ಬರಪೀಡಿತ ಹೂವಿನಹಡಗಲಿ ಘೋಷಣೆಗೆ ಶಾಸಕ ಕೃಷ್ಣನಾಯ್ಕ ಆಗ್ರಹ
ಹೂವಿನಹಡಗಲಿ ಆ.30- ಸಕಾಲಕ್ಕೆ ಮಳೆ ಬಾರದೆ, ಮುಂಗಾರು ಬಿತ್ತನೆಯಾದ ರೈತರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಹೂವಿನಹಡಗಲಿ ತಾಲೂಕನ್ನು ಬರ ಪೀಡಿತ ಪ್ರದೇಶವನ್ನಾಗಿ ಘೋಷಣೆ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬೆಳೆ ಪರಿಹಾರ ಕೊಡಬೇಕೇಂದು ಎಂದು ಶಾಸಕ ಕೃಷ್ಣನಾಯ್ಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ತಾಲೂಕಿನಲ್ಲಿ 52000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಜೂನ್ ತಿಂಗಳಿಂದ ಆಗಷ್ಟ್ ತಿಂಗಳವರೆಗೆ ಮಳೆ ಕೊರತೆ ಆಗಿದೆ. ಇದೀಗ ನಾನಾ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿದ್ದು, ಮಳೆ ಇಲ್ಲದೇ ತೇವಾಂಶ ಕೊರತೆಯಿಂದ ಒಣಗಿವೆ ಜತೆಗೆ ತಾಲೂಕಿನಲ್ಲಿ ಶೇ.75ರಷ್ಟು ರೈತರು ಕೃಷಿಯನ್ನೆ ಅವಲಂಬಿಸಿದ್ದಾರೆ. ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಮಳೆ ಬಾರದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಸರ್ಕಾರ ರೈತರಿಗೆ ನೆರವಾಗಬೇಕು ಎಂದು ಮನವಿ ಮಾಡಿದ ಅವರು ಬರುವ ದಿನಗಳಲ್ಲಿ ದನಕರುಗಳಿಗೆ ಮೇವು ಇಲ್ಲದೆ ಪರದಾಡುವ ಸ್ಥಿತಿ ಎದುರಾಗಲಿದೆ ಕೂಡಲೇ ಸರ್ಕಾರ ಹೂವಿನಹಡಗಲಿ ಪರಪೀಡಿತ ತಾಲೂಕು ಘೋಷಣೆ ಮಾಡಬೇಕೆಂದು ಶಾಸಕರು ಆಗ್ರಹಿಸಿದ್ದಾರೆ.