ಅರಣ್ಯ ಇಲಾಖೆ ಅಧಿಕಾರಿ ಮಾಹಿತಿಗೆ ಶಾಸಕ ಬಸವರಾಜ ಶಿವಣ್ಣನವರ ಕಿಡಿ
ರಾಣಿಬೆನ್ನೂರ,30: ಪುಸ್ತಕದಲ್ಲಿ ಮಾತ್ರ ಗಿಡ ಹಚ್ಚಿದ್ದು ಇರುತ್ತದೆ. ಅಲ್ಲಿ ಗಿಡ ಇರುವುದಿಲ್ಲ. ಸುಳ್ಳು ಮಾಹಿತಿ ನೀಡಬಾರದು ಎಂದು ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ಶಿವಣ್ಣನವರ ಸಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿಗೆ ಕಿಡಿಕಾರಿ ಎಚ್ಚರಿಕೆ ನೀಡಿದರು.
ತಾಪಂ ಸಭಾಭವನದಲ್ಲಿ ಸೋಮವಾರ ಸಂಜೆ ಏರಿ್ಡಸಿದ್ದ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅರಣ್ಯ ನಾಶದಿಂದಾಗಿ ಇಂದು ಸಕಾಲಕ್ಕೆ ಮಳೆ ಬಾರದೆ ಹವಮಾನದಲ್ಲಿ ಏರುಪೇರಾಗುತ್ತಿರುವುದನ್ನು ಗಮನಿಸಿದ ಸರ್ಕಾರ ಅರಣ್ಯೀಕರಣಕ್ಕಾಗಿ ಸಾಕಷ್ಟು ಹಣ ವ್ಯಯ ಮಾಡುತ್ತಿದ್ದರೂ ಸಹ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ಸರಿ ಕಾಣದು ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಸಮಗ್ರ ಅಭಿವೃದ್ಧಿಗೆ ತಾಲೂಕ ಮಟ್ಟದ ಅಧಿಕಾರಿಗಳು ಸರ್ಕಾರದ ಜೊತೆ ಕೈಜೋಡಿಸಬೇಕು. ಅಧಿಕಾರಿಗಳು ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಗ್ರಾಮಗಳಿಗೆ ಮಾತ್ರ ಮೀಸಲಾಗದೆ, ಬ್ಯಾಡಗಿ ವಿಧಾನಸಭಾ ಕ್ಷೇತ್ರದ 26 ಹಳ್ಳಿಗಳನ್ನೂ ಸಹ ಗಣನೆಗೆ ತಗೆದುಕೊಂಡು ಕೆಲಸ ಮಾಡಲು ಶ್ರದ್ಧೆಯಿಂದ ಮುಂದಾಗಬೇಕು. ಒಂದು ವೇಳೆ ಅಧಿಕಾರಿಗಳು 26 ಹಳ್ಳಿಗಳನ್ನು ನಿರ್ಲಕ್ಷ್ಯ ವಹಿಸಿದರೆ ಸೂಕ್ತ ಕ್ರಮ ಜರುಗಿಸಬೇಕಾಗುವುದು. ಇದನ್ನು ಅರಿತು ರಾಣಿಬೆನ್ನೂರು ಮತ್ತು ಬ್ಯಾಡಗಿ ವಿಧಾನಸಭಾ ಕ್ಷೇತ್ರಗಳ ಎರಡರಲ್ಲೂ ಜನರ ಸಮಸ್ಯೆಗಳು ಹಾಗೂ ಪರಿಹಾರಕ್ಕಾಗಿ ಮುಂದಾಗಬೇಕು ಎಂದು ಸೂಚಿಸಿದರು.
ಪ್ರತಿಯೊಂದು ಇಲಾಖೆಯ ಹಾಗೂ ಪ್ರತಿಯೊಂದು ಗ್ರಾಮ ಪಂಚಾಯತಿ ಅಧಿಕಾರಿಗಳಿಂದ ಡೆಂಘ್ಯು ಹಾಗೂ ಸೊಳ್ಳೆಗಳ ನಿಯಂತ್ರಣಕ್ಕಾಗಿ ಪಾಗಿಂಗ್ ವ್ಯವಸ್ಥೆ ಹಾಗೂ ಅತಿರೃಷ್ಟಿಯಿಂದ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪೂರ್ಣ ಹಾಗೂ ಭಾಗಶಃ ಮನೆಗಳು ಬಿದ್ದಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಪ್ರಸ್ಥುತ ಮಳೆಗಾಲ ಆರಂಭವಾಗಿರುವ್ಯದರಿಂದ ಬ್ಯಾಡಗಿ ವಿಧಾನಸಭಾ ಕ್ಷೇತ್ರದ 26 ಹಳ್ಳಿಗಳಲ್ಲಿಯ ಕೆರೆಗಳನ್ನು ತುಂಬಿಸಲು ಮುಂದಾಗಬೇಕು. ಯಾವ ಯಾವ ಕೆರೆಗಳಲ್ಲಿ ಎಷ್ಟೇಷ್ಟು ಪ್ರಮಾಣದ ನೀರ ತುಂಬಿರುವ ಬಗ್ಗೆ ಮಾಹಿತಿ ಪಡೆದರು. ಆಗ ಅಧಿಕಾರಿಗಳು ನೀಡಿದ ಮಾಹಿತಿಯನ್ನು ಪರಿಗಣಿಸಿ ನಾನು ಎಲ್ಲಾ ಕೆರೆಗಳನ್ನು ಬೇಟಿ ನೀಡಿ ಪರೀಶೀಲನೆ ನಡೆಸಿದ್ದೇನೆ. ಈ ರೀತಿ ಸುಳ್ಳು ಮಾಹಿತಿ ನೀಡುವುದು ಸರಿ ಕಾಣುವುದಿಲ್ಲ. ಸುಳ್ಳು ಹೇಳುವುದನ್ನು ಬಿಟ್ಟು ಇಂದಿನಿಂದಲೇ ಕೆರೆಗಳನ್ನು ತುಂಬಿಸಲು ಮುಂದಾಗಬೇಕು. ಇದರಿಂದ ಕೊಳವೆ ಬಾವಿಗಳ ಅಂತರ್ ಜಲ ಮಟ್ಟ ಹೆಚ್ಚುವುದರ ಜೊತೆಗೆ ಬೇಸಿಗೆ ಕಾಲದಲ್ಲಿ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ದೊರಕಲು ಸಹಾಯವಾಗುತ್ತದೆ ಎಂದರು.
