ನೆರೆ ಪೀಡಿತ ಗ್ರಾಮಗಳಿಗೆ ಶಾಸಕ ಶ್ರೀಮಂತ ಭೇಟಿ
ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ
ಶೇಡಬಾಳ 14: ಕಾಗವಾಡ ತಾಲೂಕಿನ ನೆರೆ ಪೀಡಿತ ಗ್ರಾಮಗಳಿಗೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಭೇಟಿ ನೀಡಿ, ಸಂತ್ರಸ್ತರ ಕುಂದು ಕೊರತೆಗಳನ್ನು ಚರ್ಚಿಸುವದರ ಜೊತೆಗೆ ನೆರೆ ಹಾವಳಿ ಎದುರಾದಾಗ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ನೆರೆ ಪೀಡಿತರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಗುರುವಾರ ದಿ. 14ರಂದು ಕಾಗವಾಡ ತಾಲೂಕಿನ ನೆರೆಪೀಡಿತ ಗ್ರಾಮಗಳಾದ ಕುಸನಾಳ ಹಾಗೂ ಮೊಳವಾಡ ಗ್ರಾಮಗಳಿಗೆ ಭೇಟಿ ನೀಡಿ ಮಾತನಾಡುತ್ತಿದ್ದರು. ಜನರು ಪ್ರವಾಹಕ್ಕೆ ಭಯಪಡುವ ಅವಶ್ಯಕತೆಯಿಲ್ಲ ಜಿಲ್ಲಾಡಳಿತ ಹಾಗೂ ಸರ್ಕಾರ ಇಪ್ಪತ್ನಾಲ್ಕು ಗಂಟೆಗಳ ಕಾಲ ನಿಮ್ಮ ಸೇವೆಗೆ ಸದಾ ಸಿದ್ದವಿದೆ ಎಂದು ನಾಗರೀಕರಿಗೆ ಭರವಸೆ ನೀಡಿದರು. ಈಗಾಗಲೇ ಎರಡು ಸಲ ಅಧಿಕಾರಿಗಳ ಜೊತೆಗೆ ಪೂರ್ವಭಾವಿ ಸಭೆ ನಡೆಸಲಾಗಿದೆ. ವೈಯಕ್ತಿಕವಾಗಿ ಆಯಾ ಗ್ರಾಮಗಳಲ್ಲಿ ಇರುವ ಸಮಸ್ಯೆಗಳನ್ನು ಆಲಿಸಲು ತಾವು ನಿಮ್ಮ ಭೇಟಿಗೆ ಬಂದಿರುವದಾಗಿ ಶ್ರೀಮಂತ ಪಾಟೀಲ್ ಅವರು ಹೇಳಿದರು.
ಕುಸನಾಳ ಮಾಜಿ ಗ್ರಾ.ಪಂ. ಅಧ್ಯಕ್ಷ ಜಯಪಾಲ ಯರಂಡೋಲೆ ಮಾತನಾಡಿ, ಗ್ರಾಮಕ್ಕೆ ನೆರೆಹಾವಳಿ ಬಂದಾಗ ಗ್ರಾಮದಿಂದ ಹೊರಗೆ ಹೋಗಲು ಒಂದು ಬೋಟನ ಅವಶ್ಯಕತೆ ಇದ್ದು, ಆದಷ್ಟು ಬೇಗನೆ ನೀಡುವಂತೆ ಶಾಸಕರಲ್ಲಿ ಮನವಿ ಮಾಡಿಕೊಂಡಾಗ ಕೂಡಲೇ ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ಆದಷ್ಟು ಬೇಗ ಬೋಟ್ ನೀಡುವಂತೆ ಹೇಳಿ, ಒಂದು ವೇಳೆ ಸರ್ಕಾರದಿಂದ ಬೊಟ್ ನೀಡಲು ವಿಳಂಬವಾದರೆ ನಾನು ನನ್ನ ಸ್ವಂತ ಖರ್ಚಿನಿಂದ ಬೋಟ್ ಖರೀದಿಸಿ ನಿಮ್ಮ ಗ್ರಾಮಕ್ಕೆ ನೀಡುವದಾಗಿ ಭರವಸೆ ನೀಡಿದರು.
ಕುಸನಾಳ-ಮೊಳವಾಡ ಗ್ರಾಮದಲ್ಲಿ ಸ್ಥಳೀಯ ಮುಖಂಡರೊಂದಿಗೆ ಕೃಷ್ಣಾ ನದಿಯಲ್ಲಿ ಬೋಟ್ ಮೂಲಕ ತೆರಳಿ ಪ್ರವಾಹ ವೀಕ್ಷಣೆ ಮಾಡಿದರು.
ಮುಖಂಡರಾದ ದಾದಾ ಪಾಟೀಲ, ರಾಜೇಂದ್ರ ಪೋತದಾರ, ಕುಸನಾಳ-ಮೊಳವಾಡ ಗ್ರಾ.ಪಂ. ಮಾಜಿ ಅಧ್ಯಕ್ಷ ಜಯಪಾಲ ಯರಂಡೋಲೆ, ಹಾಲಿ ಅಧ್ಯಕ್ಷರಾದ ದೀಪಾ ವಿಜಯ ಖನ್ನಿಕೊಡೆ, ಉಪಾಧ್ಯಕ್ಷರಾದ ನಿರ್ಮಾಲಾ ಪಾಟೀಲ್, ಸುಭಾಷ್ ಅಥಣಿ, ಅಮಿತ ಪಾಟೀಲ್, ವಿಜಯ ಖನ್ನಿಕೊಡೆ, ಚಿದಾನಂದ ಅಥಣಿ, ಸಂದೀಪ ಮಗದುಮ್, ರಾಣಿ ಗುರವ, ವಿನಯಶ್ರೀ ಮಗದುಮ್, ಪ್ರಕಾಶ ದುಗ್ಗೆ, ಸುಶೀಲ ಮಾಂಜರೆ, ಅಶೋಕ ನಾಂದಣಿ, ಭಾಸ್ಕರ ಹಳ್ಯಾಳ, ರಾಜು ಕಾಂಬ್ಳೆ, ಅಭಯ ಪಾಟೀಲ, ಪಿಂಟು ಕಾಂಬಳೆ, ನೂಡಲ್ ಅಧಿಕಾರಿಗಳಾದ ಮಲ್ಲಿಕಾರ್ಜುನ ಪಾಟೀಲ್, ಶಶಿಕಾಂತ ಪಾಟೀಲ್, ವೃತ್ತ ನೀರೀಕ್ಷಿತ ಎಸ್.ಬಿ. ಮುಲ್ಲಾ, ಪಿಡಿಓ ಯಶವಂತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.