರ ಜನ್ಮ ಜಯಂತಿ
ಕಾಗವಾಡ 06: ಇಡೀ ಭಾರತ ದೇಶಕ್ಕೆ ಜೈನ ದಿಗಂಬರ ಮುನಿಗಳನ್ನು ಕೊಟ್ಟ ಶ್ರೇಯಸ್ಸು ಬೆಳಗಾವಿ ಜಿಲ್ಲೆಗೆ ಸಲ್ಲುತ್ತದೆ. ಕೃಷ್ಣಾನದಿಯ ತಟದ ಅಕ್ಕ ಪಕ್ಕದ ಅಥಣಿ, ಚಿಕ್ಕೋಡಿ, ಹಾಗೂ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಜೈನ ವಸತಿಗಳು ಹೆಚ್ಚು ಇರುವ ಹಳ್ಳಿಗಳಲ್ಲಿ ಜೈನ ಮುನಿ ಪರಂಪರೆ ಕಂಡು ಬರುತ್ತದೆ ಎಂದು ಖ್ಯಾತ ನ್ಯಾಯವಾದಿ ಸಂಜಯ ಕುಚನೂರೆ ನುಡಿದರು.
ಶನಿವಾರ ರಂದು ಕಾಗವಾಡ ತಾಲೂಕಿನ ಐನಾಪುರ ಪಟ್ಟಣದ ಆಚಾರ್ಯ ಕುಂತುಸಾಗರ ಮಿತ್ರ ಮಂಡಳದ ವತಿಯಿಂದ ವಿಶ್ವವೃಂದ ಕುಂತುಸಾಗರ ಮಹಾರಾಜರ 128ನೇ ಜನ್ಮ ಜಯಂತಿ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಬೆಳಿಗ್ಗೆ ಧ್ವಜಾರೋಹನವನ್ನು ಸುಭಾಷ ಪಾಟೀಲ ನೆರವೇರಿಸಿದರು. ನಂತರ ಪಂಚಾಮೃತ ಅಭಿಷೇಕವನ್ನು ಸುಪ್ರಿತಾ ಪಾಟೀಲ ಹಾಗೂ ಬಾಹುಬಲಿ ಪಾಟೀಲ ದಂಪತಿಗಳಿಂದ ನೆರವೇರಿತು. ಸಾಯಂಕಾಲ ಭವ್ಯ ಮೆರವಣಿಗೆ ಜರುಗಿತು.
ಆಚಾರ್ಯ ಶಾಂತಿಸಾಗರ ಪರಂಪರೆಯನ್ನು ಉಳಿಸಿ ಬೆಳೆಸಿದ ದಿಗಂಬರ ಮುನಿಗಳಲ್ಲಿ ಅಥಣಿ ತಾಲೂಕಿನ ಐನಾಪೂರದ ಕುಂತುಸಾಗರ ಮುನಿಗಳ ಪಾತ್ರವು ಬಹು ದೊಡ್ಡದಾಗಿದೆ. ಹೆಚ್ಚು ಓದು ಬರಹ ಗೊತ್ತಿರದ ಪೂಜ್ಯರು ಉತ್ತರ ಭಾರತದಾದ್ಯಂತ ವಿಹಾರ ಮಾಡಿ ಜನರಿಗೆ ಜೈನ ಧರ್ಮ ಹಾಗೂ ತತ್ವಗಳನ್ನು ತಿಳಿ ಭಾಷೆಯಲ್ಲಿ ಬೋಧಿಸಿ ಜನರನ್ನು ಅಹಿಂಸಾ ಮಾರ್ಗದತ್ತ ನಡೆಯುವಂತೆ ಪ್ರೇರೆಪಿಸಿದ ಮಹಾನ್ ಮೇಧಾವಿಗಳು.
