ಸಿಂಧಗಿ

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮುಂಜಾಗ್ರತಾ ಕ್ರಮಕ್ಕೆ ಅಧಿಕಾರಿಗಳಿಗೆ ಶಾಸಕ ರಮೇಶ ಸೂಚನೆ

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮುಂಜಾಗ್ರತಾ ಕ್ರಮಕ್ಕೆ ಅಧಿಕಾರಿಗಳಿಗೆ ಶಾಸಕ ರಮೇಶ ಸೂಚನೆ


ಸಿಂದಗಿ: ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಕಾಲುವೆಗೆ ಈ ಬಾರಿ ನೀರು ಸ್ಥಗಿತಗೊಂಡಿರುವುದರಿಂದ ಬಂದಾಳ, ಬೂದಿಹಾಳ, ಓತಿಹಾಳ, ಮನ್ನಾಪೂರ, ಬ್ಯಾಕೋಡ, ಬನ್ನೆಟ್ಟಿ ಪಿ.ಎ, ಗಣಿಹಾರ, ಹಚ್ಯಾಳ, ಹಿಕ್ಕಣಗುತ್ತಿ ಗ್ರಾಮಗಳು ಒಳಗೊಂಡಂತೆ 15 ಗ್ರಾಮಗಳಿಗೆ ಮುಂಬರುವ ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಅಧಿಕಾರಿಗಳು ಎರಡು ತಿಂಗಳ ಕಾಲ ಮುಂಜಾಗ್ರತಾ ಕ್ರಮ ಕೈಕೊಳ್ಳ ಬೇಕು ಎಂದು ಶಾಸಕ ರಮೇಶ ಭೂಸನೂರ ಅಧಿಕಾರಿಗಳಿಗೆ ಸೂಚಿಸಿದರು. 

ಪಟ್ಟಣದ ತಾಲೂಕು ಪಂಚಾಯತಿ ಸಭಾಭವನದಲ್ಲಿ ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆ ಕುರಿತು ಹಮ್ಮಿಕೊಂಡ ತಾಲೂಕಿನ ಪಿಡಿಒಗಳ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ವಿವಿಧ ಹಳ್ಳಿಗಳಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ,ಗ್ರಾಮ ಪಂಚಾಯ್ತಿ ಪಿಡಿಒಗಳು ಎರಡು ತಿಂಗಳುಗಳ ಕಾಲ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಮುಂಜಾಗ್ರತಾ ಕ್ರಮ ರೂಪಿಸಬೇಕು.  ಕೊಳವೆಬಾವಿಗಳು ಕೊರೆಸಿದರೂ ನೀರು ಸಿಗದಿದ್ದರೆ ಅನಿವಾರ್ಯವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕಾಗುತ್ತದೆ ಎಂದರು. 

ತಾಲೂಕಿನ 68 ಗ್ರಾಮಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕೇವಲ 9 ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಉಳಿದ ಬಹುತೇಕ ಘಟಕಗಳಲ್ಲಿ ಯಂತ್ರಗಳ ಕಳ್ಳತನ ಆಗಿದೆ ಎನ್ನುವ ವಿಷಯ ಸಭೆಯಲ್ಲಿ ಪ್ರಸ್ತಾಪವಾಯಿತು.  

ಕೆಲವು ಹಳ್ಳಿಗಳಲ್ಲಿ ಅನುಷ್ಠಾನ ಗೊಂಡಿರುವ ಬಹು ಹಳ್ಳಿಗಳ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್‌ಗಳನ್ನು ಕತ್ತರಿಸಿ ಹಲವು ರೈತರು ತಮ್ಮ ಹೊಲಗಳಿಗೆ ನೀರುಣಿಸುತ್ತಿದ್ದಾರೆ. ಈ ಬಗ್ಗೆ 14 ಜನ ರೈತರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಎಇಇ ಭಾಗ್ಯಶ್ರೀ ಶಾಸಕರ ಗಮನಕ್ಕೆ ತಂದರು. 

‘ಈ ರೀತಿ ಅಕ್ರಮ ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ರಮೇಶ ಭೂಸನೂರ ಅವರು ತಾಲ್ಲೂಕು ಪಂಚಾಯ್ತಿ ಇಒ ಹೊಂಗಯ್ಯ ಕೆ. ಅವರಿಗೆ ಸೂಚನೆ ನೀಡಿದರು..  

ಜಲಜೀವನ ಮಿಷನ್ ಯೋಜನೆಯ ಕುಡಿಯುವ ನೀರಿನ ಕಾಮಗಾರಿಗಳು ಸಂಬಂಧಿಸಿದ ಹರಿಯಾಣದ ಸ್ಮೆಕ್ ಏಜೆನ್ಸಿ ಸಮರ​‍್ಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಏಜೆನ್ಸಿ ಬದಲಿಸುವಂತೆ ಶಾಸಕ ಭೂಸನೂರ ಅವರು ಜಿಲ್ಲಾ ಪಂಚಾಯ್ತಿ ಸಿಇಒ ದೂರವಾಣಿ ಮೂಲಕ ನಿರ್ದೇಶನ ನೀಡಿದರು. ಗೋಲಗೇರಿ ದೊಡ್ಡ ಗ್ರಾಮವಾಗಿದ್ದರೂ ಸರ್ಕಾರದ ವತಿಯಿಂದ ಒಂದೂ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಿಲ್ಲ. ಇಲ್ಲಿ ಘಟಕ ಸ್ಥಾಪನೆಗೆ ಅನುಮೋದನೆ ಕೊಡಬೇಕು ಎಂದು ಸಂಬಂಧಿಸಿದ ಇಲಾಖೆ ಎಇಇ ಅವರಿಗೆ ಸೂಚಿಸಲಾಯಿತು. ಆದರೆ, ಹೊಸ ಘಟಕಗಳ ಸ್ಥಾಪನೆಗೆ ಅನುಮತಿ ನೀಡುವುದನ್ನು ಸರ್ಕಾರ ನಿಲ್ಲಿಸಿದೆ ಎಂದು ಉತ್ತರಿಸಿದರು. 

ಗುಬ್ಬೇವಾಡ ಗ್ರಾಮದಲ್ಲಿರುವ ಕುಡಿಯುವ ನೀರಿನ ಮೇಲ್ಮಟ್ಟದ ಜಲಸಂಗ್ರಹಗಾರ ಸೋರುತ್ತಿದೆ ಎಂದು ಪಿಡಿಒ ತಿಳಿಸಿದರು. ಹಿಕ್ಕಣಗುತ್ತಿ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಬಳಗಾನೂರ ಕೆರೆಯಿಂದ 4 ಕಿ.ಮೀ ಪೈಪ್‌ಲೈನ್ ಮಾಡಿ ಸಬೇಕು ಎಂದು ಶಾಸಕರು ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದರು. 

ಗ್ರಾಮಗಳಲ್ಲಿ ದುರಸ್ತಿಗೆ ಬಂದಿರುವ ಕೈ ಪಂಪ್ ಕೊಳವೆಬಾವಿಗಳನ್ನು ಆದಷ್ಟು ಬೇಗನೆ ದುರಸ್ತಿ ಮಾಡಿಸಬೇಕು ಎಂದು ಶಾಸಕ ಭೂಸನೂರ ಪಿಡಿಒಗಳಿಗೆ ತಿಳಿಸಿದರು. ತಾಲೂಕಿನ ಪಿಡಿಓಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