ಬೆನಕನಕೊಂಡ ಗ್ರಾಮದಲ್ಲಿ ಸುಮಾರು 70 ವರ್ಷಗಳಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ವಾಸ ಮಾಡುತ್ತಿದ್ದು, ಅವರಿಗೆ ನೀರು, ವಿದ್ಯುತ್, ರಸ್ತೆ, ಗಟಾರ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ನೀಡಿದರೂ ಸಹ ಅವರು ವಾಸವಾಗಿರುವ ನಿವೇಶನವನ್ನು ಅವರ ಖಾತೆ ಏಕೆ ಮಾಡಿಲ್ಲ ಎಂದು ಪಿಡಿಓ ಅವರನ್ನು ತರಾಟೆ ತಗೆದುಕೊಂಡರು. ಆಗ ಪಿಡಿಓ ಅವರು ಉತ್ತರ ನೀಡಿಲು ತಡವರಿಸಿದಾಗ ಈ ಸಮಸ್ಯೆಯನ್ನು ರಾಜಕಾರಣಿಗಳಾದ ನಾವು ಅಧಿಕಾರಿಗಳು ಜೀವಂತವಾಗಿ ಇಲ್ಲಿಯ ವರೆಗೆ ಇಟ್ಟಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ತಾಪಂ ಇಓ ಸುಮಲತಾ ಎಸ್.ಪಿ ಅವರನ್ನು ಪ್ರಶ್ನಿಸಿ ತಾಪಂ ಹೆಸರಿನಲ್ಲಿರುವ ಜಾಗೆಯನ್ನು ವಾಸವಾಗಿರುವ ನಿವಾಸಿಗಳಿಗೆ ಖಾತೆ ಮಾಡಲು ಏನು ತೊಡಕಿದೆ? ಅವರವರು ವಾಸವಾಗಿರುವ ನಿವೇಶನಗಳನ್ನು ಸರ್ವೆ ಮಾಡಿರಿ. ನಿಮ್ಮಿಂದ ಹಸ್ತಾಂತರ ಮಾಡಲು ಸಾಧ್ಯವಾಗದಿದ್ದರೆ ಜಿಲ್ಲಾ ಪಂಚಾಯತಿ ಸಿಓ ಅವರಿಗೆ ಕಳುಹಿಸಿಕೊಡಿ. ಅವರು ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಿ. ನಾನು ವಿಧಾನಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತೇನೆ. ನೀವು ತಡ ಮಾಡದೆ ಸರ್ವೆ ಕಾರ್ಯವನ್ನು ಬೇಗ ಮುಗಿಸಿ ಜಿಲ್ಲಾ ಪಂಚಾಯತಿಗೆ ಪ್ರಸ್ತಾವನೆ ಕಳುಹಿಸಬೇಕು ಎಂದು ಸೂಚನೆ ನೀಡಿದರು.
ಆರೋಗ್ಯ ಇಲಾಖೆ, ಕಂದಾಯ, ಕೃಷಿ, ತೋಟಗಾರಿಕೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಹೆಸ್ಕಾಂ, ಪಿಡಬ್ಲ್ಯೂಡಿ, ಶುದ್ದ ಕುಡಿಯುವ ನೀರು ಸರಬರಾಜು ಇಲಾಖೆ, ಪಶು ಇಲಾಖೆ, ಎಪಿಎಂಸಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಸಮಾಜಿಕ ಅರಣ್ಯ ಇಲಾಖೆ ಸೇರಿದಂತೆ 26 ಹಳ್ಳಿಗಳ ವ್ಯಾಪ್ತಿಯ ಪಿಡಿಓಗಳು ಪ್ರಗತಿ ಪರೀಶೀಲನಾ ಸಭೆಯಲ್ಲಿ ಇಲಾಖೆಯ ಪ್ರಗತಿಯ ಮಾಹಿತಿ ನೀಡಿದರು. ತಹಶೀಲ್ದಾರ ಗುರುಬಸವರಾಜ, ತಾಪಂ ಇಓ ಸುಮಲತಾ ಎಸ್.ಪಿ ಉಪಸ್ಥಿತರಿದ್ದರು.