ಆಚಾರ್ಯ ಕುಂತುಸಾಗರ ಮಹಾರಾಜರು ಕನ್ನಡ, ಮರಾಠಿ, ಹಿಂದಿ, ಪ್ರಾಕೃತ ಭಾಷೆಗಳಲ್ಲಿ ಘನ ಪಾಂಡಿತ್ಯವನ್ನು ಸಾಧಿಸಿ ತಮ್ಮ ಅನುಭವಗಳನ್ನು ಗ್ರಂಥ ರೂಪದಲ್ಲಿ ಹಿಡಿದಿಟ್ಟಿದ್ದಾರೆ. ಹಸ್ತ ಪ್ರತಿಯಲ್ಲಿದ್ದ ಅವರ ಬಹುತೇಕ ಎಲ್ಲ ಕೃತಿಗಳನ್ನು ಕರ್ನಾಟಕ ವಿಶ್ವವಿದ್ಯಾಲಯದ ಜೈನ ವಿಭಾಗದ ವಿಶ್ರಾಂತ ಮುಖ್ಯಸ್ಥರಾಗಿರುವ ಡಾ.ಎಸ್.ಪಿ.ಪಾಟೀಲ ಅವರು ಪರಿಸ್ಕರಿಸಿ ಇದೀಗ ಸಿದ್ದಪಡಿಸಿ ಕೊಟ್ಟಿದ್ದು ಪ್ರಕಟನೆಗೊಂಡಿವೆ. ಪೂಜ್ಯ ಶ್ರೀಗಳ ವಿದ್ವತ್ವವನ್ನು ತಿಳಿದುಕೊಳ್ಳಲು ಸಹಕಾರಿಯಾಗಿವೆ ಎಂದರು.
ಆಚಾರ್ಯ ಕುಂತುಸಾಗರರು ಅಥಣಿ ತಾಲೂಕಿನ ಐನಾಪೂರದಲ್ಲಿ 1894ರಲ್ಲಿ ಸಾತಪ್ಪ, ಸರಸ್ವತಿಯರ ಪುಣ್ಯ ಉದರದಲ್ಲಿ ಜನಿಸಿದರು. ಬಾಲ್ಯದಿಂದಲೇ ದೇವರು, ಧರ್ಮ, ವೃತ, ನಿಯಮಗಳನ್ನು ಪಾಲಿಸುತ್ತ ಪೂಜೆ ಪ್ರವಚನ, ಭಜನೆಯಲ್ಲಿ ಆಸಕ್ತಿ ಹೊಂದಿದ್ದರು. 1925 ರಲ್ಲಿ ದೀಕ್ಷೆ ಪಡೆದು ದೇಶಾದ್ಯಂತ ಜೈನ ಧರ್ಮದ ಪ್ರಚಾರ ಕೈಕೊಂಡರು.
ಆಚಾರ್ಯರು ಶಾಂತಿಸಾಗರ ಚರಿತ್ರಮಂ, ಚತುವಿಂರ್ಶತಿಸ್ತುತಿ, ಬೋಧಾಮೃತ ಸಾರ, ಮೋಕ್ಷ ಮಾರ್ಗ ಪ್ರದೀಪ, ಮುನಿಕೃತ್ಯ ಸಾರ, ಶ್ರಾವಕ ಪ್ರತಿಕ್ರಮಣಸಾರ, ಸತ್ಯಾರ್ಥದರ್ಶನ, ಸರ್ವಧರ್ಮಸಾರ, ಭಾವತ್ರಯ ಫಲದರ್ಶಿಸೇರಿದಂತೆ 25 ಕ್ಕೂ ಮೀರಿ ಗ್ರಂಥಗಳನ್ನು ರಚಿಸಿದ್ದಾರೆ.
ಅಧ್ಯಕ್ಷ ಶಾಂತಿನಾಥ ಉಗಾರೆ, ಉಪಾಧ್ಯಕ್ಷ ಕುಮಾರ ಹಳಿಂಗಳಿ, ಕಾರ್ಯದರ್ಶಿ ಸಮೀರ ಕುಚನೂರೆ, ಸುನೀಲ ಶಿರಹಟ್ಟಿ, ಯಶವಂತ ಪಾಟೀಲ, ಆದಿನಾಥ ದಾನೊಳ್ಳಿ, ಅಶೋಕ ಪಾಟೀಲ, ಬಾಹುಬಲಿ ಹಲವಣ್ಣವರ, ಅಣ್ಣಪ್ಪ ಶಿರಹಟ್ಟಿ, ಪ್ರದೀಪ ಲಿಂಬಿಕಾಯಿ, ಪ್ರಶಾಂತ ಲಿಂಬಿಕಾಯಿ, ವರ್ಧಮಾನ ಶಿರಹಟ್ಟಿ, ಸಂತೋಷ ಯಲ್ಲಪ್ಪಗೋಳ, ಸುರೇಶ ಕೆಂಪವಾಡೆ, ಸುನೀಲ ಪಾಟೀಲ, ರಾವಸಾಬ ಬಾಳಿಕಾಯಿ, ಸಂತೋಷ ಪಾಟೀಲ ಸೇರಿದಂತೆ ಅನೇಕ ಶ್ರಾವಕ, ಶ್ರಾವಕಿಯರು ಪಾಲ್ಗೊಂಡಿದ್ದರು.