ರೈತರ ಸಮಸ್ಯೆಗೆ ಸ್ಪಂದಿಸಿದ ಶಾಸಕ ಶ್ರೀಮಂತ ಪಾಟೀಲ
7 ಗಂಟೆಗಳ ಕಾಲ ತ್ರಿಫೆಸ್ ವಿದ್ಯುತ್ ಪೂರೈಕೆಗೆ ಆದೇಶ
ಶೇಡಬಾಳ 02: ತಾಲೂಕಿನ ವಿವಿಧ ಗ್ರಾಮಗಳ ರೈತರ ವಿದ್ಯುತ್ತ ಸಮಸ್ಯೆಯಿಂದ ಬೆಳೆಗಳು ಹಾನಿಯಾಗುತ್ತಿದ್ದು, ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಅವರ ಸತತ ಪ್ರಯತ್ನಕ್ಕೆ ಜಯ ಸಿಕ್ಕಂತಾಗಿದ್ದು, ರೈತರಿಗೆ 7 ಗಂಟೆಯವರೆಗೆ ತ್ರಿಫೆಸ್ ವಿದ್ಯುತ್ ದೊರೆಯಲಿದೆ.
ಈ ಕುರಿತು ಉಗಾರ ಖುರ್ದ ಪುರಸಭೆಯ ಸದಸ್ಯ, ರೈತ ಮುಖಂಡ ಪ್ರಫುಲ ಥೊರೂಸೆ ಅವರ ನೇತೃತ್ವದಲ್ಲಿ ಉಗಾರ ಹೆಸ್ಕಾಂ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾದಾಗ ಇಂದಿನಿಂದ 7 ಗಂಟೆಗಳ ಕಾಲ ತ್ರಿಫೆಸ್ ವಿದ್ಯುತ್ ನೀಡಲಾಗುವುದು ಎಂದು ತಿಳಿಸಿದರು.
ಪ್ರಫೂಲ ಥೊರೂಸೆ ಮಾತನಾಡಿ, ಕಾಗವಾಡ ತಾಲೂಕಿನ ವಿವಿಧ ಗ್ರಾಮಗಳ ರೈತರಿಗೆ ವಿದ್ಯುತ್ ಸಮಸ್ಯೆ ತಲೆದೋರಿತ್ತು. ಈ ಸಮಸ್ಯೆ ಕುರಿತು ನ. 25 ರಂದು ಕಾಗವಾಡದಲ್ಲಿ ಶಾಸಕ ಶ್ರೀಮಂತ ಪಾಟೀಲ್ ಅವರಿಗೆ ರೈತ ಸಂಘದವರು ಭೇಟಿಯಾಗಿ ಸಮಸ್ಯೆ ಹೇಳಿದ್ದರು. ತಕ್ಷಣ ರೈತರ ಸಭೆ ಕರೆದು ರೈತರ ಸಮ್ಮುಖದಲ್ಲೇ ಇಂಧನ ಸಚಿವ ಸುನೀಲಕುಮಾರ ಅವರಿಗೆ ದೂರವಾಣಿ ಕರೆ ಮಾಡಿ ರೈತರಿಗಾದ ಸಮಸ್ಯೆ ಹೇಳಿದ್ದರು. ಅದಕ್ಕೆ ಸ್ಪಂದಿಸಿದ ಸಚಿವರು ಸಮಯಾವಕಾಶ ನೀಡಿ, ಎರಡು ದಿನಗಳಲ್ಲಿ ಸಮಸ್ಯೆ ಪರಿಹರಿಸುವದಾಗಿ ಭರವಸೆ ನೀಡಿದ್ದರು. ಅಷ್ಟೇ ಅಲ್ಲದೇ ಹೆಸ್ಕಾಂ ಎಂಡಿ. ಡಿ.ಭಾರತಿ ಅವರಿಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ರೈತರ ಸಮ್ಮುಖದಲ್ಲಿ ರೈತರ ಸಮಸ್ಯೆಗಳನ್ನು ಕೂಲಂಕುಷವಾಗಿ ವಿವರಿಸಿ ಇದನ್ನ ಕೂಡಲೇ ಬಗೆಹರಿಸಿ ಕ್ಷೇತ್ರದ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಸೂಚಿಸಿದ್ದರು. ಅದರಂತೆ ಗುರುವಾರದಂದು ಉಗಾರ ಖುರ್ದ ಹೆಸ್ಕಾಂ ಇಲಾಖೆಗೆ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕೆಂದು ಆದೇಶ ಬಂದಿದ್ದರಿಂದ ಇವತ್ತಿನಿಂದ ವಿದ್ಯುತ್ ಪೂರೈಕೆ ಮಾಡುವದಾಗಿ ಉಗಾರ ಖುರ್ದ ಹೆಸ್ಕಾಂ ಎಇಇ ಸಿ.ಪಿ.ಯಕ್ಕಂಚಿ ತಿಳಿಸಿದ್ದಾರೆ ಎಂದು ಹೇಳಿದರು.
ಕಾಗವಾಡ ಕ್ಷೇತ್ರದ ಗ್ರಾಮಗಳಲ್ಲಿ ಉಂಟಾಗಿದ್ದ ವಿದ್ಯುತ್ ಸಮಸ್ಯೆಯನ್ನು ಶಾಸಕ ಶ್ರೀಮಂತ ಪಾಟೀಲ್ ಅವರು ಸತತವಾಗಿ ಪ್ರಯತ್ನಿಸಿ, ಇವತ್ತು ಹೆಸ್ಕಾಂ ಅಧಿಕಾರಿಗಳಿಗೆ ದಿನಾಲೂ 6 ರಿಂದ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡುವಂತೆ ಆದೇಶ ನೀಡಲಾಗಿದೆ. ರೈತರ ಸಮಸ್ಯೆಯನ್ನು ಬಗೆಹರಿಸಿದ ಶಾಸಕರಿಗೆ ರೈತರ ಪರವಾಗಿ ಹಾಗೂ ಗ್ರಾಮಸ್ಥರ ಪರವಾಗಿ ಧನ್ಯವಾದ ಅರ್ಿಸುವದಾಗಿ ತಿಳಿಸಿದರು. ಪ್ರತಾಪ ಜತ್ರಾಟೆ, ರಾಜು ಪಾಟೀಲ್, ರವೀಂದ್ರ ರಾಜಮಾನೆ, ಅಶೋಕ ಕಾಂಬ್ಳೆ, ಪ್ರಫುಲ್ ಥೋರುಸೆ, ಮದನ ದೇಸಿಂಗೆ, ಬಾಬು ಹೊಸಮನಿ, ಗಣೇಶ ಹೇಮಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.