ನದಿ ತೀರದ ಗ್ರಾಮಗಳಿಗೆ ಶಾಸಕ ರಾಜು ಕಾಗೆ ಅಧಿಕಾರಿಗಳೊಂದಿಗೆ ಭೇಟಿ
ಕಾಗವಾಡ,27: ತಾಲೂಕಿನ ಕೃಷ್ಣಾ ನದಿಯ ನೀರಿನ ಮಟ್ಟದಲ್ಲಿ ಇಂದು ಶನಿವಾರ ದಿ. 27 ರಂದು ಕೂಡಾ ಏರಿಕೆ ದಾಖಲಾಗಿದ್ದು, ನದಿ ತೀರದ ಜುಗೂಳ, ಮಂಗಾವತಿ, ಶಹಾಪೂರ ಗ್ರಾಮಗಳಿಗೆ ಕಾಗವಾಡ ಶಾಸಕ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜು ಕಾಗೆ ಅಧಿಕಾರಿಗಳೊಂದಿಗೆ ಭೇಟ್ಟಿ ನೀಡಿ, ಪರಿಸ್ಥಿತಿ ಅವಲೋಕಿಸಿ, ಸ್ಥಳೀಯ ಜನರಿಗೆ ಪ್ರವಾಹ ಪರಿಸ್ಥಿತಿಯಲ್ಲಿ ಅಧಿಕಾರಿಗಳೊಂದಿಗೆ ಸಹಕರಿಸ ಬೇಕು. ಅಗತ್ಯ ಬಿದ್ದಲ್ಲಿ ಗ್ರಾಮಗಳ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಕೃಷ್ಣಾ ನದಿಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ತಾಲೂಕಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, 2005, 2019 ಮತ್ತು 2021 ಕ್ಕಿಂತ ಈಗಿನ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಗ್ರಾಮಸ್ಥರು ಭಯ ಪಡುವ ಅವಶ್ಯಕತೆ ಇರುವುದಿಲ್ಲ. ಮಹಾರಾಷ್ಟ್ರದಿಂದ ಎಷ್ಟು ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆಯೋ ಅದಕ್ಕಿಂತ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದ್ದು, ನಾಗರೀಕರು ಭಯ ಪಡುವ ಅವಶ್ಯಕತೆ ಇಲ್ಲಾ. ಒಂದು ವೇಳೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾದಲ್ಲಿ ಸರ್ಕಾರ, ಜಿಲ್ಲಾಡಳಿತದೊಂದಿಗೆ ನಾನು ಸಹ ನಿಮ್ಮ ಜೊತೆಗೆ ಇರುತ್ತನೆ. ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ಸಮಯದಲ್ಲಿ ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾಂವಿ, ತಹಶೀಲ್ದಾರ ರಾಜೇಶ ಬುರ್ಲಿ, ಬಿಇಓ ಎಂ.ಆರ್. ಮುಂಜೆ, ಕಾಗವಾಡ ಪಿಎಸ್ಐ ಎಂ.ಬಿ. ಬಿರಾದಾರ, ಪಿಎಸ್ಐ ಅಪರಾದ, ರಾಕೇಶ ಬಗಲಿ, ಜುಗೂಳ ಗ್ರಾ.ಪಂ. ಅಧ್ಯಕ್ಷ ಕಾಕಾಸಾಬ ಪಾಟೀಲ, ಮುಖಂಡರಾದ ಅಣ್ಣಾಸಾಬ ಪಾಟೀಲ, ಅನೀಲ ಕಡೋಲೆ, ಉಮೇಶ ಪಾಟೀಲ, ಅನೀಲ ಸುಂಕೆ, ವಿಜಯ ಅಗಸರ ಸೇರಿದಂತೆ ಮಂಗಾವತಿ, ಜುಗೂಳ ಗ್ರಾಮಸ್ಥರು ಉಪಸ್ಥಿತರಿದ್ದರು.